ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಎರಡಂಕಿ ಮುಟ್ಟದ ಮಕ್ಕಳ ದಾಖಲಾತಿ; 157 ಸರ್ಕಾರಿ ಶಾಲೆಗಳ ಭವಿಷ್ಯ ಅತಂತ್ರ

Published 5 ಜುಲೈ 2024, 5:01 IST
Last Updated 5 ಜುಲೈ 2024, 5:01 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ 157 ಸರ್ಕಾರಿ ಹಿರಿಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಐದು ಶಾಲೆಗಳಲ್ಲಿ ಏಕ ವಿದ್ಯಾರ್ಥಿ ದಾಖಲಾತಿ ಇದೆ! ಹೀಗಾಗಿ ಇಂಥ ನೂರಾರು ಶಾಲೆಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಕೊರತೆ, ಕಾಯಂ ಶಿಕ್ಷಕರು, ವಿಷಯವಾರು ಶಿಕ್ಷಕರ ಕೊರತೆ ಜತೆ ನಗರ ಪ್ರದೇಶಗಳ ಖಾಸಗಿ ಶಾಲೆಗಳ ವ್ಯಾಮೋಹದಿಂದ ವರ್ಷದಿಂದ ವರ್ಷಕ್ಕೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದು, ಕೆಲ ಶಾಲೆಗಳು ಮಕ್ಕಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ. ಶೈಕ್ಷಣಿಕ ಜಿಲ್ಲೆಯು ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳನ್ನು ಒಳಗೊಂಡಿದೆ. ಶಿಕ್ಷಣ ಇಲಾಖೆ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ ಹತ್ತಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಗುರುತಿಸಿದೆ. ಇದರಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿವೆ. 

‘ಜೊಯಿಡಾ ತಾಲ್ಲೂಕಿನ ಅಣಶಿ ಸಮೀಪದ ಕೋಡುಗಲಿ, ಜಗಲಬೇಟ ಬಳಿಯ ಗೌಳಿವಾಡ, ಶಿರಸಿ ತಾಲ್ಲೂಕಿನ ತೆಪ್ಪಾರ, ಕಲ್ಲಳ್ಳಿ, ಯಲ್ಲಾಪುರ ತಾಲ್ಲೂಕಿನ ನಂದೊಳ್ಳಿ ಸಮೀಪದ ಹೆಗ್ಗುಂಬ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿ ದಾಖಲಾತಿಯಿದೆ. ಮೂರು ಶಾಲೆಗಳಲ್ಲಿ ಇಬ್ಬರು, ಎಂಟು ಶಾಲೆಗಳಲ್ಲಿ ಮೂರು, 25 ಶಾಲೆಗಳಲ್ಲಿ ತಲಾ ನಾಲ್ಕು ವಿದ್ಯಾರ್ಥಿಗಳಿದ್ದಾರೆ. 17 ಶಾಲೆಗಳಲ್ಲಿ ಐದು, 26 ಶಾಲೆಗಳಲ್ಲಿ ಆರು, 22 ಶಾಲೆಗಳಲ್ಲಿ ಏಳು, 25 ಶಾಲೆಗಳಲ್ಲಿ ಎಂಟು, 25 ಶಾಲೆಗಳಲ್ಲಿ ತಲಾ ಒಂಬತ್ತು ವಿದ್ಯಾರ್ಥಿಗಳ ದಾಖಲಾತಿಯಿದೆ’ ಎಂಬುದು ಶಿಕ್ಷಣ ಇಲಾಖೆಯ ಮಾಹಿತಿಯಾಗಿದೆ. 

ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನ ಮಾಡುವ ಚಿಂತನೆ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ. ಈಗಾಗಲೇ ಅತಿ ಕಡಿಮೆ ಮಕ್ಕಳ ದಾಖಲಾತಿಯಿರುವ ಶಾಲೆಗಳಿಂದ 5-7 ಕಿ.ಮೀ. ಅಂತರದಲ್ಲಿ ಬೇರೆ ಶಾಲೆಗಳಿದ್ದು, ಒಂದೊಮ್ಮೆ ವಿಲೀನ ಮಾಡಿದರೆ ಮೂಲ ಶಾಲೆಯ ಮಕ್ಕಳಿಗೆ ದೂರದಲ್ಲಿರುವುದರಿಂದ ಸಂಚಾರ ಸಮಸ್ಯೆ ಆಗುತ್ತದೆ. ಹಾಗಾದರೆ ಮಕ್ಕಳ ಭವಿಷ್ಯ ಏನು? ನಿತ್ಯವೂ ಕೂಲಿ ಮಾಡಲು ತೆರಳುವ ನಾವು ಮನೆ ಸಮೀಪದ ಶಾಲೆಗೆ ಮಕ್ಕಳನ್ನು ಸೇರಿಸಿದ್ದೆವು. ಶಾಲೆಯೇ ದೂರಾದರೆ ಅಲ್ಲಿ ಕಳುಹಿಸಿ ಕೊಡುವುದೇ ಸವಾಲಿನ ಕಾರ್ಯವಾಗಲಿದೆ ಎಂಬುದು ಬಹುತೇಕ ಪಾಲಕರ ಆತಂಕವಾಗಿದೆ. 

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಿದೆ. ಗ್ರಾಮೀಣ ಭಾಗದ ಜನ ಉದ್ಯೋಗಕ್ಕೆಂದು ನಗರ ಸೇರಿರುವುರಿಂದ ಹಳ್ಳಿಯಲ್ಲಿ ಜನಸಂಖ್ಯೆ ಸಹ ಕ್ಷೀಣಿಸುತ್ತಿದೆ. ಈ ಕಾರಣ ಮಕ್ಕಳ ಕೊರತೆ ಸರ್ಕಾರಿ ಶಾಲೆಗಳನ್ನು ಕಾಡುತ್ತಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳೇ ಇಲ್ಲದೇ ತಾತ್ಕಾಲಿಕವಾಗಿ ಮೂರು ಶಾಲೆಗಳು ಮುಚ್ಚಿವೆ. 

ಕಡಿಮೆ ಮಕ್ಕಳಿರುವ ಶಾಲೆಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಸಮೀಪದ ಶಾಲೆಗೆ ವಿಲೀನ ಮಾಡುವ ಸಂಬಂಧ ಚಿಂತನೆ ನಡೆಸಲಾಗಿದ್ದು ಶೀಘ್ರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು
-ಪಿ.ಬಸವರಾಜ್ಡಿ, ಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT