ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕಾಗಿ ಒಂದಾಗಿ, ಪ್ರಧಾನಿ ಮೋದಿ ಕೈ ಬಲಪಡಿಸಿ: ಸಂಸದ ಅನಂತಕುಮಾರ ಹೆಗಡೆ

Published 21 ಜನವರಿ 2024, 13:51 IST
Last Updated 21 ಜನವರಿ 2024, 13:51 IST
ಅಕ್ಷರ ಗಾತ್ರ

ಸಿದ್ದಾಪುರ: ‘ಮೂರನೇ ಬಾರಿಯೂ ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬರಬೇಕು. ಅಧಿಕಾರದ ಹಪಾಹಪಿಗಾಗಿ ಈ ಮಾತು ಹೇಳುತ್ತಿಲ್ಲ. ದೇಶದ, ಹಿಂದೂತ್ವದ ದೃಷ್ಟಿಯಿಂದ ಮೋದಿಯವರ ಆಡಳಿತ ಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

‘2014ರ ನಂತರ ಸ್ವಾಭಿಮಾನದ ಸರ್ಕಾರ ದೊರೆಯುವಂತಾಗಿದೆ. ಸ್ವಾತಂತ್ರ್ಯಾನಂತರ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷ ಜಗತ್ತಿನ ಬೇರೆ ಬೇರೆ ಶಕ್ತಿಗಳೊಂದಿಗೆ ಸೇರಿಕೊಂಡು ನಮ್ಮನ್ನು ತುಳಿಯುತ್ತಿತ್ತು. ಲಾಲ್ ಬಹದ್ದೂರ ಶಾಸ್ತ್ರಿ, ಹೋಮಿ ಜಹಾಂಗೀರ ಬಾಬಾ, ವಿಕ್ರಮ ಸಾರಾಭಾಯಿ  ಸೇರಿದಂತೆ  ಸಹಸ್ರಾರು ವಿಜ್ಞಾನಿಗಳ ಕೊಲೆ ನಡೆಯಿತು. ಎಲ್ಲವೂ ಷಡ್ಯಂತ್ರ’ ಎಂದರು.

‘ಇಂದು ಸಿದ್ದರಾಮಯ್ಯ ಗ್ಯಾರಂಟಿ ತಲುಪುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಧಾನಿಯವರ ಗ್ಯಾರಂಟಿ ತಲುಪುತ್ತಿದೆ. ಲೋಕಸಭೆ ಚುನಾವಣೆಯ ನಂತರ ಉಚಿತ ಬಸ್ ಪ್ರಯಾಣ ನಿಲ್ಲಲಿದೆ. ಕಳೆದ ಒಂದು ವರ್ಷದಲ್ಲಿ ಕರ್ನಾಟಕ ಸರ್ಕಾರ ದಿವಾಳಿಯತ್ತ ತಲುಪಿದೆ. ಶಾಸಕರಿಗೆ ಅನುದಾನದ ಹಣವಿಲ್ಲ. ನೌಕರರಿಗೆ ಸರಿಯಾಗಿ ವೇತನವಾಗುತ್ತಿಲ್ಲ. ಚುನಾವಣೆಯ ನಂತರ ಕಾಂಗ್ರೆಸ್ ಮುರಿದ ಮನೆಯಾಗಲಿದೆ’ ಎಂದರು.

‘ನಾವು ರಾಮಮಂದಿರ ಕಟ್ಟಿದ್ದೇವೆ. ಇದು ದುಡ್ಡಿದ್ದವರು ಕಟ್ಟಿದ ದೇವಾಲಯವಲ್ಲ. ನಾಡಿನ ಮೂಲೆ ಮೂಲೆಗಳಿಂದ ಹೋದ ಇಟ್ಟಿಗೆಗಳಿಂದ ನಿರ್ಮಾಣವಾಗಿದೆ. ದೇಶ ಮತ್ತು ಧರ್ಮ ನಮ್ಮ ಮೂಲಮಂತ್ರವಾಗಬೇಕು. ಬಿಜೆಪಿಯ ಗೆಲುವು ನಮ್ಮ ಗುರಿಯಾಗಬೇಕು. ಹಿಂದೆಂದಿಗಿಂತಲೂ ಅಧಿಕ ಮತದಿಂದ ಕೆನರಾ ಕ್ಷೇತ್ರದಲ್ಲಿ ದಾಖಲೆಯ ಗೆಲುವಾಗಬೇಕು. ಹೊಸ ದಾಖಲೆ ಬರೆಯೋಣ. ಎಲ್ಲ ಕಾರ್ಯಕರ್ತರೂ ಒಮ್ಮನಸ್ಸಿನಿಂದ ಪಕ್ಷಕ್ಕಾಗಿ ಒಂದಾಗಬೇಕು’ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಸ್ವಾಗತಿಸಿದರು. ರಾಜ್ಯ ಸಮಿತಿಯ ಕೆ.ಜಿ.ನಾಯ್ಕ ಹಣಜೀಬೈಲ ಪ್ರಾಸ್ತಾವಿಕ ಮಾತನಾಡಿದರು.

ಚಂದ್ರು ದೇವಾಡಿಗ, ಪಕ್ಷದ ಗುರುಪ್ರಸಾದ ಹೆಗಡೆ, ಕೃಷ್ಣಮೂರ್ತಿ ಕಡಕೇರಿ, ಪ್ರಸನ್ನ ಹೆಗಡೆ, ನಾಗರಾಜ ನಾಯ್ಕ, ಎಸ್.ಕೆ.ಮೇಸ್ತ, ರಾಮಮೂರ್ತಿ ಕನ್ನಳ್ಳಿ, ಗಜಾನನ ನಾಯ್ಕ ಇತರರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT