ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಸರ್ಕಾರ ಬದಲು; ನನೆಗುದಿಗೆ ಬಿದ್ದ ಕಾಮಗಾರಿ

Published 3 ಜೂನ್ 2023, 23:30 IST
Last Updated 3 ಜೂನ್ 2023, 23:30 IST
ಅಕ್ಷರ ಗಾತ್ರ

ಕಾರವಾರ: ವಿಧಾನಸಭೆ ಚುನಾವಣೆಗೆ ಕೆಲವು ದಿನ ಮುಂಚೆ ಜಿಲ್ಲೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಂದಿನ ಶಾಸಕರು ಪೈಪೋಟಿಗೆ ಇಳಿದವರಂತೆ ಸಲಾಕೆ, ಗುದ್ದಲಿ ಹಿಡಿದು ಓಡಾಡಿದ್ದರು. ಆದರೆ ಚಾಲನೆ ಪಡೆದ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಆರಂಭವನ್ನೇ ಪಡೆದುಕೊಂಡಿಲ್ಲ.

ಕಾರವಾರ ತಾಲ್ಲೂಕಿನಲ್ಲಿಯೇ ₹60 ಕೋಟಿಗೂ ಹೆಚ್ಚಿನ ಮೊತ್ತದ 15ಕ್ಕೂ ಹೆಚ್ಚು ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲೇ ಇವೆ. ಆದರೆ ಚುನಾವಣೆಗೆ ಮುನ್ನ ಹಲವು ಕಾಮಗಾರಿಗಳಿಗೆ ಚಾಲನೆ ನೀಡುವ ಕೆಲಸ ನಡೆದಿತ್ತು. ಈಗ ಅವು ನಡೆಯುವ ಅನುಮಾನ ಸಾರ್ವಜನಿಕ ವಲಯದಲ್ಲಿದೆ. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಇಂತದ್ದೇ ಸ್ಥಿತಿ ಇದೆ.

ಕಳೆದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಲ್ಲಿ ಕೆಲ ತಾಂತ್ರಿಕ ವ್ಯತ್ಯಾಸಗಳಿರುವ ದೂರುಗಳಿದ್ದವು. ಹೀಗಾಗಿ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದ್ದು ಜನರು ಆತಂಕಪಡುವ ಅಗತ್ಯವಿಲ್ಲ.
ಸತೀಶ ಸೈಲ್, ಕಾರವಾರ ಕ್ಷೇತ್ರದ ಶಾಸಕ

ಆರು ವರ್ಷಗಳ ಹಿಂದೆಯೇ ಆರಂಭಗೊಂಡಿದ್ದ ಉಳಗಾ–ಕೆರವಡಿ ಸೇತುವೆ ಕೆಲಸ ಅರ್ಧಕ್ಕೆ ನಿಂತಿದೆ. ಜಿಲ್ಲಾ ಕಚೇರಿ ಸಂಕೀರ್ಣ, ಆಡಳಿತ ಸೌಧ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ.

ಶಿರಸಿ: ಕುಂಟುತ್ತಾ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು

ಕಳೆದೊಂದು ವರ್ಷದಿಂದ ನಗರದ ಹಳೆ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದರೂ ಈವರೆಗೆ ನೆಲ ಹಂತದ ಕಾಮಗಾರಿಯೇ ಪೂರ್ಣಗೊಂಡಿಲ್ಲ. ನಗರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ, ವೃತ್ತಗಳ ನಿರ್ಮಾಣವೂ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದೆ.

ನಿರೀಕ್ಷಿತ ಪ್ರಗತಿ ಕಾಣದ ಕಾಮಗಾರಿಗೆ ವೇಗ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಲಾಗಿದೆ
ಭೀಮಣ್ಣ ನಾಯ್ಕ, ಶಿರಸಿ ಕ್ಷೇತ್ರದ ಶಾಸಕ

ಇಲ್ಲಿನ ಪಂಡಿತ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ನಿರೀಕ್ಷಿತ ಪ್ರಗತಿಯಾಗಿಲ್ಲ. ಪಕ್ಕದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದಲ್ಲಿ ಆಸ್ಪತ್ರೆ ನಡೆಸುವ ಅನಿವಾರ್ಯತೆಯಿದೆ. ನಗರಕ್ಕೆ ಶಾಶ್ವತ  ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡು ಪೈಪ್ ಲೈನ್ ಅಳವಡಿಕೆ ಆಗಿದೆ. ಉಳಿದಂತೆ ಓವರ್ ಹೆಡ್ ಟ್ಯಾಂಕ್ ಗಳ ನಿರ್ಮಾಣ, ನಳ ಜೋಡಣೆಯಂಥ ಕೆಲಸ ಬಾಕಿ ಇದೆ. 

ಜೊಯಿಡಾ: ಆರಂಭಗೊಳ್ಳದ ಕುಡಿಯುವ ನೀರಿನ ಕೆಲಸ

ಚುನಾವಣೆ ಘೋಷಣೆಯ ಪೂರ್ವದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ರಸ್ತೆ, ಸೇತುವೆ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಾಲ್ಲೂಕಿನಾದ್ಯಂತ ಸುಮಾರು ಐವತ್ತಕ್ಕಿಂತ ಹೆಚ್ಚಿನ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.ಆದರೆ ಅವುಗಳಲ್ಲಿ ಬಹುತೇಕ ಇನ್ನಷ್ಟೆ ಆರಂಭಗೊಳ್ಳಬೇಕಿದೆ.

ರಾಮನಗರಕ್ಕೆ ಹಾಗೂ ಅಸು ಗ್ರಾಮಕ್ಕೆ ಇಳಯೆ ದಾಬೆಯಿಂದ ಕುಡಿಯುವ ನೀರನ್ನು ಒದಗಿಸುವ ಸುಮಾರು ₹28 ಕೋಟಿ  ಹಾಗೂ ಜೊಯಿಡಾ ತಾಲ್ಲೂಕು ಕೇಂದ್ರಕ್ಕೆ ಕುಡಿಯುವ ನೀರನ್ನು ಒದಗಿಸುವ ₹3 ಕೋಟಿ ಅನುದಾನದ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ.

‘ಮಳೆಗಾಲ ಪ್ರಾರಂಭವಾಗುವುದರಿಂದ ಈಗಂತೂ ನೀರಿನ ಕಾಮಗಾರಿ ಮಾಡಲು ಆಗುವುದಿಲ್ಲ. ನೀರು ಆದಷ್ಟು ಬೇಗ ಒದಗಿಸುವ ಕೆಲಸ ನಡೆಯಲಿ’ ಎನ್ನುತ್ತಾರೆ ರಾಮನಗರ ನಿವಾಸಿ ತುಕಾರಾಮ ಗಾವಡೆ.

ಮುಂಡಗೋಡ: ಅರೆಬರೆಯಾದ ಅಲಂಕೃತ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ

ಕಳೆದ 3-4 ತಿಂಗಳ ಹಿಂದೆಯೇ ಪಟ್ಟಣದ ಜಾತ್ರೆಯ ಅಂಗವಾಗಿ ತರಾತುರಿಯಲ್ಲಿ ಅಳವಡಿಕೆಗೆ ಮುಂದಾಗಿದ್ದ ಕಾರ್ಮಿಕರು, ಯಲ್ಲಾಪುರ-ಬಂಕಾಪುರ ರಸ್ತೆಯ ಎರಡೂ ಬದಿಗೆ ಅಲಂಕೃತ ವಿದ್ಯುದ್ದೀಪಗಳನ್ನು ಅಳವಡಿಸಿದ್ದಾರೆ. ಇನ್ನೂ ಕೆಲವೆಡೆ ಕಂಬ ಅಳವಡಿಸಲು ಸಿಮೆಂಟ್‌ ಕಟ್ಟೆಯನ್ನು ಕಟ್ಟಿ ಹಾಗೆ ಬಿಟ್ಟಿದ್ದಾರೆ.

‘ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಯೋಜನೆಗೆ ಇನ್ನೂ ನಡೆದಿಲ್ಲ. ಒಂದು ವರ್ಷದಿಂದ ಕುಂಟುತ್ತಾ ಸಾಗಿರುವ ನೂತನ ಸಂತೆ ಮಾರುಕಟ್ಟೆ ನಿರ್ಮಾಣ ಕಾರ್ಯದ ವೇಗ ಹೆಚ್ಚಿಸಬೇಕಾಗಿದೆ. ಇಕ್ಕಟ್ಟಾದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ನಡೆಯುತ್ತಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರಮೋದ ರಾವ್‌.

ದಾಂಡೇಲಿ ಆಡಳಿತ ಸೌಧ ಚುನಾವಣೆ ಮುಂಚೆ ಉದ್ಘಾಟನೆ ಮಾಡಿದ್ದರು. ಆದರೆ ಇನ್ನು ಕಾಮಗಾರಿ ಬಾಕಿ ಇದೆ. ಯಾವ ಕಚೇರಿಯು ಆಡಳಿತ ಸೌಧಕ್ಕೆ ಬಂದಿಲ್ಲ
ಸುಧೀರ ಶೆಟ್ಟಿ ದಾಂಡೇಲಿ ನಿವಾಸಿ

ಯಲ್ಲಾಪುರ: ನೀರು ಪೂರೈಕೆ ಯೋಜನೆ ಅಂತಿಮ ಹಂತದಲ್ಲಿ

ಯಲ್ಲಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲು ಬೊಮ್ಮನಳ್ಳಿ ಅಣೆಕಟ್ಟಿನಿಂದ ಯಲ್ಲಾಪುರಕ್ಕೆ ನೀರು ತರುವ ಯೋಜನೆ ಮಂಜೂರಾತಿಯ ಅಂತಿಮ ಹಂತದಲ್ಲಿದೆ.

₹100 ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ ಈಗಾಗಲೇ ಸರ್ವೇ ಕಾರ್ಯ ಮುಗಿದ್ದು ಜಲಮಂಡಳಿಗೆ ವಿಸ್ತ್ರತ ಯೋಜನಾ ವರದಿ ಸಲ್ಲಿಸಲಾಗಿದೆ. ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸಲು ರೂಪಿಸಲಾದ ಬೇಡ್ತಿ ಯೋಜನೆ ಈಗಾಗಲೇ ವಿಫಲವಾಗಿದೆ.

ಭಟ್ಕಳ: ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ

ತಾಲ್ಲೂಕಿನ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಮೃತ ನಗರ ಯೋಜನೆಯಡಿ ನಡೆಯಬೇಕಾಗಿದ್ದ ₹9 ಕೋಟಿ ಮೊತ್ತದ ಕಾಮಗಾರಿ, ಪಂಚಾಯತರಾಜ ಎಂಜಿನಿಯರಿಂಗ್ ವಿಭಾಗದಿಂದ ನಡೆಸುವ ₹1.30 ಕೋಟಿ ಕಾಮಾಗರಿ ಇನ್ನೂ ಆರಂಭವಾಗಿಲ್ಲ. ಜೆ.ಜೆ.ಎಂ ಯೋಜನೆಯಡಿ ₹240 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಟೆಂಡರ್ ಹಂತದಲ್ಲಿದ್ದು, ಕಾಮಗಾರಿಗೆ ಚಾಲನೆ ದೊರೆತಿಲ್ಲ. ಟೆಂಡರ್ ಹಂತದಲ್ಲಿರುವ ಕುಡಿಯುವ ನೀರಿನ ₹5 ಕೋಟಿ ಮೊತ್ತದ 5 ಕಾಮಗಾರಿ ಹಾಗು ₹2.5 ಕೋಟಿ ಮೊತ್ತದ 8 ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ.

ಹಳಿಯಾಳ: ಶೇ 80ರಷ್ಟು ಮುಗಿದ ಒಳಚರಂಡಿ ಕಾಮಗಾರಿ

ಪಟ್ಟಣದಲ್ಲಿ ಸುಮಾರು ₹7.50 ಲಕ್ಷ ವೆಚ್ಚದಿಂದ ನಿರ್ಮಾಣಗೊಳ್ಳಲಿರುವ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

ಜೊಯಿಡಾ ರಾಮನಗರಕ್ಕೆ ನೀರನ್ನು ಒದಗಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ
ಆರ್.ವಿ.ದೇಶಪಾಂಡೆ, ಹಳಿಯಾಳ ಕ್ಷೇತ್ರದ ಶಾಸಕ

ಸುಮಾರು ₹7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮಾವೇಶ ಕೇಂದ್ರದ ಎರಡನೇ ಹಂತದ ಕೆಲಸವೂ ಆಮೆಗತಿಯಲ್ಲಿ ಸಾಗಿದೆ. ತಾಲ್ಲೂಕಿನಲ್ಲಿ ಕಿರು ಸೇತುವೆಗಳು ನಿರ್ಮಾಣಗೊಂಡಿವೆ. ಪಟ್ಟಣದಲ್ಲಿ ಸಮಾರು ₹76 ಕೋಟಿ ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿ ಶೇ 80ರಷ್ಟು ಮಾತ್ರ ಮುಗಿದಿದೆ.

ಕುಮಟಾ: ಹಲವು ಕೆಲಸ ಬಾಕಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತಾಲ್ಲೂಕಿನಲ್ಲಿ  ಪೂರ್ಣಗೊಳ್ಳಬೇಕಾದ ಕೆಲ ಕಾಮಗಾರಿಗಳು ಸದ್ಯ ಹಾಗೆ ಉಳಿದಿವೆ.

ಕಳೆದ ಅವಧಿಯಲ್ಲಿ ಕ್ಷೇತ್ರಕ್ಕೆ ಹಲವು ಯೋಜನೆ ಮಂಜೂರು ಮಾಡಲಾಗಿತ್ತು. ಈಗಿನ ಸರ್ಕಾರ ಅವುಗಳನ್ನು ಕಾರ್ಯಗತಗೊಳಿಸಲು ಅಡ್ಡಿಪಡಿಸದಿರಲಿ
ದಿನಕರ ಶೆಟ್ಟಿ, ಕುಮಟಾ ಕ್ಷೇತ್ರದ ಶಾಸಕ

ಮಿನಿ ವಿಧಾನಸೌಧಕ್ಕೆ ಪೀಠೋಪಕರಣ ಅಳವಡಿಕೆ, ಪಟ್ಟಣದ ವಿವೇಕನಗರ ಬಡಾವಣೆಯಲ್ಲಿ ಕೆಲ ರಸ್ತೆ ಡಾಂಬರೀಕರಣ, ಮೂರೂರು ರಸ್ತೆಯ ಆರಂಭದಲ್ಲಿ ಬೀದಿ ದೀಪ  ಅಳವಡಿಕೆ ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಕೊಂಡಿವೆ.

ದಾಂಡೇಲಿ: ಚಾಲನೆಗೆ ಸೀಮಿತವಾದ ಕಾಮಗಾರಿ

ಚುನಾವಣೆಗೂ ಮುನ್ನ ಚಾಲನೆ ನೀಡಲಾಗಿದ್ದ ಅಭಿವೃದ್ಧಿ ಕಾಮಗಾರಿಗಳ ಪೈಕಿ ಬಹುತೇಕ ಕೆಲಸ ಈವರೆಗೆ ಆರಂಭಗೊಂಡಿಲ್ಲ.

ಕಳೆದ ಎರಡು ವರ್ಷಗಳ ಹಿಂದೆ ಮಂಜೂರಾಗಿದ್ದ ಬೈಲಪಾರ ಸೇತುವೆ ಕೊನೆ ಹಂತಕ್ಕೆ ಬಂದಿದೆ. ಆರ್.ಟಿ.ಓ. ಕಚೇರಿಯ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಚುನಾವಣೆ ವೇಳೆ ಚಾಲನೆ ನೀಡಿದ ಕೆಲಸಗಳು ಮಾತ್ರ ಆರಂಭಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ.

ಪ್ರಜಾವಾಣಿ ತಂಡ:

ಗಣಪತಿ ಹೆಗಡೆ, ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಪ್ರವೀಣಕುಮಾರ ಸುಲಾಖೆ, ಜ್ಞಾನೇಶ್ವರ ದೇಸಾಯಿ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಎಂ.ಜಿ.ನಾಯ್ಕ, ವಿಶ್ವೇಶ್ವರ ಗಾಂವ್ಕರ್.

ಪಾವತಿಯಾಗದ ಬಿಲ್:

ಕೆಲಸ ನನೆಗುದಿಗೆ ಹೊನ್ನಾವರ: ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ವಿವಿಧ ಇಲಾಖೆಯ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಮಂಕಿ-ಗುಳದಕೇರಿ ರಸ್ತೆ ಸೇರಿದಂತೆ ಕೆಲ ರಸ್ತೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ₹2 ಕೋಟಿ ವೆಚ್ಚದ ಅರೇ ಅಂಗಡಿ-ಚಂದಾವರ ರಸ್ತೆಯ ಮರುಡಾಂಬರೀಕರಣ ಕೆಲಸ ನಡೆದಿಲ್ಲ. ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಡಿಬೈಲ್ ಹೊಳೆಬದಿಕೇರಿಯಲ್ಲಿ ಫುಟ್‌ಪಾತ್ ನಿರ್ಮಾಣ ಕಾಮಗಾರಿ ಅರೆಬರೆಯಾಗಿದೆ.

‘ಮಳೆಗಾಲದಲ್ಲಿ ನೆರೆಪೀಡಿತರಾಗುವ ನಮ್ಮ ಸಂಕಷ್ಟ ಈ ವರ್ಷವೂ ಮುಂದುವರಿಯುವುದು ನಿಶ್ಚಿತ’ ಎಂದು ಆ ಭಾಗದ ನಿವಾಸಿ ಗ್ರೇಸಿ ಫರ್ನಾಂಡಿಸ್ ಅಳಲು ತೋಡಿಕೊಂಡರು.

ಹಿರೇಬೈಲ್ ಹಾಗೂ ಕಂಚಿಬೀಳು ಸಮೀಪ ಸೇತುವೆ ನಿರ್ಮಾಣಕ್ಕೆ ಅರಣ್ಯ ಕಾಯ್ದೆ ಅಡ್ಡಿಯಾಗಿದೆ.

‘ಹಿಂದಿನ ಬಜೆಟ್‍ನಲ್ಲಿ ಮಂಜೂರಿಯಾಗಿರುವ ರಸ್ತೆ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಳೆಗಾಲದೊಳಗೆ ಮುಗಿಸಲು ಹೆಚ್ಚಿನ ಪ್ರಯತ್ನ ಕೈಗೊಳ್ಳಲಾಗಿದೆ’ ಎಂದು ಪಿಡಬ್ಲ್ಯೂಡಿ ಎಇಇ ಎಂ.ಎಸ್.ನಾಯ್ಕ ತಿಳಿಸಿದರು.

ಶಿರಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಂಡಿತ್ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿ
ಶಿರಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಂಡಿತ್ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿ
ದಾಂಡೇಲಿ ಅಂಬೇವಾಡಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಕಾಮಗಾರಿ ಅಡಿಪಾಯ ಹಂತದಲ್ಲಿರುವುದು.
ದಾಂಡೇಲಿ ಅಂಬೇವಾಡಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಕಾಮಗಾರಿ ಅಡಿಪಾಯ ಹಂತದಲ್ಲಿರುವುದು.
ಹಳಿಯಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ
ಹಳಿಯಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT