ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಕೇಂದ್ರಕ್ಕೆ ಬಾರದ ಕುಚಲಕ್ಕಿ ಭತ್ತ: ನೆರೆಯ ಜಿಲ್ಲೆಗಳಿಂದ ಖರೀದಿಗೆ ಚಿಂತನೆ

Last Updated 6 ಡಿಸೆಂಬರ್ 2022, 14:25 IST
ಅಕ್ಷರ ಗಾತ್ರ

ಕಾರವಾರ: ‘ಕುಚಲಕ್ಕಿ ಮಾಡಲು ಬಳಸುವ ಭತ್ತವನ್ನು ಬೆಳೆಯುವ ರೈತರು, ಸರ್ಕಾರದ ಖರೀದಿ ಕೇಂದ್ರಗಳಿಗೆ ಪೂರೈಸುತ್ತಿಲ್ಲ. ಇದು ಸರ್ಕಾರದ ಯೋಜನೆಗೆ ತೊಡಕಾಗಿದೆ. ಹೀಗಾಗಿ ನೆರೆಹೊರೆಯ ಜಿಲ್ಲೆಗಳಿಂದ ಭತ್ತ ಖರೀದಿಸುವ ಬಗ್ಗೆ ಪರಿಶೀಲಿಸಬೇಕು. ಕೇಂದ್ರಗಳಿಗೆ ಭತ್ತ ಪೂರೈಕೆ ಆಗುವಂತೆ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಸೋಮವಾರ, ಪಡಿತರ ವ್ಯವಸ್ಥೆಯಲ್ಲಿ ಕುಚಲಕ್ಕಿ ವಿತರಣೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿದಾರರಿಗೆ ಜ.1ರಿಂದ ತಿಂಗಳಿಗೆ ತಲಾ ಮೂರು ಕೆ.ಜಿ ಕುಚಲಕ್ಕಿ ವಿತರಿಸುವುದಾಗಿ ಸರ್ಕಾರವು ಪ್ರಕಟಿಸಿದೆ. ಆದರೆ, ಕುಚಲಕ್ಕಿ ಮಾಡಲು ಬೇಕಾಗುವ ಕಜೆ, ಜಯಾ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷಾ ತಳಿಗಳ ಭತ್ತವು, ಖರೀದಿ ಕೇಂದ್ರಕ್ಕೆ ಪೂರೈಕೆಯಾಗುತ್ತಿಲ್ಲ. ಕುಚಲಕ್ಕಿ ಭತ್ತಕ್ಕಾಗಿ ₹ 500 ಹೆಚ್ಚುವರಿ ಪ್ರೋತ್ಸಾಹಧನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೂ ರೈತರು ನೇರವಾಗಿ ಮಾರಾಟ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ಕರಾವಳಿಯ ಮೂರೂ ಜಿಲ್ಲೆಗಳಿಗೆ ಒಟ್ಟು ಒಂದು ಲಕ್ಷ ಕ್ವಿಂಟಲ್ ಕುಚಲಕ್ಕಿ ಬೇಕಾಗುತ್ತದೆ. ಉತ್ತರ ಕನ್ನಡಕ್ಕೆ 17 ಲಕ್ಷದಿಂದ 18 ಲಕ್ಷ ಕ್ವಿಂಟಲ್‌ಗಳಷ್ಟು ಭತ್ತ ಬೇಕು. ಅಷ್ಟಾಗದಿದ್ದರೂ ಕನಿಷ್ಠ 6 ಲಕ್ಷ ಕ್ವಿಂಟಲ್ ಭತ್ತ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ ಎಂಟು ಕಡೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಂಕೋಲಾದಲ್ಲಿ 21, ಶಿರಸಿಯಲ್ಲಿ 14 ಸೇರಿದಂತೆ 45 ರೈತರು ಮಾತ್ರ ಭತ್ತ ಖರೀದಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಒಬ್ಬರೂ ಈವರೆಗೆ ಭತ್ತ ಪೂರೈಕೆ ಮಾಡಿಲ್ಲ. ಒಬ್ಬ ರೈತನಿಂದ 40 ಕ್ವಿಂಟಲ್‌ಗಳಷ್ಟು ಭತ್ತ ಖರೀದಿಗೆ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 6,625 ಹೆಕ್ಟೇರ್‌ಗಳಲ್ಲಿ ಜಯಾ, 6,755 ಹೆಕ್ಟೇರ್‌ಗಳಲ್ಲಿ ಅಭಿಲಾಷಾ, 1,054 ಹೆಕ್ಟೇರ್‌ಗಳಲ್ಲಿ ಎಂಒ4, ಹಾಗೂ 150 ಹೆಕ್ಟೇರ್‌ಗಳಲ್ಲಿ ಜ್ಯೋತಿ ತಳಿಯ ಭತ್ತ ಬೆಳೆಯಲಾಗಿದೆ. ಇವೆಲ್ಲವೂ ಕುಚ್ಚಲಕ್ಕಿ ಮಾಡಲು ಬಳಸುವಂಥವು. ಸುಮಾರು 5.23 ಲಕ್ಷ ಕ್ವಿಂಟಲ್ ಭತ್ತ ಸಿಗಬಹುದು’ ಎಂದರು.

‘ರೈತರು ನೋಂದಣಿ ಮಾಡಿಸಲು ಅಲೆದಾಡಬೇಕಿದೆ. ಸ್ವಂತ ಖರ್ಚಿನಲ್ಲಿ ಭತ್ತವನ್ನು ಗೋದಾಮಿಗೆ ಸಾಗಿಸಬೇಕು. ಹಾಗಾಗಿ ಹಳಿಯಾಳ, ಮುಂಡಗೋಡ ಭಾಗದ ರೈತರು ಖರೀದಿ ಕೇಂದ್ರಕ್ಕೆ ಭತ್ತ ನೀಡಲು ಮುಂದಾಗುತ್ತಿಲ್ಲ. ₹2,200 ಬೆಲೆಯಲ್ಲಿ ಸ್ಥಳದಲ್ಲೇ ಮಾರಾಟ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಕುಚಲಕ್ಕಿ ಮಾಡಲು ಬೇಕಾಗುವ ತಳಿಯ ಭತ್ತವನ್ನು ಕ್ವಿಂಟಲ್‌ಗೆ ₹ 2,540ರಂತೆ ಹಾವೇರಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಿಂದ ಪಡೆಯಲು ಸಾಧ್ಯವೇ ಎಂದು ಪರಿಶೀಲಿಸಿ ತಿಳಿಸಿ’ ಎಂದು ಸೂಚಿಸಿದರು.

‘ಬಾಕಿ ಹಣ ಪಾವತಿಸಿ’:

‘ಸರ್ಕಾರವು ತಮಗೆ ಬಾಕಿ ಹಣ ಪಾವತಿಸಬೇಕು’ ಎಂದು ಜಿಲ್ಲೆಯ ಅಕ್ಕಿ ಗಿರಣಿಗಳ ಮಾಲೀಕರು ಸಭೆಯಲ್ಲಿ ಸಚಿವರನ್ನು ಒತ್ತಾಯಿಸಿದರು.

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತವನ್ನು ಅಕ್ಕಿ ಮಾಡಿ ಕೊಟ್ಟಿದ್ದೇವೆ. ಆದರೆ, ಎರಡು ವರ್ಷಗಳಿಂದ ಸರ್ಕಾರವು ಹಣ ಪಾವತಿಸಿಲ್ಲ. ಅದನ್ನು ಶೀಘ್ರ ನೀಡಬೇಕು. ಈ ಸಂಬಂಧ ಬೆಂಗಳೂರಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಜತೆ ಸಭೆ ಹಮ್ಮಿಕೊಳ್ಳಬೇಕು. ಪ್ರತಿ ಕ್ವಿಂಟಲ್ ಭತ್ತದ ಮೇಲೆ 68 ಕೆ.ಜಿ ಅಕ್ಕಿ ನೀಡಬೇಕು ಎಂಬ ನಿಯಮವನ್ನು ಸಡಿಲಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ ಕೊಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT