ಶುಕ್ರವಾರ, ಡಿಸೆಂಬರ್ 2, 2022
20 °C

ರೈಲು ಯೋಜನೆ ಪಶ್ಚಿಮ ಘಟ್ಟಕ್ಕೆ ಮಾರಕ: ಪ್ರಸ್ತಾವ ಕೈಬಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಪ್ರಸ್ತಾವಿತ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯು, ಅತಿ ಸೂಕ್ಷ್ಮ ಜೀವ ಪರಿಸರ ವ್ಯವಸ್ಥೆ ಹೊಂದಿರುವ ಪಶ್ಚಿಮ ಘಟ್ಟಕ್ಕೆ ಮಾರಕವಾಗಲಿದೆ. ಅರಬೈಲು ಘಟ್ಟದ ಉಷ್ಣವಲಯ ಮಳೆಕಾಡನ್ನು ಅವಲಂಬಿಸಿ ಬದುಕುತ್ತಿರುವ ಅತಿ ವಿರಳ, ಅಳಿವಿನಂಚಿನ ಜೀವಿಗಳಿಗೆ ಹಾನಿಯುಂಟು ಮಾಡಲಿದೆ’ ಎಂದು ಜೀವಶಾಸ್ತ್ರಜ್ಞ ರವಿ ಹೆಗಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿರುವ ಅವರು, ಉತ್ತರ ಕನ್ನಡದ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಂಶೋಧನೆಯ ಆಧಾರದಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶಗಳನ್ನು, ದಾಖಲೆಗಳನ್ನು 11 ಪುಟಗಳಲ್ಲಿ ಉಲ್ಲೇಖಿಸಿದ್ದಾರೆ.

‘ಉತ್ತರ ಕನ್ನಡದ ಮಳೆಕಾಡು ಪ್ರದೇಶ ಜಗತ್ತಿನಲ್ಲೇ ಅತಿ ವಿಶಿಷ್ಟವಾಗಿದೆ. ಇಂಥ ಸಂಯೋಜನೆ ಹೊಂದಿರುವ ಜೀವ ಪರಿಸರ ವ್ಯವಸ್ಥೆ ಮತ್ತು ಅದನ್ನು ಹೊಂದಿಕೊಂಡು ಬದುಕುತ್ತಿರುವ ಜೀವಿಗಳು ಮಿಲಿಯನ್ ವರುಷಗಳಿಂದ ಇಲ್ಲೇ ವಿಕಾಸ ಹೊಂದಿವೆ. ಅವುಗಳನ್ನು ಸಂರಕ್ಷಿಸಬೇಕಾಗಿದೆ’ ಎಂದು ಪ್ರಸ್ತಾಪಿಸಿದ್ದಾರೆ.

‘ಅರಬೈಲು ಘಟ್ಟವು ಕಡಿದಾದ ಗುಡ್ಡ ಮತ್ತು ಕಣಿವೆಯನ್ನು ಹೊಂದಿದೆ. ಇಂಥ ಭೂ ರಚನೆಯುಳ್ಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೈಲು ಮಾರ್ಗ ನಿರ್ಮಿಸಲು ಶಿಲಾ ಪದರಗಳ ಸ್ಫೋಟ, ಕೊರೆಯುವಿಕೆ, ಸುರಂಗ ನಿರ್ಮಾಣ ಮತ್ತಿತರ ಕಾರ್ಯಗಳ‌ನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಆಗ ಉಂಟಾಗುವ ನೆಲ, ಜಲ, ವಾಯು ಮತ್ತು ಶಬ್ದ ಮಾಲಿನ್ಯದಿಂದಲೇ ಅಲ್ಲಿರುವ ಅಪೂರ್ವ ಪ್ರಾಣಿ– ಪಕ್ಷಿ ಸಂಕುಲ ಆ ಸ್ಥಳವನ್ನು ಶಾಶ್ವತವಾಗಿ ಬಿಟ್ಟು ತೆರಳುವ ಅನಿವಾರ್ಯ ಸ್ಥಿತಿ ಉಂಟಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಇತ್ತೀಚೆಗೆ ದೇಶದಾದ್ಯಂತ ಕಂಡುಬಂದ ಉಷ್ಣ ಅಲೆಯ ಸಂದರ್ಭದಲ್ಲಿ, ಉತ್ತರ ಕನ್ನಡದ ಪ್ರದೇಶಕ್ಕೆ ಯಾವುದೇ ಹಾನಿಯಾಗಿಲ್ಲ. ಇಲ್ಲಿರುವ ಅಖಂಡ ಮಳೆಕಾಡುಗಳೇ ಇದಕ್ಕೆ ಕಾರಣ. ಜಾಗತಿಕ ತಾಪಮಾನ ಹೆಚ್ಚಳದ ಬಿಸಿ ತಟ್ಟುತ್ತಿರುವ ಈ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ ನೆರೆ– ಬರ ಮುಂತಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಳಿದುಳಿದ ಮಳೆಕಾಡನ್ನು ಇರುವಂತೆಯೇ ಉಳಿಸಿಕೊಳ್ಳಬೇಕಿದೆ’ ಎಂದು ಆಗ್ರಹಿಸಿದ್ದಾರೆ.

‘ಧಾರಣಾ ಸಾಮರ್ಥ್ಯ ಅವಲೋಕಿಸಿ’:

‘ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಎಲ್ಲ ಅಭಿವೃದ್ಧಿ ಯೋಜನೆಗಳು ಅಳಿದುಳಿದ, ಪಶ್ಚಿಮ ಘಟ್ಟದ ಅತಿ ವಿರಳ ಮಳೆಕಾಡು ಪ್ರದೇಶಗಳಲ್ಲೇ ಪ್ರಸ್ತಾವ ಆಗುತ್ತಿರುವುದು ಕಳವಳಕಾರಿ. ಉತ್ತರ ಕನ್ನಡದ ಮತ್ತು ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯವನ್ನು ಪುನರಾವಲೋಕಿಸಬೇಕಿದೆ’ ಎಂದು ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

‘ಹುಬ್ಬಳ್ಳಿ– ಅಂಕೋಲಾ ಯೋಜನೆಯ ಪ್ರಸ್ತಾವದ ಆರಂಭಿಕ ಹಂತದಲ್ಲಿ, ಕರ್ನಾಟಕ ಸರ್ಕಾರದ ಜೀವಿ– ಪರಿಸರ ಇಲಾಖೆ ಕಾರ್ಯದರ್ಶಿಯಾಗಿದ್ದ ಅಭಿಜಿತ್ ದಾಸ್ ಗುಪ್ತ ಅವರೂ ಯೋಜನೆ ಅನುಷ್ಠಾನದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇಂಥ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವಾಗ ಜಾಗತಿಕ ಮಟ್ಟದ ವಿಜ್ಞಾನಿಗಳ ವಾದಕ್ಕೆ ಬೆಲೆ ಕೊಡುವ ಪರಿಪಾಠ ಬೆಳೆಸಿಕೊಳ್ಳಬೇಕಿದೆ’ ಎಂದು ಒತ್ತಾಯಿಸಿದ್ದಾರೆ.

****

* ಮಾನವನ ಅಸ್ತಿತ್ವಕ್ಕೇ ಶಾಶ್ವತ ನಷ್ಟ ಉಂಟುಮಾಡುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯನ್ನು ಯಾವ ಕಾರಣಕ್ಕೂ ಅನುಷ್ಠಾನಗೊಳಿಸಬಾರದು.

– ರವಿ ಹೆಗಡೆ, ಜೀವಶಾಸ್ತ್ರಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು