ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಯಿಡಾ ಕಾಡಿನಲ್ಲಿ ‘ಚಕ್ಕಡಿ’ಯದ್ದೇ ಸದ್ದು

ನೂರಾರು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಬಂದ ಭಕ್ತರು: ಉಳವಿಯಲ್ಲಿ ಮನೆ ಮಾಡಿದ ಸಂಭ್ರಮ
Published 23 ಫೆಬ್ರುವರಿ 2024, 4:29 IST
Last Updated 23 ಫೆಬ್ರುವರಿ 2024, 4:29 IST
ಅಕ್ಷರ ಗಾತ್ರ

ಉಳವಿ: ಸದಾ ಮೌನ, ಆಗಾಗ ಕಾಡುಪ್ರಾಣಿಗಳ ಕೂಗಿಗೆ ಸಾಕ್ಷಿಯಾಗುವ ಜೊಯಿಡಾದ ದಟ್ಟ ಅಡವಿಯಲ್ಲಿ ಈಗ ಚಕ್ಕಡಿ ಗಾಲಿಗಳ ಸದ್ದು, ‘ಅಡಕೇಶ್ವರ ಮಡಕೇಶ್ವರ ಉಳವಿ ಚನ್ನಬಸವೇಶ್ವರ ಬಹುಪರಾಕ್’ ಎಂಬ ಶಿವಭಕ್ತರ ಜಯಘೋಷ ಕೇಳಿಸುತ್ತಿದೆ. ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುವ ಉಳವಿಯ ಚನ್ನಬಸವೇಶ್ವರ ರಥೋತ್ಸವಕ್ಕೆ ಮೆರಗು ತರಲು ಸಾವಿರಾರು ಭಕ್ತರು ಬಯಲುಸೀಮೆ ದಾಟಿ, ದಟ್ಟ ಅಡವಿ ಹಾದು ಬರುತ್ತಿದ್ದಾರೆ.

ಉಳವಿಯಲ್ಲಿ ಫೆ.16ರಂದು ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. 24 ರಂದು ಮಹಾರಥೋತ್ಸವ ನಡೆಯಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ ಸೇರಿದಂತೆ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ರಥಬೀದಿಯಲ್ಲಿ ಜನಜಂಗುಳಿ ತುಂಬಿದ್ದರೆ, ಅಂಗಡಿಗಳನ್ನು ಜಾನುವಾರುಗಳ ಅಲಂಕಾರಕ್ಕೆ ಬಳಸುವ ಸಾಮಗ್ರಿಗಳು ಗಮನಸೆಳೆಯುತ್ತಿವೆ.

ಹೀಗೆ ಬರುವ ಭಕ್ತರು ಚಕ್ಕಡಿಯಲ್ಲಿ, ಕಾಲ್ನಡಿಗೆಯ ಮೂಲಕ ಬರುವುದು ವಿಶೇಷ. ಕಳೆದ ಎಂಟು ದಿನಗಳಿಂದ ತಂಡೋಪತಂಡವಾಗಿ ಚಕ್ಕಡಿ, ಪಾದಯಾತ್ರೆಯಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನರು ಬಂದಿದ್ದಾರೆ. ಈಗಾಗಲೇ 1,600 ಚಕ್ಕಡಿ ಗಾಡಿಗಳು ಉಳವಿಗೆ ಬಂದು ತಂಗಿವೆ.

ಗ್ರಾಮಗಳಿಂದ ಹೊರಡುವ ಭಕ್ತರು ತಾವು ಸಾಕಿರುವ ಎತ್ತುಗಳಿಗೆ ಬೇಕಾಗುವ ಹುಲ್ಲು, ಮೇವನ್ನು ಚಕ್ಕಡಿಯ ಮೇಲೆಯೇ ಹೊತ್ತು ತರುತ್ತಾರೆ. ಕುಟುಂಬ ಸಮೇತವಾಗಿ ಬರುವ ಭಕ್ತರು ದಾರಿಯ ಮಧ್ಯೆ ಅಲ್ಲಲ್ಲಿ ಟೆಂಟ್‍ಗಳನ್ನು ಹಾಕಿ ದಿನ ಕಳೆಯುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ದಾರಿಯುದ್ದಕ್ಕೂ ಅಲ್ಲಲ್ಲಿ ಅನ್ನದಾಸೋಹವನ್ನೂ ಮಾಡಲಾಗುತ್ತಿದೆ.

‘ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ನೇಮಕ ಶಿಬಿರಕ್ಕೆ ತೆರಳುವ ಮುನ್ನ ಚನ್ನಬಸವೇಶ್ವರನಿಗೆ ಹರಕೆ ಹೊತ್ತಿದ್ದೆ. ಬಿಎಸ್ಎಫ್‍ಗೆ ನೇಮಕಗೊಂಡಿದ್ದೇನೆ. ಸತತ ಎರಡು ವರ್ಷದಿಂದಲೂ ಪಾದಯಾತ್ರೆ ಮೂಲಕ ಉಳವಿಗೆ ಬಂದಿದ್ದ ನಾನು ಈ ಬಾರಿಯೂ ಕಾಲ್ನಡಿಗೆಯ ಮೂಲಕವೇ ಬಂದೆ’ ಎನ್ನುತ್ತಾರೆ ಬೆಳಗಾವಿ ಜಿಲ್ಲೆ ಗೋಕಾಕದ ಮಕ್ಕಳಗೇರಿ ಗ್ರಾಮದ ಬಸವರಾಜ ಸನದಿ.

‘ಕುಟುಂಬವು ನೂರು ವರ್ಷದಿಂದ ಉಳವಿ ಜಾತ್ರೆಗೆ ಬರುತ್ತಿದೆ. ನಾನು 56 ವರ್ಷಗಳಿಂದ ಜಾತ್ರೆ ನೋಡುತ್ತಿದ್ದೇನೆ. ಐಷಾರಾಮಿ ವಾಹನ ತರುವಷ್ಟು ಸ್ಥಿತಿವಂತರಿದ್ದೇವೆ. ಆದರೆ ವರ್ಷಕ್ಕೊಮ್ಮೆ ಕುಟುಂಬದವರೆಲ್ಲ ಒಟ್ಟಾಗಿ ಚಕ್ಕಡಿಯಲ್ಲಿ ಬರುತ್ತೇವೆ. ಕೆಲವರು ಕಾಲ್ನಡಿಗೆಯಲ್ಲೂ ಸಾಗುತ್ತೇವೆ. ಉಳವಿಯಲ್ಲಿ ಎರಡು ದಿನ ಭಕ್ತರಿಗೆ ಅನ್ನದಾಸೋಹ ಮಾಡುತ್ತೇವೆ’ ಎಂದು ಹುಬ್ಬಳ್ಳಿಯ ಉದ್ಯಮಿ ಮುರುಗೇಶ್ ಏಕಲಾಸಪುರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಚಕ್ಕಡಿಯಲ್ಲಿ ಬಂದು ಉಳವಿಯ ರಥಬೀದಿಯ ಪಕ್ಕದಲ್ಲಿರುವ ಜಾಗದಲ್ಲಿ ಟೆಂಟ್ ಕಟ್ಟಿಕೊಂಡು ಬೀಡುಬಿಟ್ಟಿರುವ ಭಕ್ತರು.
ಚಕ್ಕಡಿಯಲ್ಲಿ ಬಂದು ಉಳವಿಯ ರಥಬೀದಿಯ ಪಕ್ಕದಲ್ಲಿರುವ ಜಾಗದಲ್ಲಿ ಟೆಂಟ್ ಕಟ್ಟಿಕೊಂಡು ಬೀಡುಬಿಟ್ಟಿರುವ ಭಕ್ತರು.
ಉಳವಿಯ ಜಾತ್ರೆಗೆ ಬರಿಗಾಲಿನಲ್ಲಿ ಕಾಲ್ನಡಿಗೆಯ ಮೂಲಕ ಸಾಗಿ ಬರುತ್ತಿರುವ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಭಕ್ತರು.
ಉಳವಿಯ ಜಾತ್ರೆಗೆ ಬರಿಗಾಲಿನಲ್ಲಿ ಕಾಲ್ನಡಿಗೆಯ ಮೂಲಕ ಸಾಗಿ ಬರುತ್ತಿರುವ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಭಕ್ತರು.

12ನೇ ಶತಮಾನದ ವೇಳೆಗೆ ಕಲ್ಯಾಣದಿಂದ ಉಳವಿಗೆ ಬಂದಿದ್ದ ಚನ್ನಬಸವೇಶ್ವರರು ವಚನ ಸಾಹಿತ್ಯಗಳನ್ನು ಚಕ್ಕಡಿಯಲ್ಲಿ ತಂದು ಸಂರಕ್ಷಿಸಿದ್ದರು. ಹೀಗಾಗಿ ಉತ್ತರ ಕರ್ನಾಟಕ ಭಾಗದ ಜನರು ಇಂದಿಗೂ ಚಕ್ಕಡಿಯಲ್ಲಿ ಉಳವಿಗೆ ಬರುವ ರೂಢಿ ಬೆಳೆಸಿಕೊಂಡಿದ್ದಾರೆ

-ಸಂಜಯ ಕಿತ್ತೂರ ಚನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ

ಪ್ಲಾಸ್ಟಿಕ್ ನಿಷೇಧ

ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಳವಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಪ್ಲಾಸ್ಟಿಕ್ ನಿಷೇಧ ಆದೇಶ ಹೊರಡಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕ ಶೌಚಾಲಯ ಸ್ನಾನಗೃಹ ಚಕ್ಕಡಿ ಮತ್ತು ವಾಹನ ನಿಲುಗಡೆಗೆ ಜಾಗ ಮಾಡಲಾಗಿದೆ. ‘ಮಹಾರಥೋತ್ಸವದ ದಿನ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ. ಜನರಿಗೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣದ ದರಷ್ಟಿಯಿಂದ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು ಈಗಾಗಲೇ ಅಂಗಡಿಕಾರರು ಬಟ್ಟೆಯ ಚೀಲ ದಾಸ್ತಾನು ಮಾಡಿಕೊಂಡಿದ್ದಾರೆ’ ಎಂದು ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT