ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಬಕ್ರೀದ್: ಹಬ್ಬಕ್ಕೆ ಸಡಗರದ ಸಿದ್ಧತೆ, ಕುರಿ ವಹಿವಾಟು ಜೋರು

Published 15 ಜೂನ್ 2024, 14:23 IST
Last Updated 15 ಜೂನ್ 2024, 14:23 IST
ಅಕ್ಷರ ಗಾತ್ರ

ಕಾರವಾರ: ತ್ಯಾಗ, ಬಲಿದಾನದ ಸಂಕೇತವಾಗಿ ಆಚರಿಸಲಾಗುವ ಬಕ್ರೀದ್‍ಗೆ ಮುಸ್ಲೀಂ ಧರ್ಮೀಯರು ಸಿದ್ಧತೆಯಲ್ಲಿ ತೊಡಗಿದ್ದು, ನಗರದಲ್ಲಿ ಹಬ್ಬದ ಸಲುವಾಗಿ ಕುರಿಗಳ ಮಾರಾಟವೂ ಜೋರಾಗಿದೆ.

ಜಿಲ್ಲೆಯಾದ್ಯಂತ ಸೋಮವಾರ ಬಕ್ರೀದ್ ಆಚರಣೆ ನಡೆಯಲಿದೆ. ಹೀಗಾಗಿ ವಾರಗಳ ಮುಂಚಿನಿಂದಲೇ ಕುರಿಗಳ ವಹಿವಾಟು ಚುರುಕು ಪಡೆದುಕೊಂಡಿದೆ. ಬಕ್ರೀದ್ ಹಬ್ಬಕ್ಕೆ ಬಲಿದಾನದ ಸಂಕೇತವಾಗಿ ಕುರಿಗಳನ್ನು ಬಲಿ ಕೊಡುವ ಪದ್ಧತಿ ನಡೆಯುತ್ತದೆ. ಹೀಗಾಗಿ ಕುರಿಗಳಿಗೆ ಬೇಡಿಕೆ ಹೆಚ್ಚಿದೆ.

ಇಲ್ಲಿನ ಕಾಜುಬಾಗದ ಪೊಲೀಸ್ ಮೈದಾನದ ಸಮೀಪ, ಕೋಡಿಬಾಗ, ಸದಾಶಿವಗಡ ಸೇರಿದಂತೆ ಕೆಲವೆಡೆ ರಸ್ತೆಯ ಅಂಚಿನಲ್ಲಿ ವ್ಯಾಪಾರಿಗಳು ಕುರಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ದೇವದುರ್ಗ, ಅಮೀನಗಡ ಭಾಗದಿಂದ ತಂದಿರುವ ಕುರಿಗಳು ಉತ್ತಮ ವಹಿವಾಟು ಕಾಣುತ್ತಿವೆ.

‘ಸಾಮಾನ್ಯ ಗಾತ್ರದ ಕುರಿಗಳು ₹25 ಸಾವಿರದಿಂದ ಆರಂಭದ ಬೆಲೆ ಹೊಂದಿವೆ. ₹30 ರಿಂದ ₹60 ಸಾವಿರ ದರವರೆಗಿನ ಕುರಿಗಳನ್ನೂ ಮಾರಾಟಕ್ಕೆ ಇಡಲಾಗಿದೆ. ಜನರು ದರ ವಿಚಾರಿಸಿಕೊಂಡು ಸಾಗುತ್ತಿದ್ದಾರೆ. ಖರೀದಿ ಪ್ರಮಾಣ ಸಮಾಧಾನಕರವಾಗಿದೆ’ ಎನ್ನುತ್ತಾರೆ ಕುರಿ ವ್ಯಾಪಾರಿ ಬಿಲಾಲ್ ಶೇಖ್.

‘ಬಕ್ರೀದ್ ಆಚರಣೆ ವೇಳೆ ಪ್ರವಾದಿಯವರ ಆಣತಿಯಂತೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದ ಊಟ ಕೊಡುವುದು ಆಚರಣೆಯ ಪ್ರಮುಖ ಅಂಶ. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಖಬರಸ್ತಾನಕ್ಕೆ ಭೇಟಿ ನೀಡಿ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಸ್ಥಿತಿವಂತರು ಮನೆಯಲ್ಲಿ ಕುರಿಯ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ಬಂಧುಗಳ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ಮುಸ್ಲಿಂ ಸಮುದಾಯದ ಹಿರಿಯ ಮುಜಮ್ಮಿಲ್ ಮಾಂಡ್ಲಿಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT