ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಜನಪದರ ದೇವನಿಗೆ ನವೀಕೃತ ದೇಗುಲ

ಅನಿಲಗೋಡ ಕುಮಾರರಾಮ ದೇವಸ್ಥಾನದಲ್ಲಿ ಪ್ರತಿಷ್ಠಾ ಕಾರ್ಯಕ್ರಮ
Last Updated 30 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಹೊನ್ನಾವರ: ಶರಾವತಿ ನದಿಯ ಎಡದಂಡೆಯಲ್ಲಿರುವ ಅನಿಲಗೋಡ ಪುಟ್ಟ ಊರು. ಇಲ್ಲಿನ ಕುಮಾರರಾಮ ದೇವಸ್ಥಾನ ಊರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದಿದೆ. ಧಾರ್ಮಿಕ ನಂಬುಗೆಯೊಂದಿಗೆ ಭಕ್ತರು ಅನುಸರಿಸುವ ವಿಶಿಷ್ಟ ಜಾನಪದೀಯ ಆಚರಣೆಗೆ ಐತಿಹಾಸಿಕ ಮಹತ್ವವಿದೆ. ನಾಡಿನ ವಿವಿಧೆಡೆಯ ಎಲ್ಲ ವರ್ಗಗಳ ಜನರ ಗಮನ ಸೆಳೆದಿದೆ.

ಪ್ರತಿ ವರ್ಷ ಇಲ್ಲಿ ‘ಅಣ್ಗೋಡ ಹಬ್ಬ’ ನಡೆಯುತ್ತದೆ. ವಿವಿಧ ಜಾತಿಗಳಿಗೆ ಸೇರಿದ ಭಕ್ತರ ಸೇವೆ ಈ ಹಬ್ಬದ ಸಂಪ್ರದಾಯ. ಮಣ್ಣಿನ ಮಡಿಕೆಯನ್ನು ಪೂಜಿಸಿ ದೋಣಿಯಲ್ಲಿಟ್ಟು ನದಿಯಲ್ಲಿ ತೇಲಿಸಿ ಬಿಡುವುದರೊಂದಿಗೆ ಹಬ್ಬದ ಆಮಂತ್ರಣವನ್ನು ಜನರಿಗೆ ತಲುಪಿಸುವುದು ವಾಡಿಕೆ. ಹಬ್ಬದ ಅಂಗವಾಗಿ ಎಂಟು ದಿನಗಳ ಕಾಲ ವಿವಿಧ ಆಚರಣೆಗಳು ನಡೆದು ದೇವರ ಪ್ರಸಾದ ರೂಪದ ಪಾನಕದ ಸೇವನೆಯೊಂದಿಗೆ ಮುಕ್ತಾಯವಾಗುತ್ತದೆ.

‘ಕಷಾಯ ರೂಪದ ಈ ಪಾನಕ ಸೇವಿಸಿದ ಜನರನ್ನು ರೋಗ ರುಜಿನಗಳು ಬಾಧಿಸದು ಎಂಬುದು ಇಲ್ಲಿನ ಭಕ್ತರ ನಂಬುಗೆ. ಇಲ್ಲಿನ ದೇವರ ಮಹಿಮೆ ದೊಡ್ಡದು’ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮೋಹನ ನಾಯ್ಕ ಹಬ್ಬದ ದಿನಗಳಲ್ಲಿ ಆಚರಿಸುವ ವಿವಿಧ ಸಾಂಪ್ರದಾಯಿಕ ಆಚರಣೆಗಳನ್ನು ವಿವರಿಸಿದರು.

ಸಂಪಿಗೆ ಹೂವಿನ ಹಾರ ಹಾಕಿಕೊಂಡು ತಲೆಗೊಂದು ರುಮಾಲು ಬಿಗಿದು ಚಡ್ಡಿಯ ಮೇಲೆ ಸಣ್ಣ ವಸ್ತ್ರ ಸುತ್ತಿಕೊಂಡು ಕೈಯಲ್ಲಿ ಛಡಿ ಹಿಡಿದ ವಿಶಿಷ್ಟ ಧಿರಿಸಿನ ‘ಅಣ್ಗೋಡ ಕಳ್ಳರು’, ಹಬ್ಬದ ಎರಡು ದಿನಗಳಲ್ಲಿ ಸುತ್ತಮುತ್ತಲ ಊರು ಸುತ್ತುತ್ತಾರೆ. ತಮ್ಮ ಆರಾಧ್ಯ ದೈವ ಕುಮಾರರಾಮನಿಗೆ ತೆಂಗಿನಕಾಯಿ ಹಾಗೂ ಇತರ ಕಾಣಿಕೆಗಳನ್ನು ಸಂಗ್ರಹಿಸಿ ಕ್ಷೇತ್ರಕ್ಕೆ ತರುತ್ತಾರೆ.

ಓಡುತ್ತಲೇ ಸಾಗುವ ‘ಅಣ್ಗೋಡ ಕಳ್ಳರು’ ಎನ್ನುವ ಕುಮಾರರಾಮನ ‘ಪ್ರತಿನಿಧಿಗಳ’ ಕುರಿತು ಜನರಲ್ಲಿ ಭಕ್ತಿಯ ಜೊತೆಗೆ ಗೌರವ-ಪ್ರೀತಿ ಇದೆ. ಅಣ್ಗೋಡ ಕಳ್ಳನಾಗಿ ಸಂಚರಿಸುವ ಇವರಿಗೆ ಹೂವಿನ ಮಕ್ಕಳು ಎಂದೂ ಕರೆಯಲಾಗುತ್ತದೆ. ವ್ರತಾಧಾರಿಗಳಾದ ಇವರು ಕೆಲವೊಂದು ನೇಮ ನಿಷ್ಠೆಗಳನ್ನು ಪಾಲಿಸಬೇಕು. ಸಾಂಪ್ರದಾಯಿಕವಾಗಿ ಹಾಗೂ ಹರಕೆಯ ಅಂಗವಾಗಿ ನಡೆಯುವ ಈ ಸೇವೆಯಲ್ಲಿ ಕೆಲವೊಮ್ಮೆ ಮಕ್ಕಳೂ ಭಾಗಿಯಾಗುತ್ತಾರೆ.

ಧಾರ್ಮಿಕ ಕಾರ್ಯಗಳು 5ರಿಂದ:ಈ ವರ್ಷ ಅಣ್ಗೋಡ ಹಬ್ಬವು ಮೇ 16ರಂದು ಆರಂಭವಾಗಲಿದೆ. ಹಬ್ಬಕ್ಕೆ ಮೊದಲು ಮೇ 5ರಿಂದ ಎರಡು ದಿನ ಕೇತ್ರದಲ್ಲಿ ದೇವಸ್ಥಾನ ಪುನರ್ ನಿರ್ಮಾಣ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ದೇವಸ್ಥಾನದಲ್ಲಿ ಕುಮಾರರಾಮ ದೇವರ ಜೊತೆಗೆ ಮಹಾಸತಿ ದೇವರ ವಿಗ್ರಹಗಳಿವೆ. ದೇವಸ್ಥಾನವನ್ನು ₹ 2.5 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ದೇವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು, ವಾಸ್ತುಶಿಲ್ಪ ಶಾಸ್ತ್ರದ ಆಧಾರದಲ್ಲಿ ಭಕ್ತರ ಸಹಕಾರದೊಂದಿಗೆ ಶಿಲಾಮಯ ದೇವಸ್ಥಾನ ನಿರ್ಮಾಣವಾಗಿದೆ.

‘ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪ್ರತಿಷ್ಠಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಸಚಿವ ಸುನೀಲ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದು ಮೋಹನ ನಾಯ್ಕ ತಿಳಿಸಿದರು.

‘ಹಿಂದೂ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡಿದ್ದೇನೆ. ಕುಮಾರರಾಮ ದೇವಸ್ಥಾನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹ 5 ಲಕ್ಷ ನೆರವು ನೀಡಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ 36 ಅಡಿ ಎತ್ತರದ ಬೃಹತ್ ಶೂಲಕಂಭದ ಪ್ರತಿಷ್ಠಾಪನೆಯನ್ನು ಕೂಡ ಮಾಡಲಾಗುವುದು’ ಎಂದು ಕಾರ್ಯಕ್ರಮ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಸುನೀಲ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT