ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ: ವಸತಿ ಶಾಲೆಗಳೂ ಬೆಸ್ಟ್

Published 20 ಮೇ 2024, 6:10 IST
Last Updated 20 ಮೇ 2024, 6:10 IST
ಅಕ್ಷರ ಗಾತ್ರ

ಕಾರವಾರ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್) ಅಧೀನದಲ್ಲಿರುವ ಜಿಲ್ಲೆಯ 23 ವಸತಿ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಸಾಧಿಸಿದ್ದಾರೆ.

ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಕುಟುಂಬಗಳ ಹಿನ್ನೆಲೆಯ ವಿದ್ಯಾರ್ಥಿಗಳೇ ಹೆಚ್ಚಿರುವ ವಸತಿ ಶಾಲೆಗಳ ಫಲಿತಾಂಶ ಖಾಸಗಿ ಶಾಲೆಗಳನ್ನೂ ಮೀರಿಸುವಂತಿದೆ. ಬಡವರು, ಶ್ರಮಿಕ ಕುಟುಂಬಗಳ ಮಕ್ಕಳು ವಸತಿ ಶಾಲೆಯಲ್ಲಿ ವರ್ಷವಿಡೀ ವಾಸವಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರ ಒದಗಿಸಿದ ಸೌಲಭ್ಯಗಳ ಸದ್ಬಳಕೆ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದು ಸಮಾಧಾನಕರ ಸಂಗತಿ ಎನ್ನುತ್ತಾರೆ ಅಧಿಕಾರಿಗಳು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ, ಕ್ರೈಸ್ ಅಧೀನದಲ್ಲಿನ ವಸತಿ ಶಾಲೆಗಳ 836 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 820 ಮಂದಿ ಉತ್ತೀರ್ಣಗೊಂಡಿದ್ದಾರೆ. ಒಟ್ಟಾರೆಯಾಗಿ ಶೇ 97.97 ರಷ್ಟು ಫಲಿತಾಂಶ ದಾಖಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 7 ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಲಾ 5 ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆಗಳಿವೆ. ಹಳಿಯಾಳದ ಮದನಹಳ್ಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಇದೆ.

ಇವುಗಳ ಪೈಕಿ 15 ವಸತಿ ಶಾಲೆಗಳ ವಿದ್ಯಾರ್ಥಿಗಳು ಶೇ 100 ರಷ್ಟು ಫಲಿತಾಂಶ ಸಾಧಿಸಿದ್ದಾರೆ. ಐದು ಶಾಲೆಗಳ ಫಲಿತಾಂಶ ಶೇ 95ಕ್ಕಿಂತ ಹೆಚ್ಚಿದೆ. 2 ಶಾಲೆಗಳು ಶೆ 92ಕ್ಕಿಂತ ಹೆಚ್ಚು ಮತ್ತು ಒಂದು ಶಾಲೆ ಮಾತ್ರ ಶೇ 80.77 ರಷ್ಟು ಫಲಿತಾಂಶ ಸಾಧಿಸಿದೆ. ಕಾವಂಚೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವರ್ಷಾ ಮಡ್ಲೂರ 621 ಅಂಕಗಳಿಕೆಯೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

‘ವಸತಿ ಶಾಲೆಗಳಲ್ಲಿ ವರ್ಷದ 11 ತಿಂಗಳು ಕಾಲ ವಿದ್ಯಾರ್ಥಿಗಳು ಶಿಕ್ಷಕರ ಜತೆಯಲ್ಲೇ ಇರುತ್ತಿದ್ದರು. ತರಗತಿ ಅವಧಿ ಮುಗಿದ ಬಳಿಕವೂ ಅವರಿಗೆ ವಿಶೇಷ ತರಗತಿ ನಡೆಸಲು ಅವಕಾಶ ಆಗುತ್ತಿತ್ತು. ಅದರಲ್ಲಿಯೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಿಂದಲೂ ಹೆಚ್ಚುವರಿ ತರಗತಿ ತೆಗೆದುಕೊಳ್ಳಲಾಗುತ್ತಿತ್ತು. ಇದು ಫಲಿತಾಂಶ ಹೆಚ್ಚಿಸಲು ನೆರವಾದವು’ ಎಂದು ಕ್ರೈಸ್ ನೋಡಲ್ ಅಧಿಕಾರಿಯೂ ಆಗಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಡಿಸೆಂಬರ್ ವೇಳೆಗೆ ಪಠ್ಯ ಬೋಧನೆ ಪೂರ್ಣಗೊಂಡಿತು. ಬಳಿಕ ಎರಡು ತಿಂಗಳು ಸತತವಾಗಿ ಪಾಠಗಳನ್ನು ಮನನ ಮಾಡಿಸಲಾಯಿತು. ಉಳಿದ ಶಾಲೆಗಳಲ್ಲಿ ಸರಾಸರಿ ಮೂರರಿಂದ ನಾಲ್ಕು ಪೂರ್ವ ಸಿದ್ಧತೆ ಪರೀಕ್ಷೆ ನಡೆಸಿದರೆ ವಸತಿ ಶಾಲೆಗಳಲ್ಲಿ ಆರು ಪರೀಕ್ಷೆ ನಡೆಸಲಾಯಿತು. ಈ ಮೂಲಕ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ವೃದ್ಧಿಸಲಾಯಿತು’ ಎಂದೂ ಹೇಳಿದರು.

ವಸತಿ ಶಾಲೆಗಳಲ್ಲಿನ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಅನುಭವಿ ಶಿಕ್ಷಕರಿಂದ ವಿಶೇಷ ತರಗತಿಯ ಬೋಧನೆ ಫಲಿತಾಂಶ ಹೆಚ್ಚಳಕ್ಕೆ ಪೂರಕವಾದವು.
ಅಜ್ಜಪ್ಪ ಸೊಗಲದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

ಶೇ 100 ಸಾಧನೆಗೈದ ಶಾಲೆಗಳಿವು

* ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇಡಬರಿ

* ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶೇಡಬರಿ

* ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಣಸಗೇರಿ

* ಅಟಲ್ ಬಿಹಾರಿ ವಸತಿ ಶಾಲೆ ಮದನಹಳ್ಳಿ

* ಡಾ.ಬಿ.ಆರ್ ಅಂಬೇಡ್ಕರ ವಸತಿ ಶಾಲೆ ಅಳ್ಳಂಕಿ

* ಇಂದಿರಾ ಗಾಂಧಿ ವಸತಿ ಶಾಲೆ ಮಂಕಿ

* ಮೊರಾರ್ಜಿ ದೇಸಾಯಿ ವಸತಿ ಶಾಲೆ ಜೊಯಿಡಾ

* ಡಾ.ಬಿ.ಆರ್.ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ ಕಾರವಾರ

* ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ಶಾಲೆ ಕುಮಟಾ

* ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಗೋಕರ್ಣ

* ಇಂದಿರಾ ಗಾಂಧಿ ವಸತಿ ಶಾಲೆ ಪಾಳಾ

* ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಾವಂಚೂರ

* ಇಂದಿರಾ ಗಾಂಧಿ ವಸತಿ ಶಾಲೆ ಹಾರ್ಸಿಕಟ್ಟಾ

* ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಹುಲೇಕಲ್

* ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT