ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಹನಿ ನೀರಾವರಿಯಲ್ಲಿ ಹಲವು ಬೆಳೆ ಬೆಳೆದು ಸೈ ಎನಿಸಿಕೊಂಡ ನಿವೃತ್ತ ಯೋಧ

ಶಿರಸಿ ತಾಲ್ಲೂಕಿನ ಲಂಡಕನಹಳ್ಳಿಯ ಲಿಬರ್ಟ್ ವಾಜ್ ಮಾದರಿ ಕೃಷಿ
Published 24 ಮೇ 2024, 5:09 IST
Last Updated 24 ಮೇ 2024, 5:09 IST
ಅಕ್ಷರ ಗಾತ್ರ

ಶಿರಸಿ: ಚಿರೇ ಕಲ್ಲಿನಂಥ ಒಣ ಭೂಮಿ, ಸುತ್ತಮುತ್ತ ನೀರಿನ ತುಟಾಗ್ರತೆ, ಜಮೀನಿನ ನಡುವೆ ಹಾದು ಹೋಗಿರುವ ಹೈಟೆನ್ಶನ್ ತಂತಿ ಮಾರ್ಗ ಇಂಥ ಸಮಸ್ಯೆಗಳನ್ನು ತಾಳ್ಮೆ ಹಾಗೂ ಬುದ್ದಿವಂತಿಕೆಯಿಂದ ಪರಿಹರಿಸಿಕೊಂಡ ನಿವೃತ್ತ ಯೋಧನೊಬ್ಬ ಬಹುಬೆಳೆ ಮಾದರಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. 

ಶಿರಸಿ ತಾಲ್ಲೂಕಿನ ಲಂಡಕನಹಳ್ಳಿಯ ಲಿಬರ್ಟ್ ಅಂಥೋನ್ ವಾಜ್ ಚಿರೇ ಭೂಮಿಯಲ್ಲಿ ವಿವಿಧ ಬೆಳೆ ಬೆಳೆದು ಯಶಸ್ಸಿನತ್ತ ಸಾಗುತ್ತಿದ್ದಾರೆ. ಆರು ಎಕರೆಗೂ ಹೆಚ್ಚಿನ ಜಮೀನಿನಲ್ಲಿ 2 ಸಾವಿರ ಅಡಿಕೆ ಗಿಡ, ನೂರಾರು ಚಿಕ್ಕು, ಗೇರು, ಮಾವು, ದಾಲ್ಚಿನ್ನಿ ಗಿಡಗಳು, ನೂರಾರು ಕಾಳುಮೆಣಸು ಬಳ್ಳಿಗಳು ಇವೆ. ಜಮೀನಿನ ಬೇಲಿಯುದ್ದಕ್ಕೂ 1500ರಷ್ಟು ಸಿಲ್ವರ್ ಓಕ್, 50 ಮಹಾಗನಿ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ವಿಶೇಷ ಎಂದರೆ ಇವುಗಳಿಗೆಲ್ಲ ನೀರಿನ ಮೂಲ ಇದೇ ಕೃಷಿ ಭೂಮಿಯಾಗಿದೆ. ಜಮೀನಿನಲ್ಲಿ ಬಿದ್ದ ನೀರು ಕೃಷಿ ಹೊಂಡದ ಮೂಲಕ ಪಂಪ್ ಆಗಿ ಹನಿ ಹನಿಯಾಗಿ ಬೆಳೆಗಳ ಬೇರು ತಂಪಾಗಿಸುತ್ತದೆ.

‘ಸದ್ಯ ಹನಿ ನೀರು ಉಂಡು ಬಾಳೆ, ಗೇರು, ಚಿಕ್ಕು, ಮಾವು ಫಲ ನೀಡುತ್ತಿವೆ. ಶಿರಸಿಯ ಹಣ್ಣು ವ್ಯಾಪಾರಿಗಳು ಸ್ಥಳಕ್ಕೆ ಬಂದು ಖರೀದಿಸಿ ಹೋಗುತ್ತಾರೆ. ಜಮೀನು ನಿರ್ವಹಣೆಗೆ ಬೇಕಾದಷ್ಟು ಆದಾಯ ಸದ್ಯ ಬರುತ್ತಿದೆ. ಭವಿಷ್ಯದಲ್ಲಿ ಅಡಿಕೆ, ತೆಂಗು ಹೆಚ್ಚಿನ ಇಳುವರಿ ಬರುತ್ತದೆ. ಆಗ ನಿಶ್ಚಿತವಾಗಿ ಹೆಚ್ಚಿನ ಲಾಭ ದೊರಕುತ್ತದೆ’ ಎನ್ನುತ್ತಾರೆ ಅವರು. 

ಕೃಷಿ ಹೊಂಡಗಳೇ ಆಧಾರ: ಬರಡು ಭೂಮಿಯಲ್ಲಿ ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದರು. ಅದನ್ನೇ ನಂಬಿ ಎರಡು ಸಾವಿರದಷ್ಟು ಬಾಳೆಗಿಡ ನಾಟಿ ಮಾಡಿದ್ದರು. ಇನ್ನೆರಡು ತಿಂಗಳಲ್ಲಿ ಬಾಳೆಗೊನೆ ಕೊಯ್ಲು ಮಾಡುವುದಿದೆ ಎಂಬ ಘಳಿಗೆಯಲ್ಲಿ ಕೊಳವೆ ಬಾವಿಯಲ್ಲಿನ ನೀರು ಖಾಲಿಯಾಗಿತ್ತು. ಬಿರು ಬೇಸಿಗೆಯ ಕಾರಣ ನೀರಿಲ್ಲದೆ ಎಲ್ಲ ಗಿಡಗಳು ನಾಶವಾಗಿದ್ದವು. ಇದರಿಂದ ಕಂಗೆಟ್ಟ ಕೃಷಿಕ ವಾಜ್, ಜಮೀನಿನಲ್ಲಿ ಹಾದುಹೋದ ಹೈಟೆನ್ಶನ್ ತಂತಿಯ ಕೆಳಗಿನ ಖಾಲಿ ಜಾಗದಲ್ಲಿ 20 ಹಾಗೂ 30 ಅಡಿ ಆಳ ಹಾಗೂ ಅಗಲದ ಬೃಹತ್ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಿಸಿ, ಪ್ರಸ್ತುತ ಇರುವ ಬೆಳೆಗಳಿಗೆ ಇದೇ ಹೊಂಡಗಳ ನೀರನ್ನು ಬಳಸಿಕೊಳ್ಳುತ್ತಿದ್ದಾರೆ.

‘ಜಮೀನಿನಲ್ಲಿ ಬಿದ್ದ ನೀರು ಈ ಹೊಂಡಗಳಿಗೆ ಸಾಗುತ್ತದೆ. ಒಂದು ಹೊಂಡದಲ್ಲಿ ಏಪ್ರಿಲ್ ವರೆಗೆ ನೀರಿರುತ್ತದೆ. ಇನ್ನೊಂದರಲ್ಲಿ ಸದಾಕಾಲ ನೀರು ಸಂಗ್ರಹ ಇರುತ್ತದೆ. ಈ ವರ್ಷದ ಬರಗಾಲದಂಥ ಸಂದರ್ಭದಲ್ಲಿಯೂ ಎಲ್ಲ ಗಿಡಗಳಿಗೆ ನಿತ್ಯವೂ ನೀರುಣಿಸಲಾಗಿದೆ. ಜಮೀನಿನಲ್ಲಿ ಕೃಷಿ ಹೊಂಡಗಳ ರಚನೆ, ಹನಿ ನೀರಾವರಿ ವ್ಯವಸ್ಥೆಯಿದ್ದರೆ ಎಂಥದೇ ಪರಿಸ್ಥಿತಿಯಲ್ಲಿಯೂ ಕೃಷಿ ಮಾಡಬಹುದು’ ಎಂದು ವಾಜ್ ತಿಳಿಸಿದರು. 

ಹನಿ ಹನಿ ನೀಡಿದರೆ ಉತ್ತಮ: ‘ಭೂಮಿ ಸವಳು ಆಗುವಷ್ಟು ನೀರು ಎಂದಿಗೂ ಕೊಡಬಾರದು. ಹೀಗಾಗಿ ಹನಿ ನೀರಾವರಿ ವ್ಯವಸ್ಥೆ ಅಡಿಕೆ, ತೆಂಗು, ಕಾಳುಮೆಣಸು ಸೇರಿ ಎಲ್ಲ ಬೆಳೆಗಳಿಗೂ ಅ‌ನುಕೂಲ. ನೀರ ಕೊರತೆಯ ಕಾರಣಕ್ಕೆ ಮಾತ್ರ ಹನಿ ನೀರಾವರಿ ವ್ಯವಸ್ಥೆ ಉತ್ತಮವೆಂಬುವ ವಾದ ಸರಿಯಲ್ಲ. ಎಲ್ಲ ಕಾಲಕ್ಕೂ ಡ್ರಿಪ್ ವ್ಯವಸ್ಥೆ ರೈತನ ಕೈಹಿಡಿಯುತ್ತದೆ’ ಎನ್ನುತ್ತಾರೆ ಅವರು. 

ಹವ್ಯಾಸಕ್ಕಾಗಿ ಕೃಷಿ: ‘ಭಾರತೀಯ ಸೈನ್ಯದ ಆಟ್ಲರಿ ರೆಜಿಮೆಂಟ್ ನಲ್ಲಿ ವೈರ್ ಲೆಸ್ ಆಪರೇಟರ್ ಆಗಿದ್ದಾಗ ಕಾರ್ಗಿಲ್ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದ್ದೆ. ನಂತರ ನಿವೃತ್ತಿಯಾದಾಗ ಹವ್ಯಾಸಕ್ಕಾಗಿ ಕೃಷಿಯಲ್ಲಿ ತೊಡಗಿಕೊಂಡೆ. ಬಾಲಕನಿದ್ದಾಗಿನಿಂದಲೂ ನನಗೆ ಕೃಷಿಯಲ್ಲಿ ಆಸಕ್ತಿಯಿತ್ತು. ನಾನು ಕೃಷಿಯನ್ನು ಎಂದಿಗೂ ಆದಾಯದ ದೃಷ್ಟಿಯಿಂದ ನೋಡಿಲ್ಲ. ಕೃಷಿ ಕಾರ್ಯದಲ್ಲಿ ಸಂತಸ ಪಡುತ್ತೇನೆ. ಯೋಧ ದೇಶದ ಗಡಿ ರಕ್ಷಿಸಿದರೆ, ರೈತ ದೇಶವನ್ನು ಒಳಗಿಂದ ಭದ್ರಗೊಳಿಸುತ್ತಾನೆ’ ಎಂದರು. 

ಲಿಬರ್ಟ್ ವಾಜ್ ತೋಟದಲ್ಲಿರುವ ಕೃಷಿ ಹೊಂಡ
ಲಿಬರ್ಟ್ ವಾಜ್ ತೋಟದಲ್ಲಿರುವ ಕೃಷಿ ಹೊಂಡ
ನಿವೃತ್ತಿ ಬದುಕಿಗೆ ಕೃಷಿ ಬೇಕು. ಆದಾಯದ ಯೋಚನೆ ಮಾಡಬಾರದು. ಭೂಮಿ ನಮ್ಮ ಎಲ್ಲ ಭಾವನೆಗೂ ವೇದಿಕೆ ಒದಗಿಸುತ್ತದೆ.
–ಲಿಬರ್ಟ್ ಅಂಥೋನ್ ವಾಜ್, ಮಾದರಿ ಕೃಷಿಕ
ಕೃಷಿ ಹಿನ್ನೆಲೆ ಇಲ್ಲದ ವಾಜ್ ಅವರು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡು ಮಾಡಿದ ಮಿಶ್ರ ಕೃಷಿ ಮಾದರಿಯಾಗಿದೆ.
–ನಂದೀಶ ಆರ್. ಕೃಷಿ ಅಧಿಕಾರಿ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT