ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು, ಒಂದು ತಿಂಗಳಾಗಿದೆ. ದುರ್ಘಟನೆಯಲ್ಲಿ ಕಾಣೆಯಾದ ಮೂವರ ಪತ್ತೆಗೆ ಮತ್ತು ಗಂಗಾವಳಿ ನದಿಯಲ್ಲಿ ಮುಳುಗಿದ ಲಾರಿ ಹೊರತೆಗೆಯಲು ಶುಕ್ರವಾರ ಕಾರ್ಯಾಚರಣೆ ವೇಗ ಪಡೆಯಿತು. ನದಿಗೆ ಉರುಳಿದ್ದ ಗ್ಯಾಸ್ ಟ್ಯಾಂಕರ್ ವಾಹನದ ಕೆಲ ಅವಶೇಷಗಳು ಸಿಕ್ಕಿವೆ.
ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ತಂಡ, ನೌಕಾದಳದ ಮುಳುಗು ತಜ್ಞರು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸದಸ್ಯರು, ಸ್ಥಳಿಯ ಮೀನುಗಾರರು ಸೇರಿ ಕಾರ್ಯಾಚರಣೆ ನಡೆಸಿದ್ದಾರೆ. ಯಲ್ಲಾಪುರ ಭಾಗದಲ್ಲಿ ಮಳೆ ಸುರಿದ ಪರಿಣಾಮ ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ರಭಸ ಪಡೆದಿದೆ.
‘ನದಿಯಲ್ಲಿ ಬಿದ್ದ ಮರಗಳಿಗೆ ಕಬ್ಬಿಣದ ಹಗ್ಗ ಕಟ್ಟಲಾಗಿದೆ. ಕ್ರೇನ್‌ನಿಂದ ಅವುಗಳನ್ನು ಎಳೆದು, ದಡಕ್ಕೆ ತರಲಾಗುವುದು. ನಂತರ ಮುಂದಿನ ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.