ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅರ್ಧಕ್ಕಿಳಿದ ಅಡಿಕೆ ಇಳುವರಿ!

Published 2 ಜನವರಿ 2024, 4:43 IST
Last Updated 2 ಜನವರಿ 2024, 4:43 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ ಕೊಯ್ಲು ಹಂಗಾಮು ಆರಂಭವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅರ್ಧದಷ್ಟು ಇಳುವರಿ ಕುಂಠಿತದಿಂದ ಬೆಳೆಗಾರರು ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದಾರೆ.  

ಜಿಲ್ಲೆಯಲ್ಲಿ 33,364 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವಾರ್ಷಿಕ ಅಂದಾಜು 8.40 ಲಕ್ಷ ಕ್ವಿಂಟಲ್‌ಗೂ ಹೆಚ್ಚಿನ ಅಡಿಕೆ ಉತ್ಪಾದನೆ ಆಗುತ್ತದೆ. ಆದರೆ ಈ ಬಾರಿ ಮಾತ್ರ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆಗೆ ತಗುಲಿದ ರೋಗ, ಕೈ ಕೊಟ್ಟ ಮಳೆ, ಏರದ ಬಿಸಿಲ ತಾಪದಿಂದ ಅಡಿಕೆ ಇಳುವರಿ ಅರ್ಧದಷ್ಟು ಇಳಿಮುಖವಾಗಿರುವುದು ಇದಕ್ಕೆ ಕಾರಣವಾಗಿದೆ. 

'ಕಳೆದ ವರ್ಷ ಕೊಳೆ ರೋಗದ ಕಾರಣಕ್ಕೆ ಮರಗಳಿಗೆ ಹಾನಿಯಾಗಿತ್ತು. ಈ ವರ್ಷ ಅಂಥ ಮರಗಳಿಗೆ ಹಿಂಗಾರ ಕಚ್ಚಿಲ್ಲ. ಎಲೆಚುಕ್ಕೆ ರೋಗ ಉಲ್ಬಣಿಸಿದ ಕಾರಣ ಬಹುತೇಕ ಹಿಂಗಾರ ಒಣಗಿದ್ದವು. ಮಳೆ ಕೊರತೆಯಿಂದ ಎದುರಾದ ಅತಿ ಉಷ್ಣಾಂಶಕ್ಕೆ ಎಳೆಯ ಕಾಯಿಗಳು ಉದುರಿದ್ದವು. ವನ್ಯಜೀವಿಗಲ ಉಪಟಳದ ಜತೆ  ಮಂಗಗಳ ಕಾಟ ತೀವ್ರವಾಗಿತ್ತು. ಇಂಥ ಹಲವು ಕಾರಣವು ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ' ಎನ್ನುತ್ತಾರೆ ಬೆಳೆಗಾರ ಸತ್ಯನಾರಾಯಣ ಗೌಡ ಕೊಪ್ಪ. 

'ಅಡಿಕೆ ಬೆಳೆಗಾರರು ಇಳುವರಿ ಕುಂಠಿತದಿಂದ ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಅಡಿಕೆ ಕೊನೆ ಕೊಯ್ಲಿನ ಹಂಗಾಮಾಗಿದ್ದು, ಫಸಲು ಗುತ್ತಿಗೆ, ಹಸಿ ಅಡಿಕೆ ವ್ಯಾಪಾರ, ಸಂಸ್ಕರಣೆ ಕಾರ್ಯ ಜೋರಾಗಿದೆ. ಈ ವೇಳೆ ಇಳುವರಿ ಪ್ರಮಾಣ ಪ್ರತಿ ವರ್ಷಕ್ಕಿಂತ ಅರ್ಧದಷ್ಟು ಇಳಿದಿರುವುದು ಕಂಡುಬರುತ್ತಿದೆ. ಕಳೆದ ವರ್ಷ 15 ಕ್ವಿಂಟಲ್ ಒಣ ಅಡಿಕೆ ಲಭಿಸಿತ್ತು. ಈ ಬಾರಿ 6-7 ಕ್ವಿಂಟಲ್ ಅಡಿಕೆ ಸಿಕ್ಕರೆ ಹೆಚ್ಚು. ದರವೂ ಏರುಗತಿ ಆಗಿಲ್ಲ. ಪರಿಸ್ಥಿತಿ ಹೀಗೇ ಇದ್ದರೆ ಜೀವನ ನಿರ್ವಹಣೆ ಕಷ್ಟ' ಎನ್ನುತ್ತಾರೆ ಸಿದ್ದಾಪುರದ ಅಡಿಕೆ ಬೆಳೆಗಾರ ಮಂಜುನಾಥ ಹೆಗಡೆ.

'ಕಳೆದ ವರ್ಷ ಉತ್ತಮ ಇಳುವರಿಯಿದ್ದ ಕಾರಣ ಮಾರುಕಟ್ಟೆಗೆ ಈ ವೇಳೆ ಅತ್ಯಧಿಕ ಉತ್ಪನ್ನ ಬಂದಿತ್ತು. ಈ ವರ್ಷ ಇಳುವರಿ ಕುಸಿತದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಈವರೆಗೆ ಶೇ 20ರಷ್ಟು ಮಾತ್ರ ಉತ್ಪನ್ನ ಮಾರುಕಟ್ಟೆಗೆ ಬಂದಿದೆ. ಇದರಿಂದ ಬೆಳೆಗಾರರಿಗೆ ಮಾತ್ರವಲ್ಲ ವ್ಯಾಪಾರಿಗಳಿಗೂ ದೊಡ್ಡ ನಷ್ಟವಾಗುತ್ತಿದೆ' ಎನ್ನುತ್ತಾರೆ ಅಡಿಕೆ ವ್ಯಾಪಾರಿ ರಾಮಚಂದ್ರ ಹೆಗಡೆ. 

ಈ ಬಾರಿ ಅಡಿಕೆ ಉತ್ಪಾದನೆ ಪ್ರಮಾಣ ಕಡಿಮೆಯಿದೆ. ಸಹಕಾರಿ ಸಂಘಗಳು ಇರುವ ಉತ್ಪನ್ನಕ್ಕೆ ಹೆಚ್ಚಿನ ದರ ಲಭಿಸುವಂತೆ ಕ್ರಮವಹಿಸಬೇಕು
ಉದಯ ಭಟ್ ಶಿರಸಿ ಅಡಿಕೆ ಬೆಳೆಗಾರ
ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕಾರಣಕ್ಕೆ ಹಿಂಗಾರ ಹಾಳಾಗುವ ಜತೆ ಎಳೆಯ ಅಡಿಕೆ ಉದುರಿವೆ. ಇಲಾಖೆ ಮಾಹಿತಿಯ ಪ್ರಕಾರ ಶೇ.40ರಷ್ಟು ಬೆಳೆ ಮಣ್ಣು ಪಾಲಾಗಿದೆ
ಸತೀಶ ಹೆಗಡೆ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT