ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಉಷ್ಣಾಂಶ ಹೆಚ್ಚಳ, ನೆಲಕಚ್ಚುತ್ತಿರುವ ಅಡಿಕೆ ಮುಗುಡು

Published 2 ಮಾರ್ಚ್ 2024, 5:01 IST
Last Updated 2 ಮಾರ್ಚ್ 2024, 5:01 IST
ಅಕ್ಷರ ಗಾತ್ರ

ಶಿರಸಿ: ಏರುತ್ತಿರುವ ಉಷ್ಣಾಂಶವು ಅರೆಬಯಲು ನಾಡಿನ ಅಡಿಕೆಯಲ್ಲಿ ಬಿಳಿ ಮುಗುಡು (ಎಳೆಯ ನಳ್ಳಿ) ಉದುರುವಿಕೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ತೀವ್ರ ಇಳುವರಿ ಕುಸಿತಕ್ಕೆ ಕಾರಣವಾಗುವ ಈ ಸಮಸ್ಯೆಗೆ ಪರಿಹಾರ ಕಾಣದೆ ಬೆಳೆಗಾರರು ಹೈರಾಣಾಗಿದ್ದಾರೆ. 

ಈಗ ಅಡಿಕೆ ಹಿಂಗಾರ ಅರಳಿ ಎಳೆ ನಳ್ಳಿಗಳು ಕಾಯಿಗಟ್ಟುವ ಕಾಲ. ಈ ದಿನಗಳಲ್ಲಿ ಅಡಿಕೆ ತೋಟಗಳಿಗೆ ನೆಲದಲ್ಲೂ, ಕೊಂಬೆಯಲ್ಲೂ ತಂಪಿರಬೇಕಾದ ಕಾಲಘಟ್ಟ. ಆದರೆ ಈ ವರ್ಷ ಏರುತ್ತಿರುವ ತಾಪಮಾನ ಅಡಿಕೆ ತೋಟಗಳ ಕೊಂಬೆಯನ್ನು ನಲುಗಿಸುತ್ತಿದೆ. ತೋಟಗಳಲ್ಲಿ ಬಿಸಿಗಾಳಿ. ಹೀಗಾಗಿ ಅಡಿಕೆ ತೋಟಗಳ ಕೊಂಬೆಯಲ್ಲಿ ಅಸ್ಥಿರ ವಾತಾವರಣ ಉಂಟಾಗುತ್ತಿದೆ. ಇದರಿಂದಾಗಿ ಅಡಿಕೆ ಮರಗಳ ಹಿಂಗಾರದಿಂದ ಕಾಯಿಗಟ್ಟುತ್ತಿರುವ ನಳ್ಳಿಗಳು ಗೊನೆಯಿಂದ ಕಳಚಿ ಉದುರುತ್ತಿವೆ. 

ಸಾಮಾನ್ಯವಾಗಿ ಅಡಿಕೆ ತೋಟಗಳು 35 ಡಿಗ್ರಿ ಸೆಲ್ಸಿಯಸ್ ತನಕದ ಉಷ್ಣಾಂಶವನ್ನು ತಾಳಿಕೊಳ್ಳುತ್ತವೆ. ಆದರೆ ಈಗ ಅದಕ್ಕಿಂತ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಇದರಿಂದಾಗಿ ಅಡಕೆ ಮರಗಳಲ್ಲಿ ಎಳೆಗಾಯಿಗಟ್ಟುತ್ತಿರುವ ನಳ್ಳಿಗಳು ಅಕಾಲಿಕವಾಗಿ ಉದುರಿ ಬೀಳಲಾರಂಭಿಸಿವೆ. ತೋಟದ ಯಾವುದೇ ಮರದ ಬುಡದಲ್ಲಿ ನೋಡಿದರೂ ಎಳೆಯ ನಳ್ಳಿಗಳು ರಾಶಿಯಾಗಿ ಬಿದ್ದಿರುವುದು ಕಾಣುತ್ತದೆ. ಮಾರ್ಚ್ ಆರಂಭದ ತಾಪಮಾನಕ್ಕೆ ಹೀಗಾದರೆ ಮುಂಬರುವ ಬಿಸಿದ ಧಗೆಗೆ ಅಡಿಕೆ ಬೆಳೆ ಉಳಿಸಿಕೊಳ್ಳುವುದು ಕಷ್ಟ ಎಂಬ ಭಾವನೆಗೆ ಬೆಳೆಗಾರರು ಬಂದಿದ್ದಾರೆ. 

‘ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಹಾಗೂ ಮುಂಡಗೋಡ ತಾಲ್ಲೂಕುಗಳ ಹಲವು ಅಡಿಕೆ ತೋಟಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. 'ದಿನಕ್ಕೆ ನಾಲ್ಕು ತಾಸು ನೀರು ಹಾಯಿಸುವ ತೋಟಗಳಲ್ಲೂ ಹಿಂಗಾರ ಸುಡುತ್ತಿದ್ದು, ಬಿಳಿ ಮುಗುಡು ಉದುರುತ್ತಿದೆ. ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಈಗಾಗಲೇ ಶೇ.25ಕ್ಕೂ ಹೆಚ್ಚು ನಳ್ಳಿ ಉದುರಿದೆ. ಮುಂದಿನ ವರ್ಷದ ಇಳುವರಿ ಕುಸಿಯುವುದು ನಿಶ್ಚಿತ'  ಎನ್ನುತ್ತಾರೆ ಗುಡ್ನಾಪುರದ ಕೃಷಿಕ ಸುರೇಶ ನಾಯ್ಕ. 

‘ಸಾಮಾನ್ಯವಾಗಿ ಆರು ಕಾರಣಗಳಿಂದಾಗಿ ನಳ್ಳಿ ಉದುರುತ್ತದೆ. ಉಷ್ಣ ತಾಪಮಾನ, ಮರಗಳ ಶಕ್ತಿ ಸಾಮರ್ಥ್ಯ, ಕೀಟಬಾಧೆ, ಶಿಲೀಂಧ್ರಗಳು, ರೋಗರುಜಿನ, ಪೋಷಕಾಂಶಗಳ ಕೊರತೆ. ಆದ್ದರಿಂದ ಸಾಮಾನ್ಯವಾಗಿ ನಳ್ಳಿಗಳಿಗೆ ಸಿಂಪರಣೆ ಮಾಡಿದರೆ ಯಾವುದೇ ಪರಿಣಾಮ ಕಾಣುವುದಿಲ್ಲ. ಯಾವ ಕಾರಣಕ್ಕೆ ನಳ್ಳಿ ಉದುರುತ್ತದೆ ಎಂಬುದನ್ನು ಖಚಿತ ಮಾಡಿಕೊಳ್ಳದೇ ಮಾಡುವ ಪರಿಹಾರಗಳು ಕೈ ಕೊಡುತ್ತವೆ‘ ಎಂದು ತೋಟಗಾರಿಕಾ ವಿಜ್ಞಾನಿಗಳು ಹೇಳುತ್ತಾರೆ.

ಅಡಿಕೆ ತೋಟದಲ್ಲಿ ಉದುರಿರುವ ನಳ್ಳಿ
ಅಡಿಕೆ ತೋಟದಲ್ಲಿ ಉದುರಿರುವ ನಳ್ಳಿ
ಅಡಿಕೆ ಮರಗಳ ಬುಡಕ್ಕೆ ನೀರು ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಔಷಧಿ ಸಿಂಪಡಣೆಯ ಅವಕಾಶವೂ ಇಲ್ಲ. ಭವಿಷ್ಯದ ಚಿಂತೆ ಕಾಡುತ್ತಿದೆ.
-ಸೋಮಶೇಖರ ಗೌಡ ಬನವಾಸಿ- ಅಡಿಕೆ ಬೆಳೆಗಾರ
ಬಿಳಿ ಮುಗುಡು ಉದುರುವುದರಿಂದ ಇಳುವರಿ ಕುಸಿತವಾಗುತ್ತದೆ. ಇದು ರೈತರಿಗೆ ಆರ್ಥಿಕವಾಗಿ ಬಹುದೊಡ್ಡ ಹೊಡೆತ ನೀಡುತ್ತದೆ.
-ಸತೀಶ ಹೆಗಡೆ- ತೋಟಗಾರಿಕಾ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT