ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬಿದಿರು ಕಳಲೆಗೆ ಹೆಚ್ಚಿದ ಬೇಡಿಕೆ

ಮಾರುಕಟ್ಟೆಗೆ ಬಂದ ಮಳೆಗಾಲದ ತಿನಿಸು
Published 3 ಜುಲೈ 2023, 6:09 IST
Last Updated 3 ಜುಲೈ 2023, 6:09 IST
ಅಕ್ಷರ ಗಾತ್ರ

ಶಿರಸಿ: ಮಳೆಗಾಲದ ತಿನಿಸುಗಳಲ್ಲೊಂದಾದ ಬಿದಿರಿನ ಕಳಲೆಗೆ ಇಲ್ಲಿನ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ ಬಂದಿದೆ. ಒಂದು ಕೆ.ಜಿ. ಅಥವಾ ಜೋಡಿ ಕಳಲೆಗೆ ₹100ರಂತೆ ಮಾರಾಟವಾಗುತ್ತಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. 

ಕಳಲೆ ಎಂದರೆ ಸಾಕು ಜನ ಮುಗಿಬಿದ್ದು ಖರೀದಿ ಮಾಡುತ್ತಾರೆ. ಮಳೆಗಾಲದ ಅತಿಥಿಯಾಗಿರುವ ಈ ಕಳಲೆ ರುಚಿಗೆ ಮಾರುಹೋಗದವರೇ ಇಲ್ಲ. ನಗರದಲ್ಲೆಲ್ಲಾದರೂ ಕಳಲೆ ಬಂದಿದೆ ಎಂದರೆ ಸಾಕು ಇಲ್ಲಿನ ಜನ ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಮುತ್ತಿಕೊಳ್ಳುತ್ತಾರೆ. ವ್ಯಾಪಾರಿಗಳು ಕೆ.ಜಿ.ಗಟ್ಟಲೆ ತಂದರೂ ಸಂಜೆಯಾಗುವಷ್ಟರಲ್ಲಿ ಎಲ್ಲಾ ಮುಗಿಸಿ, ಜೇಬು ತುಂಬಿಸಿಕೊಂಡೇ ಹಿಂದಿರುಗುತ್ತಾರೆ. ಈಗಾಗಲೇ ನಗರದ ಮಾರುಕಟ್ಟೆಗೆ ಹದವಾದ ಕಳಲೆ ಬಂದಿದ್ದು, ಪ್ರತೀ ವರ್ಷದಂತೆ ಈ ಬಾರಿಯೂ ಉತ್ತಮ ವ್ಯಾಪಾರವಾಗುತ್ತಿದೆ. ಪಕ್ಕದ ಬನವಾಸಿ, ಯಲ್ಲಾಪುರ ಭಾಗದಿಂದ ವ್ಯಾಪಾರಿಗಳು ಕಳಲೆ ತಂದು ಮಾರಾಟ ಮಾಡುತ್ತಿದ್ದು, ಒಳ್ಳೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಮಳೆಗಾಲ ಬಂತೆಂದರೆ ಬಹುತೇಕ ಮನೆಗಳಲ್ಲಿ ತಿಂಗಳು ಕಾಲ ಬಿದಿರಿನ ಕಳಲೆಯದ್ದೇ ಖಾದ್ಯ. ಆದರೆ ಎರಡು ವರ್ಷಗಳ ಹಿಂದೆ ತಾಲ್ಲೂಕಿನೆಲ್ಲೆಡೆ ಬಿದಿರಿಗೆ ಕಟ್ಟೆ ಬಂದು ನಾಶವಾದ ಕಾರಣ ಬಿದಿರ ಕಳಲೆ ಕಾಣೆಯಾಗಿದೆ. ಈಗ ಹೊರ ಪ್ರದೇಶದಿಂದ ಕಳಲೆ ತಂದು ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ತಾಲ್ಲೂಕಿನ ಸುತ್ತಮುತ್ತ ಎಲ್ಲೂ ಕಳಲೆ ಸಿಗುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೂ ಹೊರ ಪ್ರದೇಶದಿಂದ ತರುವುದು ಅನಿವಾರ್ಯ.

ಹೀಗಾಗಿ ಇಡೀ ಕಳಲೆ ತರುವ ಬದಲು ಅದನ್ನು ಸಣ್ಣಗೆ ತುಂಡರಿಸಿ, ಪ್ಯಾಕೆಟ್‌ಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿದೆ. ಕೆಲವು ವ್ಯಾಪಾರಿಗಳು ಇಡಿ ಕಳಲೆ ಕೂಡ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಶಮೆ ಜಾತಿಯ ಚಿಕ್ಕ ಕಳಲೆ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರ ದರ ದೊಡ್ಡ ಬಿದಿರಿನ ಕಳಲೆಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಿದೆ. ‘ಮೊದಲೆಲ್ಲಾ ಸಂತೆಯಲ್ಲಿ, ರಸ್ತೆ ಬದಿಗಳಲ್ಲಿ ದೊಡ್ಡ ಬಿದಿರಿನ ಕಳಲೆ ಕಡಿಮೆ ದರಕ್ಕೆ ಸಿಗುತ್ತಿತ್ತು. ಆದರೆ ಕಳಲೆ ಈ ಭಾಗದಲ್ಲಿ ಸಿಗದ ಕಾರಣ ದರ ತೀರಾ ಏರಿಕೆಯಾಗಿದೆ’ ಎಂಬುದು ಗ್ರಾಹಕಿ ವಸುಧಾ ಹೆಗಡೆ ಹೇಳುತ್ತಾರೆ.

‘ಬಿದಿರು ವ್ಯಾಪಕವಾಗಿದ್ದಾಗ ಒಂದು ಕಳಲೆಗೆ ₹20ರಿಂದ₹25ಕ್ಕೆ ಮಾರಾಟ ಆಗುತ್ತಿತ್ತು. ಈಗ ದರ ಎರಡು ಮೂರು ಪಟ್ಟು ಹೆಚ್ಚಾಗಿದೆ. ಪ್ಯಾಕೆಟ್ ಒಂದಕ್ಕೆ ₹ 80-₹120 ರವರೆಗೂ ಆಗಿದೆ. ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ಜನ, ಎಲ್ಲೆಡೆ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಕಳಲೆ ವ್ಯಾಪಾರಿ ಗಂಗಾಧರ ಮಡಿವಾಳ. 

ಉತ್ತರ ಕನ್ನಡ ಭಾಗದಲ್ಲಿ ಮಳೆಗಾಲದಲ್ಲಿ ಕಳಲೆ ತಿನ್ನುವುದು ಕಡ್ಡಾಯ. ಪ್ರಸ್ತುತ ಬಿದಿರು ನಾಶದಿಂದ ಕಳಲೆಗೆ ಬರ ಬಂದಿದೆ. ಖರೀದಿಸಿಯಾದರೂ ತಿನ್ನುವುದು ಅನಿವಾರ್ಯ
- ಭಾಗ್ಯ ಗೌಡ ಶಿರಸಿ, ಗ್ರಾಹಕಿ
ಕಳೆದ ಎರಡು ವರ್ಷಗಳಿಂದ ಕಳಲೆಗೆ ಉತ್ತಮ ದರ ಸಿಗುತ್ತಿದೆ. ಪ್ರತಿ ಮಳೆಗಾಲದ ಆರಂಭದಲ್ಲಿ ಬನವಾಸಿ ಭಾಗದಿಂದ ಕಳಲೆ ತಂದು ಶಿರಸಿಯಲ್ಲಿ ಮಾರುತ್ತೇನೆ
- ದಯಾನಂದ ನಾಯ್ಕ, ಬನವಾಸಿ ಕಳಲೆ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT