ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ರಾಜಕಾರಣದ ವರಸೆ ಬದಲಾಗಲಿದೆ: ಶಾಸಕ ಶಿವರಾಮ ಹೆಬ್ಬಾರ್

Published 16 ಮೇ 2023, 13:37 IST
Last Updated 16 ಮೇ 2023, 13:37 IST
ಅಕ್ಷರ ಗಾತ್ರ

ಶಿರಸಿ: ರಾಜಕೀಯ ವಿರೋಧಿಗಳನ್ನು ಪ್ರೀತಿಯಿಂದ ಕಂಡಿದ್ದು ನನಗೆ ಅಪಾಯ ತಂದಿಟ್ಟಿತ್ತು. ಇನ್ನು ಮುಂದೆ ನನ್ನ ರಾಜಕಾರಣದ ವರಸೆ ಬದಲಾಗಲಿದೆ ಎಂದು ಯಲ್ಲಾಪುರ ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಸೋಮವಾರ ಬನವಾಸಿ ನಾಮದೇವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ನಾನು ದ್ವೇಷ, ಅನ್ಯಾಯ ಹಾಗೂ ವಿರೋಧದ ರಾಜಕಾರಣ ಮಾಡಿಲ್ಲ. ವಿರೋಧಿಗಳನ್ನು ಪ್ರೀತಿಯಿಂದ ಕಂಡಿದ್ದೇನೆ. ಈ ಸಲ ಬಹಳ ಕಷ್ಟದ ಗೆಲುವು ಸಿಕ್ಕಿದೆ. ಬಹಳ ಜನ ಪಕ್ಷದಲ್ಲಿಯೇ ಇದ್ದು ಪಕ್ಷಕ್ಕೆ ಚೂರಿ ಹಾಕುವ, ಮೋಸ ಮಾಡುವ ಕೆಲಸ ಮಾಡಿದ್ದಾರೆ. ವಿರೋಧಿಗಳನ್ನು ಪ್ರೀತಿಯಿಂದ ಕಂಡಿದ್ದು ನನಗೆ  ಅಪಾಯವಾಗಿದೆ. ಇನ್ನು ಮುಂದೆ ನನ್ನ ರಾಜಕಾರಣ ಬದಲಾವಣೆ ಆಗುತ್ತದೆ. ಕೇಂದ್ರದಲ್ಲಿ ಮೋದಿ ಬೇಕು, ಯಲ್ಲಾಪುರ ಕ್ಷೇತ್ರದಲ್ಲಿ ಹೆಬ್ಬಾರ್ ಬೇಡ ಎಂಬ ರೀತಿಯಲ್ಲಿ ರಾಜಕಾರಣ ಮಾಡುವವರಿಗೆ ಪಕ್ಷದಲ್ಲಿ ಜಾಗವಿಲ್ಲ’ ಎಂದರು.

‘ನನ್ನ ವೈಯಕ್ತಿಕ ತೇಜೋವಧೆ ಮಾಡುತ್ತಿರುವ ಜನ ತಾಕತ್ತಿದ್ದರೆ ರಾಜಕಾರಣದಲ್ಲಿ ಎದುರಿಸಿ. ಗೆಲ್ಲಿಸುವುದು ತುಂಬಾ ಕಷ್ಟ, ಸೋಲಿಸುವುದು ಸುಲಭ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿರುಗಾಳಿ ವಿರುದ್ದ ಜಯ ಸಾಧಿಸಿದ್ದೇನೆ. ಈ ಬಾರಿ ಕಾಂಗ್ರೆಸ್ ಬಿರುಗಾಳಿಯ ನಡುವೆ ಗೆಲುವು ಸಾಧಿಸಿದ್ದೇನೆ. ಕ್ಷೇತ್ರದ ಮತದಾರರು ನನ್ನ ರಕ್ಷಕರಾಗಿದ್ದಾರೆ’ ಎಂದರು.

ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ನರಸಿಂಹ ಹೆಗಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ, ಬನವಾಸಿ ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ಸುಗಾವಿ ಗ್ರಾಪಂ ಅಧ್ಯಕ್ಷ ಪ್ರಸನ್ನ ಹೆಗಡೆ, ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಗಣೇಶ ಸಣ್ಣಲಿಂಗಣ್ಣನವರ,  ಎಪಿಎಮ್‌ಸಿ ಸದಸ್ಯರಾದ ಶಿವಕುಮಾರ್ ದೇಸಾಯಿ ಗೌಡ, ಪ್ರಶಾಂತ ಗೌಡ,  ಮಲ್ಲಸರ್ಜನ್ ಗೌಡ, ಗಣಪತಿ ನಾಯ್ಕ, ಪ್ರಸಾದ ಭಟ್ ಮಾತನಾಡಿದರು.

ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳಿಂದ ಶಾಸಕರನ್ನು ಸನ್ಮಾನಿಸಲಾಯಿತು. ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಅಧ್ಯಕ್ಷರು, ಬಿಜೆಪಿ ಮುಖಂಡರು, ಸಾವಿರಾರು ಬಿಜೆಪಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT