ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಸೌರ ವಿದ್ಯುತ್ ಪಂಪ್: ಸಿಗದ ಸಹಾಯಧನ

ಸಮರ್ಪಕ ವಿದ್ಯುತ್‍ ಪೂರೈಕೆಗೆ ಹೈರಾಣಾದ ರೈತರು
Published 25 ಏಪ್ರಿಲ್ 2024, 5:22 IST
Last Updated 25 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ಶಿರಸಿ: ಆರಂಭವಾಗದ ಗ್ರಿಡ್, ಬಗೆಹರಿಯದ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆಯಿಂದ ಬೇಸತ್ತ ಬನವಾಸಿ ಭಾಗದ ಕೃಷಿಕರು ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದ್ದು, ಸರ್ಕಾರದಿಂದ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.

ಬನವಾಸಿ ಹೋಬಳಿ ಮಳೆಯಾಶ್ರಿತ ಕೃಷಿ ವ್ಯವಸ್ಥೆ ಹೊಂದಿದೆ. ಈ ಭಾಗದ 10 ಗ್ರಾಮ ಪಂಚಾಯಿತಿ ವ್ಯಾಪ್ತಿಗೆಂದು ಪ್ರತ್ಯೇಕ ವಿದ್ಯುತ್ ಗ್ರೀಡ್ ಮಂಜೂರಾಗಿ ಹಲವು ವರ್ಷಗಳು ಉರುಳಿದರೂ ತಾಂತ್ರಿಕ ಕಾರಣದಿಂದಾಗಿ ಚಾಲನೆಯಾಗಿಲ್ಲ. ಲೋ ವೋಲ್ವೇಜ್ ಜತೆಗೆ ಪದೇ ಪದೆ ವಿದ್ಯುತ್ ಹೋಗುತ್ತಿರುವುದರಿಂದ ಬೆಳೆಗಳ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತಿದೆ.

‘ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ, ಮೆಕ್ಕೆಜೋಳ, ಶುಂಠಿ, ಅನಾನಸ್, ಅಡಿಕೆ, ಬಾಳೆ ಇನ್ನಿತರ ಬೆಳೆ ಬೆಳೆಯುತ್ತಾರೆ. ಆದರೆ 2023-24ನೇ ಸಾಲಿನಲ್ಲಿ ಎದುರಾದ ಮಳೆ ಕೊರತೆ ಕೃಷಿಕರನ್ನು ಕಂಗಾಲಾಗಿಸಿದೆ. ಕೊಳವೆಬಾವಿಯಿಂದ ನೀರೆತ್ತಲು ಅಸಮರ್ಪಕ ವಿದ್ಯುತ್ ದೊಡ್ಡ ಸಮಸ್ಯೆಯಾಗಿದ್ದು, ನೀರಿದ್ದರೂ ಬೆಳೆಗಳಿಗೆ ಹಾಯಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಇಲ್ಲಿನ ರೈತರಿದ್ದಾರೆ. ಈ ಕಾರಣಕ್ಕೆ ಸೌರ ವಿದ್ಯುತ್ ಪಂಪ್ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಘಟಕ ಸ್ಥಾಪನೆಯತ್ತ ಹೊರಳಿದ್ದಾರೆ. ಆದರೆ ಇದಕ್ಕೆ ಸರ್ಕಾರದಿಂದ ಸಿಗಬೇಕಿದ್ದ ಸಹಾಯಧನ ಸಿಗುತ್ತಿಲ್ಲ. ಪ್ರಸಕ್ತ ಸಾಲಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ತೋಟಗಾರಿಕೆ ಇಲಾಖೆಯಿಂದ ಸೌರ ವಿದ್ಯುತ್‌ ಯೋಜನೆಯಡಿ ಶೇ 50ರ ಸಹಾಯಧನ ಸಿಗಲಿದೆ. ಆದರೆ ಯೋಜನೆ ಈಗಾಗಲೇ ಮುಗಿದಿರುವುದರಿಂದ ರೈತರು ಪೂರ್ಣ ಹಣ ಪಾವತಿ ಮಾಡಿ, ಸರ್ಕಾರ ಗುರುತು ಮಾಡಿರುವ ಕಂಪನಿ ಮೂಲಕ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಲಿಂಗಪ್ಪ ಗೌಡ ಹೇಳಿದರು.

‘ದಿನದ 24 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಆಗುತ್ತಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ. ವಾರದಲ್ಲಿ ಹಗಲು ಮೂರು ಗಂಟೆಗೊಮ್ಮೆ, ಮತ್ತೊಂದು ವಾರದಲ್ಲಿ ರಾತ್ರಿ ಮೂರು ಗಂಟೆಗೊಮ್ಮೆ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ’ ಎಂದರು.

‘ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಈಗಾಗಲೇ 15ಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ಸುಟ್ಟಿವೆ. ಹೀಗಾಗಿ ನೀರಾವರಿಗಾಗಿ ವಿದ್ಯುತ್ ಪಂಪ್ ಚಾಲನೆ ಮಾಡುವ ಬದಲು ಸೌರ ವಿದ್ಯುತ್ ಪಂಪ್ ಅಳವಡಿಕೆಗೆ ರೈತರು ಯೋಚಿಸುವಂತಾಗಿದೆ’ ಎಂದು ಕೃಷಿಕ ಉದಯ ನಾಯ್ಕ ಹೇಳಿದರು.

ಸರ್ಕಾರದಿಂದ ಬಿಡುಗಡೆಯಾಗಿದ್ದ ಸಹಾಯಧನ ಮುಗಿದಿದೆ. ಸಹಾಯಧನ ಬಿಡುಗಡೆಯಾದ ಕೂಡಲೇ ರೈತರಿಗೆ ವಿತರಿಸಲಾಗುವುದು
ಸತೀಶ ಹೆಗಡೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT