ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್‌ಗೆ ಸಾಧ್ಯವೆ: ಸದಾನಂದ ಭಟ್

Published 5 ಏಪ್ರಿಲ್ 2024, 15:29 IST
Last Updated 5 ಏಪ್ರಿಲ್ 2024, 15:29 IST
ಅಕ್ಷರ ಗಾತ್ರ

ಶಿರಸಿ: ‘ಅರಣ್ಯ ಅತಿಕ್ರಮಣದಾರ ಹೋರಾಟಗಾರರಿಗೆ ನ್ಯಾಯ ಕೊಡಲಾಗದ ಕಾಂಗ್ರೆಸ್‍‍ಗೆ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಲು ಸಾಧ್ಯವೇ’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್ ಪ್ರಶ್ನಿಸಿದ್ದಾರೆ.

ನಗರದ ದೀನದಯಾಳ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಬಂದಾಗ ಜನಪರವಾಗಿ ಮಾತನಾಡುವ ಕಾಂಗ್ರೆಸ್ ಅಧಿಕಾರ ಸಿಕ್ಕ ನಂತರ ಅದನ್ನು ಮರೆಯುವುದು ಚಾಳಿಯಾಗಿದೆ. ಕ್ಷೇತ್ರದಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಸಾಕಷ್ಟು ಸಮಸ್ಯೆಯಿದೆ. ಆದರೆ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಅರಣ್ಯ ಅತಿಕ್ರಮಣದಾರರ ಪರ ನಿಂತಿಲ್ಲ. ಈ ಬಗ್ಗೆ ಸ್ಪಷ್ಟ ನಿಲುವಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ನೀವು ಮಾಡಿದ ಪ್ರಯತ್ನ ಜನರೆದುರಿಡಬೇಕು’ ಎಂದರು. 

ಅರಣ್ಯ ಅತಿಕ್ರಮಣದಾರರಿಗೆ ವಸತಿ ಯೋಜನೆ ಮನೆ ನಿರ್ಮಿಸಿಕೊಳ್ಳಲು ಸಮಸ್ಯೆ ಇತ್ತು. ಬಿಜೆಪಿ ಅಧಿಕಾರಾವಧಿಯಲ್ಲಿ ಆ ತೊಡಕು ನಿವಾರಿಸಲಾಗಿದೆ. ಅರಣ್ಯ ಹೋರಾಟದಲ್ಲಿ ತೊಡಗಿರುವ ರವೀಂದ್ರ ನಾಯ್ಕ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಮೋಸ ಮಾಡಿದೆ. ಹೀಗಾಗಿ ಅವರು ಬಿಜೆಪಿ ಬೆಂಬಲಿಸಿದರೆ ಸ್ವಾಗತಿಸುತ್ತೇವೆ ಎಂದ ಅವರು, ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬಿಜೆಪಿ ಬದ್ಧವಿದೆ. ಈ ಹಿಂದೆ ಆಸ್ಪತ್ರೆ ನಿರ್ಮಿಸಲು ಜಾಗ ಗುರುತಿಸಲಾಗಿತ್ತು. ಬಿಜೆಪಿ ಮಂಡಿಸಿದ ಬಜೆಟ್‌ನಲ್ಲಿ ಅನುದಾನ ಕೂಡ ಘೋಷಿಸಲಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಇಚ್ಛಾಶಕ್ತಿಯಿದ್ದರೆ ತಕ್ಷಣ ಅಡಿಗಲ್ಲು ಹಾಕಬೇಕು’ ಎಂದು ಹೇಳಿದರು. 

‘ಈಗಾಗಲೇ ಕ್ಷೇತ್ರದಲ್ಲಿ  ಬಿಜೆಪಿಯ ಒಂದು ಸುತ್ತಿನ ಪ್ರಚಾರ ಕಾರ್ಯ ಯಶಸ್ವಿಯಾಗಿ ನಡೆದಿದೆ. ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಜತೆಗೂಡಿ ಸಭೆ ನಡೆಸುತ್ತಿದ್ದಾರೆ.  ಆರಂಭದಲ್ಲೇ ಬಿಜೆಪಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ನಿಶ್ಚಿತವಾಗಿ ಬಿಜೆಪಿ ಗೆಲುವು ದಾಖಲಿಸಲಿದೆ’ ಎಂದರು.

ಪದಾಧಿಕಾರಿಗಳಾದ ಆನಂದ ಸಾಲೇರ, ಉಷಾ ಹೆಗಡೆ, ಪ್ರೇಮಕುಮಾರ ನಾಯ್ಕ, ಮಹಾಂತೇಶ ಹಾದಿಮನಿ, ನಾಗರಾಜ ನಾಯ್ಕ, ಶರ್ಮಿಳಾ ಮಾದನಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT