ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ‘ಕಸದ ಗುಡ್ಡೆ’ ವಿಲೇವಾರಿಗೆ ಹಿನ್ನಡೆ

ವಿಂಗಡಿಸದ ತ್ಯಾಜ್ಯ ರಾಶಿ, ತೆರುವಿಗೆ ಸ್ಥಳೀಯರ ಆಗ್ರಹ
Published 30 ನವೆಂಬರ್ 2023, 5:36 IST
Last Updated 30 ನವೆಂಬರ್ 2023, 5:36 IST
ಅಕ್ಷರ ಗಾತ್ರ

ಶಿರಸಿ: ಹಲವು ವರ್ಷಗಳಿಂದ ನಗರದ ಎಲ್ಲ ತ್ಯಾಜ್ಯ ಹೊದ್ದು ಮಲಗಿರುವ ಇಲ್ಲಿನ ಲಾಲಗೌಡ ನಗರದ ಹಳೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ತ್ಯಾಜ್ಯ ರಾಶಿಯ ವೈಜ್ಞಾನಿಕ ವಿಲೇವಾರಿಯೇ ನಗರಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. 

ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ 80 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ದಶಕಗಳಿಂದ ಇಲ್ಲಿನ ಕಸ, ಘನತ್ಯಾಜ್ಯವನ್ನು ನಗರದ ಹೊರವಲಯದ ಲಾಲಗೌಡನಗರದ ಬಳಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿತ್ತು. ಇದರಿಂದ ನಾಲ್ಕು ಎಕರೆಗೂ ಹೆಚ್ಚಿನ ಜಾಗದಲ್ಲಿ ಕಸದ ಗುಡ್ಡೆಯೇ ನಿರ್ಮಾಣವಾಗಿತ್ತು. 2010ರ ನಂತರ ಸಮೀಪದಲ್ಲಿ ಹೊಸ ಘಟಕ ನಿರ್ಮಿಸಿದ್ದು, ಪ್ರಸ್ತುತ ಅಲ್ಲಿ ಕಾರ್ಯಾಚರಣೆ ನಡೆದಿದೆ. ಆದರೆ ಹಳೆಯ ಘಟಕ ಇರುವ ಪ್ರದೇಶದಲ್ಲಿ ತ್ಯಾಜ್ಯ ವಿಂಗಡಣೆ, ನಿರ್ವಹಣೆ ಆಗಿರಲಿಲ್ಲ. ಇದರಿಂದ ಇಡೀ ಪ್ರದೇಶದ ವಾತಾವರಣ ದುರ್ವಾಸನೆಯಿಂದ ಕೂಡಿದ್ದಲ್ಲದೇ, ಮಳೆಗಾಲದ ವೇಳೆ ಕೊಳಚೆ ನೀರು ಬಾವಿಗೂ ಸೇರ್ಪಡೆ ಆಗುತ್ತಿತ್ತು. ಇದಕ್ಕೆ ಸ್ಥಳೀಯರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ತ್ಯಾಜ್ಯ ಗುಡ್ಡೆಯ ಮೇಲೆ ಪ್ಲಾಸ್ಟಿಕ್ ಹೊದಿಕೆ ಮುಚ್ಚಿ ನೀರಿಂಗದಂತೆ ನಗರಸಭೆ ಕ್ರಮ ಕೈಗೊಂಡಿತ್ತು. ಇದಾಗಿ ಹಲವು ವರ್ಷಗಳಾದರೂ ತ್ಯಾಜ್ಯದ ರಾಶಿ ಸ್ಥಳಾಂತರಿಸುವ ಕಾರ್ಯ ನಗರಾಡಳಿತದಿಂದ ಆಗಿಲ್ಲ.

‘ಈಗಿರುವ ಘನತ್ಯಾಜ್ಯ ವಿಲೇವಾರಿ ಘಟಕ ತುಂಬಿದ ನಂತರ ಕಸ ನಿರ್ವಹಣೆಗೆ ಜಾಗದ ಕೊರತೆಯಿದೆ. ಈ ಕಾರಣ ಹಳೆಯ ಘಟಕವನ್ನು ಸ್ವಚ್ಛಗೊಳಿಸಬೇಕು ಎಂದು ನಗರಸಭೆಯ ಹಲವು ಸಭೆಗಳಲ್ಲಿ ಸ್ವತಃ ಸದಸ್ಯರೇ ಒತ್ತಾಯಿಸಿದ್ದರು. ಈ ಹಿನ್ನೆಲೆ ₹35 ಲಕ್ಷ ವೆಚ್ಚದಲ್ಲಿ ಹಳೆ ತ್ಯಾಜ್ಯ ಘಟಕವನ್ನು ವೈಜ್ಞಾನಿಕವಾಗಿ ಮೂರು ಹಂತದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಪ್ಲಾಸ್ಟಿಕ್ ತೆಗೆಯುವುದು, ನಂತರ ಗೊಬ್ಬರ ಸಂಗ್ರಹಿಸುವುದು, ಅಂತಿಮವಾಗಿ ಬಳಕೆ ಬಾರದ ಕಸವನ್ನು ಹೊಸ ತ್ಯಾಜ್ಯ ಘಟಕದೊಳಗೆ ಹಾಕಿ ಹೂಳಲು ನಿರ್ಧರಿಸಲಾಯಿತು. ಆದರೆ ಹೀಗೆ ಹೂಳುವುದರಿಂದ ಒಳಚರಂಡಿ ವ್ಯವಸ್ಥೆಯಿಲ್ಲದ ಶಿರಸಿಯಲ್ಲಿ ಕುಡಿಯುವ ನೀರಿನ ಮೇಲೆ ದುಷ್ಪರಿಣಾಮ ಬೀರುವ ಕಾರಣಕ್ಕೆ ಹಿನ್ನಡೆಯಾಯಿತು. ಜತೆಗೆ ವೈಜ್ಞಾನಿಕ ನಿರ್ವಹಣೆ ಕಾರಣಕ್ಕೆ ಟೆಂಡರ್ ಕರೆದರೂ ಯಾರೊಬ್ಬರೂ ಭಾಗವಹಿಸದ ಕಾರಣ ಇಡೀ ಯೋಜನೆ ಕೈಬಿಡಲಾಗಿತ್ತು. ನಂತರದಲ್ಲಿ ಮತ್ತೆ ಮತ್ತೆ ಟೆಂಡರ್ ಕರೆಯಲಾಗಿತ್ತಾದರೂ ಪ್ರಯೋಜನವಾಗಿಲ್ಲ’ ಎಂಬುದು ನಗರಸಭೆ ಸದಸ್ಯರೊಬ್ಬರ ಮಾತಾಗಿದೆ.

‘ವಿಂಗಡಿಸದ ತ್ಯಾಜ್ಯ ರಾಶಿ ಇದಾಗಿದೆ. ಹೀಗಾಗಿ ಎಲ್ಲ ವಿಧದ ತ್ಯಾಜ್ಯ ಇಲ್ಲಿರುತ್ತವೆ. ಅವುಗಳನ್ನು ಬೇರ್ಪಡಿಸುವುದು ಕಷ್ಟಸಾಧ್ಯ. ಅಲ್ಲದೇ, ಇದಕ್ಕೆ ವೆಚ್ಚವೂ ಅಧಿಕ. ಯಾವುದೇ ಷರತ್ತು ಇಲ್ಲದೇ ಎಲ್ಲವನ್ನೂ ಒಮ್ಮೆಲೇ ವಿಲೇವಾರಿ ಮಾಡಲು ಅವಕಾಶ ನೀಡಿದರೆ ಈಗಾಗಲೇ ಸ್ವಚ್ಛವಾಗಿರುತ್ತಿತ್ತು. ಆದರೆ ನಗರಸಭೆ ಅಂಥ ನಿರ್ಣಯ ಕೈಗೊಳ್ಳದ ಕಾರಣ ಇಂದಿಗೂ ಹಾಗೆಯೇ ಉಳಿದಿದೆ’ ಎಂಬುದು ಗುತ್ತಿಗೆದಾರರೊಬ್ಬರ ಅಭಿಪ್ರಾಯ.

ಸರಿಯಾದ ನಿರ್ವಹಣೆ ಇಲ್ಲದ ಕಾರಣ ಘಟಕ ಸ್ಥಗಿತವಾಗಿ ಇಷ್ಟು ವರ್ಷ ಕಳೆದರೂ ಅದರ ದುಷ್ಪರಿಣಾಮ ನಿಂತಿಲ್ಲ. ಈ ಪ್ರದೇಶ ಬದುಕಲು ಯೋಗ್ಯ ವಾತಾವರಣ ಹೊಂದಿಲ್ಲ. ನಗರಸಭೆಯವರು ಕಸದ ರಾಶಿ ತೆರವು ಮಾಡಿ ಬದುಕಲು ಅವಕಾಶ ನೀಡಬೇಕು
ನಿರ್ಮಲಾ ನಾಯ್ಕ ಸ್ಥಳೀಯ ನಿವಾಸಿ
ಹಳೆಯ ಘಟಕದಲ್ಲಿ ತುಂಬಿರುವ ಕಸ ಮಣ್ಣು ತೆಗೆದು ಜಾಗ ಸಮತಟ್ಟಿಗೆ ಟೆಂಡರ್ ಕರೆಯಲು ಜಿಲ್ಲಾಮಟ್ಟದಲ್ಲಿ ಸಿದ್ಧತೆ ನಡೆದಿದೆ. ಟೆಂಡರ್ ಪ್ರಕ್ರಿಯೆ ನಡೆದು ಯಾರಾದರೂ ಆಸಕ್ತಿ ವಹಿಸಿದರೆ ಎರಡು ತಿಂಗಳಲ್ಲಿ ಘಟಕ ಸ್ವಚ್ಛವಾಗಲಿದೆ
ನಾರಾಯಣ ನಾಯಕ ನಗರಸಭೆ ಪರಿಸರ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT