ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಶಾಲೆ ಆವರಣ ಗಿಡಮೂಲಿಕೆಯ ಆಗರ

ಔಷಧ ಗಿಡ ಬೆಳೆಸಿ, ಪೋಷಿಸುವ ರಾಮನಬೈಲ್ ಶಾಲೆ ವಿದ್ಯಾರ್ಥಿಗಳು
Last Updated 15 ಡಿಸೆಂಬರ್ 2022, 6:48 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ರಾಮನಬೈಲ್‍ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೇವಲ ಪಠ್ಯ, ಕ್ರೀಡಾ ಚಟುವಟಿಕೆಗೆ ಸೀಮಿತರಾಗಿ ಉಳಿದಿಲ್ಲ. ಶಾಲೆ ಆವರಣದಲ್ಲಿ ಗಿಡಮೂಲಿಕೆ ಬೆಳೆಸಿ ಪೋಷಿಸುವ ಜತೆಗೆ ಅವುಗಳ ಮಹತ್ವ ಅರಿಯುತ್ತಿದ್ದಾರೆ.

ಶಾಲೆಯ ಆವರಣದಲ್ಲಿ 80ಕ್ಕೂ ಹೆಚ್ಚು ವಿಧದ ಆಯುರ್ವೇದ ಗಿಡಮೂಲಿಕೆಗಳು, ಔಷಧಿ ಗುಣ ಉಳ್ಳ ಗಿಡಗಳು ಬೆಳೆದು ನಿಂತಿವೆ. ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಅಳಿವಿನಂಚಿನಲ್ಲಿರುವ ಸಸ್ಯಗಳನ್ನೂ ಸಂರಕ್ಷಿಸುತ್ತಿದ್ದಾರೆ. ಯೂಥ್ ಫಾರ್ ಸೇವಾ ಸಂಸ್ಥೆಯ ಪರಿಸರ ವಿಭಾಗ ಈ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿದೆ.

ಆಟದ ಮೈದಾನದ ಸುತ್ತ ಗಿಡ ನೆಡಲಾಗಿದೆ. ಅದರ ಪಕ್ಕದಲ್ಲೇ ನವಗ್ರಹ ವನವನ್ನೂ ನಿರ್ಮಿಸಲಾಗಿದೆ. ಕಚೋರ, ಮಿಂಚುಪತ್ರೆ, ಕೃಷ್ಣ ಲಕ್ಕಿ, ಕರಿ ಲಕ್ಕಿಯಂತಹ ಅಪರೂಪದ ಸಸ್ಯಗಳಿವೆ. ಮರುಗಪತ್ರೆ, ಮಧುನಾಶಿನಿ, ದಾಸಪತ್ರೆ, ಚಿತ್ರಮೂಲ, ತಗ್ಗಿ, ಬಾರಂಗಿ, ರಥಪುಷ್ಪ, ಸಂದುಬಳ್ಳಿ ಸೇರಿದಂತೆ ಹಲವು ಬಗೆಯ ಮೂಲಿಕೆಗಳಿವೆ. ಗಿಡಗಳ ಮಹತ್ವವನ್ನು ವಿದ್ಯಾರ್ಥಿಗಳು ಸ್ಫುಟವಾಗಿ ವಿವರಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ.

‘ಯೂತ್ ಫಾರ್ ಸೇವಾ ಸಂಸ್ಥೆಯವರು ಶಾಲೆ ಆವರಣದಲ್ಲಿ ಔಷಧಿ ಗಿಡಗಳನ್ನು ಬೆಳೆಸುವ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಅದನ್ನು ನಿರಂತರವಾಗಿ ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ, ವಿಶೇಷ ದಿನಗಳಲ್ಲಿ ಹೊಸ ಬಗೆಯ ಔಷಧಿಯ ಗಿಡ ನೆಡುತ್ತೇವೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಜೋಗಳೇಕರ್.

‘ಪ್ರತಿನಿತ್ಯ ಕೆಲಹೊತ್ತು ಗಿಡಗಳ ಆರೈಕೆ, ಅವುಗಳ ಮಹತ್ವದ ಅಧ್ಯಯನಕ್ಕೆ ಮೀಸಲಿಡಲಾಗುತ್ತಿದೆ. ಒಬ್ಬ ಶಿಕ್ಷಕರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ವರ್ಷಕ್ಕೊಮ್ಮೆ ಸಸ್ಯ ಸಂತೆ ಏರ್ಪಡಿಸುತ್ತೇವೆ’ ಎಂದು ತಿಳಿಸಿದರು.

‘ಹೊರ ಊರುಗಳಿಗೆ ತೆರಳಿದಾಗ ಅಲ್ಲಿ ಸಿಗುವ ವಿಶೇಷ ಗಿಡಗಳನ್ನು ತಂದು ಮಕ್ಕಳಿಗೆ ಪರಿಚಯಿಸುತ್ತೇನೆ. ಅದನ್ನು ಅವರು ನೆಟ್ಟು ಸಂರಕ್ಷಿಸುತ್ತಾರೆ. ಪ್ರತಿ ತಿಂಗಳ ಮೂರನೆ ಶನಿವಾರ ಶಾಲೆ ಸಮೀಪದ ಕಾಡಿಗೆ ಮಕ್ಕಳನ್ನು ಹೊರಪ್ರವಾಸಕ್ಕೆ ಕರೆದೊಯ್ಯುತ್ತೇವೆ. ಅಲ್ಲಿನ ಗಿಡಗಳ ಬಗೆಯನ್ನು ಶಿಕ್ಷಕರ ಸಹಾಯವಿಲ್ಲದೆ ಗುರುತಿಸಿ ಹೆಸರಿಸುವದು ಕರಗತವಾಗಿದೆ’ ಎಂದು ಶಿಕ್ಷಕ ಎನ್.ಬಿ.ನಾಯ್ಕ ಹೇಳಿದರು.

ವಿದ್ಯಾರ್ಥಿಗಳಿಂದ ಇಕೋ ಬ್ರಿಕ್ಸ್:

ರಾಮನಬೈಲ್ ಶಾಲೆಯ ಆವರಣ, ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯಗಳು ಕಾಣಸಿಗುವುದಿಲ್ಲ. ಇದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಪರಿಸರ ಪ್ರಜ್ಞೆಯೇ ಕಾರಣ.

‘ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಕಸಗಳನ್ನು ಬಿಸಾಡದೆ, ಸಂಗ್ರಹಿಸಿಡಲು ಸೂಚಿಸಲಾಗಿತ್ತು. ಅವುಗಳನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಡುವುದುನ್ನು ಕಲಿಸಿದ್ದೆ. ಚಾಚೂತಪ್ಪದೆ ಈ ಕೆಲಸ ಮಾಡುತ್ತಿದ್ದಾರೆ. ಹೀಗೆ ಖಾಲಿ ಬಾಟಲಿಯಲ್ಲಿ ಪ್ಲಾಸ್ಟಿಕ್ ಕಸ ತುಂಬಿಟ್ಟು ಅದನ್ನು ಇಟ್ಟಂಗಿಯಂತೆ ಬಳಸಲಾಗುತ್ತದೆ. ಗಿಡಗಳ ಸುತ್ತ ಕಟ್ಟೆ ನಿರ್ಮಿಸಲು ಇವುಗಳನ್ನು ಇಟ್ಟಂಗಿಯಂತೆ ಬಳಸುತ್ತೇವೆ’ ಎನ್ನುತ್ತಾರೆ ಶಿಕ್ಷಕ ಎನ್.ಬಿ.ನಾಯ್ಕ.

ಅಪರೂಪದ ಸಸಿಗಳನ್ನು ಪಾಲಕರಿಗೂ ನೀಡಿ ಮನೆಯಲ್ಲಿ ಬೆಳೆಸಲು ಸಲಹೆ ನೀಡುತ್ತೇವೆ.

ಗೀತಾ ಜೋಗಳೇಕರ್

ಮುಖ್ಯ ಶಿಕ್ಷಕಿ

ವಿದ್ಯಾರ್ಥಿಗಳಲ್ಲಿ ಸಸ್ಯ ಸಂಪತ್ತು ಸಂರಕ್ಷಿಸುವ ಬಗ್ಗೆ ಪರಿಣಾಮಕಾರಿ ಜ್ಞಾನ ನೀಡಲು ಗಿಡ ಬೆಳೆಸುವ ಪ್ರಾಯೋಗಿಕ ಕಾರ್ಯಕ್ರಮಗಳು ನೆರವಾಗುತ್ತವೆ.

ಉಮಾಪತಿ ಭಟ್

ಯೂತ್ ಫಾರ್ ಸೇವಾ ಸಂಸ್ಥೆಯ ಸಂಚಾಲಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT