ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಳಿ: ಕರಾವಳಿಯಲ್ಲಿ ಸುಗ್ಗಿ ಕುಣಿತದ ಸಡಗರ

ಹಾಲಕ್ಕಿ, ಕೋಮಾರಪಂತ ಸೇರಿ ಹಲವು ಸಮುದಾಯಗಳಿಂದ ವಿಭಿನ್ನ ಸಂಪ್ರದಾಯ
Published 22 ಮಾರ್ಚ್ 2024, 13:44 IST
Last Updated 22 ಮಾರ್ಚ್ 2024, 13:44 IST
ಅಕ್ಷರ ಗಾತ್ರ

ಕಾರವಾರ/ಅಂಕೋಲಾ: ಹೋಳಿ ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಸುಗ್ಗಿ ಕುಣಿತದ ಸಂಭ್ರಮ ಮನೆಮಾಡಿದೆ. ಅದರಲ್ಲಿಯೂ ಅಂಕೋಲಾದ ಹಾಲಕ್ಕಿ, ಕೋಮಾರಪಂತ ಸಮುದಾಯದ ಸುಗ್ಗಿ ಕುಣಿತ ಮನಸೆಳೆಯುತ್ತಿದೆ.

ಅಂಕೋಲಾ, ಕಾರವಾರದ ಗ್ರಾಮೀಣ, ನಗರ ಪ್ರದೇಶದ ಮನೆಗಳ ಎದುರು ನಿತ್ಯ ‘ಚೋಹೋಚೋ...ಸೋಹೋಚೋ...’ ಎಂಬ ಕೂಗು, ಅದರೊಟ್ಟಿಗೆ ಲಯಬದ್ಧ ವಾದ್ಯ ಮೇಳದ ಸದ್ದು ಕೇಳಿಸುತ್ತಿದೆ. ಬಣ್ಣ ಬಣ್ಣದ ಗರಿಗಳ ತುರಾಯಿ ತಲೆಗೆ ಕಟ್ಟಿಕೊಂಡವರ ಓಡಾಟ ಗಮನಸೆಳೆಯುತ್ತಿದೆ. ಇವೆಲ್ಲ ಸುಗ್ಗಿಯ ಹಿಗ್ಗು ಊರೂರಿನಲ್ಲಿ ಆರಂಭಗೊಂಡಿದೆ ಎಂಬುದರ ಸಂಕೇತ.

60ಕ್ಕೂ ಹೆಚ್ಚು ಸಾಂಪ್ರದಾಯಿಕ ಹಾಡುಗಳು ಹಾಗೂ ಗುಮಟೆ ಪಾಂಗ್, ಕಂಸಾಳೆ, ನಗಾರಿ, ಜಾಗಟೆ ಸದ್ದಿಗೆ ಸುಗ್ಗಿ ಕುಣಿತ ಮಾಡುವ ಕಲಾವಿದರು ಕೋಲು ಬಡಿಯುತ್ತ ತಕ್ಕ ಹೆಜ್ಜೆ ಹಾಕುತ್ತಾರೆ. ಅವರ ತಲೆಯ ಮೇಲಿರುವ ತುರಾಯಿ ಹೆಚ್ಚು ಗಮನಸೆಳೆಯುತ್ತಿದೆ.

ಹಾಲಕ್ಕಿ, ಪಡ್ತಿ, ಕೋಮಾರಪಂತ, ಗುನಗಿ, ಹಳ್ಳೇರ, ಮುಕ್ರಿ ಸಮುದಾಯದವರು ಸುಗ್ಗಿ ಕುಣಿತ ಆಡುವ ರೂಢಿ ಇಟ್ಟುಕೊಂಡಿದ್ದಾರೆ. ಅಂಕೋಲಾ ಭಾಗದಲ್ಲಿ ಬೆಳಂಬಾರ ಸುಗ್ಗಿ ಹೆಚ್ಚು ಪ್ರಸಿದ್ಧಿ ಪಡೆದಿದ್ದರೆ, ಅವರ್ಸಾ, ಹಟ್ಟಿಕೇರಿ ಭಾಗದ ಕೋಮಾರಪಂತ ಸಮುದಾಯದವರ ಸುಗ್ಗಿ ತಂಡವೂ ಹೆಸರು ಮಾಡಿದೆ. ಕಾರವಾರ ತಾಲ್ಲೂಕಿನ ಕದ್ರಾದ ಮಹಮ್ಮಾಯಾ ಹೀರಾಮೇಳ ಸುಗ್ಗಿ ತಂಡವು ಖಡ್ಗ ಬೀಸುತ್ತ ಆಡುವ ಕುಣಿತ ಅಪರೂಪವೆನಿಸಿದೆ. ಇಲ್ಲಿನ ಬೇಳೂರು, ಕಡವಾಡದ ಸುಗ್ಗಿ ತಂಡದವರೂ ವಿವಿಧೆಡೆ ಪ್ರದರ್ಶನ ನೀಡುತ್ತಿದ್ದಾರೆ.

ಸುಗ್ಗಿ ವೇಷ ತೊಟ್ಟವರು ಒಂಬತ್ತು ದಿನ ಸ್ನಾನವನ್ನೂ ಮಾಡುವುದಿಲ್ಲ. ಕಾಲಿಗೆ ಚಪ್ಪಲಿ ಧರಿಸುವುದಿಲ್ಲ. ಸುಗ್ಗಿ ಮುಗಿದ ಬಳಿಕ ತುರಾಯಿಯನ್ನು ಗ್ರಾಮದ ಹೊರವಲಯದಲ್ಲಿರುವ ಕರಿದೇವರಿಗೆ ಅರ್ಪಿಸುತ್ತಾರೆ.

‘ಸುಗ್ಗಿ ಆಡಿದರೆ ರೋಗ ರುಜಿನಗಳಿಂದ ದೈವವು ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಇದೆ. ಸುಗ್ಗಿ ತಂಡ ಕಟ್ಟುವ ಬಗ್ಗೆ ಊರ ಗೌಡರ ಮನೆಯಲ್ಲಿ ಸಭೆ ಸೇರಿ ನಿರ್ಧರಿಸಲಾಗುತ್ತದೆ. ಪ್ರತಿ ಮನೆಯಿಂದ ಒಬ್ಬ ಸದಸ್ಯ ಕುಣಿತಕ್ಕೆ ಬರಬೇಕು ಎನ್ನುವ ಸಂಪ್ರದಾಯ ಇದೆ’ ಎನ್ನುತ್ತಾರೆ ಹಿರಿಯ ಸುಗ್ಗಿ ಕಲಾವಿದ ಬುದವಂತ ಗೌಡ.

ಅಂಕೋಲಾದಲ್ಲಿ ಸುಗ್ಗಿ ಕುಣಿತದಲ್ಲಿ ನಿರತವಾಗಿದ್ದ ತಂಡ
ಅಂಕೋಲಾದಲ್ಲಿ ಸುಗ್ಗಿ ಕುಣಿತದಲ್ಲಿ ನಿರತವಾಗಿದ್ದ ತಂಡ
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಕರಡಿ ವೇಷ ಧರಿಸಿದ ಯುವಕರ ಗುಂಪು ಕಾಣಿಸಿಕೊಂಡಿತು
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಕರಡಿ ವೇಷ ಧರಿಸಿದ ಯುವಕರ ಗುಂಪು ಕಾಣಿಸಿಕೊಂಡಿತು
ಕಾರವಾರದ ಸೆಂಟ್ ಮೈಕಲ್ ಶಾಲೆಯ ವಿದ್ಯಾರ್ಥಿಗಳು ಕರಡಿ ವೇಷಧಾರಿಗಳೊಂದಿಗೆ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್
ಕಾರವಾರದ ಸೆಂಟ್ ಮೈಕಲ್ ಶಾಲೆಯ ವಿದ್ಯಾರ್ಥಿಗಳು ಕರಡಿ ವೇಷಧಾರಿಗಳೊಂದಿಗೆ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್

Cut-off box - ಬ್ರಿಟೀಷ್ ಕಾಲದಿಂದಲೂ ಆಚರಣೆ ಸುಗ್ಗಿ ಹೋಳಿ ಹಬ್ಬದ ಸಂದರ್ಭದಲ್ಲಿ ಬೆಳಂಬಾರದ ಹಾಲಕ್ಕಿ ಒಕ್ಕಲಿಗರು ಪ್ರಸ್ತುತ ಪಡಿಸುವ ಹಗರಣಗಳು ಹೋಳಿ ಹಬ್ಬದ ಆಕರ್ಷಣೆಗಳಲ್ಲಿ ಒಂದಾಗಿದ್ದು ಸಮಾಜದ ನೈಜ ಘಟನೆಗಳನ್ನು ವಿಡಂಬನಾತ್ಮಕವಾಗಿ ಹಗರಣಗಳ ಮೂಲಕ ತೋರಿಸುವ ಪದ್ಧತಿ ಇದೆ. ಬ್ರಿಟಿಷ್ ಸರ್ಕಾರದ ಸಂದರ್ಭದಲ್ಲಿ ಬ್ರಿಟಿಷರಿಂದ ನಡೆಯುವ ದೌರ್ಜನ್ಯಗಳನ್ನು ಹಗರಣ ಪ್ರಹಸನದಿಂದ ತೋರಿಸಿ ಬ್ರಿಟಿಷ್ ಅಧಿಕಾರಿಗಳನ್ನು ಬೆಚ್ಚಿ ಬೀಳುವಂತೆ ಮಾಡುವ ಮೂಲಕ ಅವರಿಂದಲೂ ಮೆಚ್ಚುಗೆ ಪಡೆದ ಇತಿಹಾಸವನ್ನು ಅಂಕೋಲಾದ ಹೋಳಿ ಹಬ್ಬದ ಹಗರಣ ಪ್ರದರ್ಶನ ಹೊಂದಿದೆ. ಮಾರ್ಚ್ 24ರಂದು ರಾತ್ರಿ ಅಂಕೋಲಾದ ತಹಶೀಲ್ದಾರ್‌ ಕಚೇರಿ ಎದುರು ಸುಗ್ಗಿ ಕುಣಿತ ಪ್ರದರ್ಶಿಸಲಿರುವ ತಂಡವು ಬಳಿಕ ಹಗರಣ ಪ್ರದರ್ಶಿಸಲಿದೆ.

Cut-off box - ರಸ್ತೆಯುದ್ದಕ್ಕೂ ಕಾಣಸಿಗುವ ಕರಡಿಗಳು! ಹೋಳಿ ಹಿನ್ನೆಲೆಯಲ್ಲಿ ಕಾರವಾರ ನಗರದಲ್ಲಿ ಈಗ ಕರಡಿಗಳ ಹಾವಳಿ ಹೆಚ್ಚಿದೆ! ಮೈಗೆ ಕರಡಿಯ ವೇಷಭೂಷಣ ಧರಿಸುವ ಯುವಕರು ಮಕ್ಕಳು ಹೆದ್ದಾರಿ ನಗರದ ಮುಖ್ಯ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸವಾರರಿಂದ ಹಣ ಪಡೆಯುತ್ತಾರೆ. ಅಂಗಡಿ ಮನೆಗಳಿಗೂ ತೆರಳಿ ದೇಣಿಗೆ ಸಂಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT