ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆರೋಗ್ಯ ಹದಗೆಡಿಸುತ್ತಿದೆ ರಾಸಾಯನಿಕ ಆಹಾರ

Published 25 ಸೆಪ್ಟೆಂಬರ್ 2023, 5:02 IST
Last Updated 25 ಸೆಪ್ಟೆಂಬರ್ 2023, 5:02 IST
ಅಕ್ಷರ ಗಾತ್ರ

ಕಾರವಾರ: ತಿಂಗಳ ಹಿಂದಿನ ಘಟನೆ ಇದು. 22ರ ಹರೆಯ ತರುಣಿಯೊಬ್ಬಳು ತೀವೃ ಹೊಟ್ಟೆ ನೋವು, ವಾಂತಿಯಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ತೆರಳಿದ್ದಳು. ಆರೋಗ್ಯವಂತಳಾಗಿದ್ದ ಆಕೆ ಏಕಾಏಕಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಅಸ್ವಸ್ಥಗೊಂಡವಳನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆಗೆ ಹೊರ ಜಿಲ್ಲೆಯ ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು. ಆರೋಗ್ಯವಂತಳಾಗಿದ್ದವಳನ್ನು ಏಕಾಏಕಿ ಕುಸಿಯುವಂತೆ ಮಾಡಿದ್ದು ‘ಹೊಟೆಲ್‍ನಲ್ಲಿ ತಯಾರಿಸಿದ್ದ ರುಚಿ ಆಹಾರ’ ಎಂಬುದು ನಂತರ ಪಾಲಕರ ಅರಿವಿಗೆ ಬಂದಿತ್ತು.

ಜಿಲ್ಲೆಯ ಪ್ರವಾಸಿ ತಾಣವೊಂದರ ಫುಡ್ ಕೋರ್ಟ್‍ನಲ್ಲಿ ಪಾನಿಪುರಿ, ಗೋಬಿ ಮಂಚೂರಿ ಸೇವಿಸಿದ್ದ ಬಾಲಕನ ಸ್ಥಿತಿಯೂ ಇದೇ ರೀತಿಯಾಗಿತ್ತು. ತೀವೃ ಹೊಟ್ಟೆ ನೋವು, ಬೇಧಿಯಿಂದ ಆತ ಅಸ್ವಸ್ಥಗೊಳ್ಳುವಂತಾಗಿತ್ತು.

ಈ ಮೇಲಿನಂತ ಹತ್ತಾರು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇವೆ. ಮಕ್ಕಳ ಆರೋಗ್ಯ ಹದಗೆಡುತ್ತಿರುವುದಕ್ಕೆ ಪಾಲಕರು ಕಳವಳಗೊಳ್ಳುತ್ತಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ವಿಷಯುಕ್ತ ಆಹಾರ ಸೇವನೆಯಿಂದ ಅನರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಬರುವ ಹತ್ತಾರು ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಈ ಪೈಕಿ ಹೆಚ್ಚಿನವು ‘ಫಾಸ್ಟ್ ಫುಡ್’ ಮೋಹದ ಪ್ರಕರಣಗಳು ಎಂಬುದು ವೈದ್ಯರ ಅಭಿಪ್ರಾಯ.

ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆಯಲ್ಲಿ, ಅದರಲ್ಲೂ ಕರಾವಳಿ ಭಾಗದಲ್ಲಿ ಫಾಸ್ಟ್ ಫುಡ್ ಸೆಂಟರ್, ಹೊಟೆಲ್‍ಗಳಿಗೆ ಕೊರತೆ ಇಲ್ಲ. ಗ್ರಾಹಕರನ್ನು ಸೆಳೆಯಲು ಬಹುತೇಕ ಹೊಟೆಲ್‍ಗಳು ಆಹಾರದ ರುಚಿ ಹೆಚ್ಚಿಸಲು ಒತ್ತು ನೀಡುತ್ತಿವೆ. ಇದಕ್ಕಾಗಿ ಸುವಾಸನೆ ವರ್ಧಕ ಮೊನೊಸೋಡಿಯಂ ಗ್ಲುಟಮೇಟ್ (ಅಜಿನಿಮೊಟೊ) ಬಳಕೆ ಹೆಚ್ಚಿಸಲಾಗುತ್ತಿರುವ ದೂರುಗಳಿವೆ. ಕೆಲವು ಹೊಟೆಲ್‍ಗಳು ಸಾಂಪ್ರದಾಯಿಕ ಪದಾರ್ಥಗಳ ಮೂಲಕವೇ ರುಚಿಕಟ್ಟಾದ ಆಹಾರ ತಯಾರಿಸಿದರೆ, ಬಹುತೇಕ ಕಡೆ ಕೃತಕ ರಾಸಾಯನಿಕಗಳ ಬಳಕೆ ಹೆಚ್ಚುತ್ತಿರುವ ದೂರುಗಳಿವೆ.

ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ ಬಹುತೇಕ ಕಡೆ ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಕೇಂದ್ರ ದಿನಕ್ಕೊಂದರಂತೆ ತಲೆ ಎತ್ತುತ್ತಿವೆ. ಚೈನೀಸ್ ತಿನಿಸುಗಳ ತಯಾರಿಕೆ, ಕರಿದ ಪದಾರ್ಥಗಳ ಮಾರಾಟ ಇಂತಹ ಕೇಂದ್ರಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿವೆ. ಆದರೆ ಇಲ್ಲಿ ತಯಾರಾಗುವ ತಿನಿಸುಗಳ ಗುಣಮಟ್ಟಗಳ ಪರೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಗಂಭೀರ ಆರೋಪ ವ್ಯಕ್ತವಾಗುತ್ತಿದೆ.

‘ಹೊಟೆಲ್, ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಆಹಾರದ ರುಚಿ ಹೆಚ್ಚಿಸುವ ಸಲುವಾಗಿ ಬಳಸಲಾಗುವ ಅಜಿನೊಮೊಟೊ, ವಿನೇಗರ್, ರಾಸಾಯನಿಕಯುಕ್ತ ಸಾಸ್‍ಗಳು ದೇಹಕ್ಕೆ ಒಗ್ಗದು. ಅವುಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಕೆ ಮಾಡುತ್ತಿರುವ ಪರಿಣಾಮ ಆಹಾರದ ರುಚಿ ಹೆಚ್ಚುತ್ತದೆ. ಆದರೆ ದೇಹಕ್ಕೆ ಮಾರಕವಾಗುತ್ತವೆ. ಇವುಗಳೇ ಉದರ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತಿದೆ’ ಎಂದು ವೈದ್ಯರೊಬ್ಬರು ಹೇಳಿದರು.

‘ರಸಾಯನಿಕ ಬಳಕೆ ಮಾಡಿ ಸಿದ್ಧಪಡಿಸಿದ ಆಹಾರವನ್ನು ಒಮ್ಮೆ ಸೇವಿಸಿದರೆ ಅವು ಮತ್ತೆ ಮತ್ತೆ ಬಾಯಿ ಚಪಲ ಹೆಚ್ಚಿಸುತ್ತವೆ. ಚಿಕ್ಕ ಮಕ್ಕಳು, ಯುವತಿಯರು ಇಂತಹ ಆಹಾರ ಸೇವನೆಗೆ ಹೆಚ್ಚು ಇಷ್ಟಪಡುತ್ತಿದ್ದಾರೆ. ದಿನವೊಂದಕ್ಕೆ ಜಿಲ್ಲೆಯಲ್ಲಿಯೇ ಸರಾಸರಿ 150 ಕೆ.ಜಿಗಿಂತ ಹೆಚ್ಚು ರಾಸಾಯನಿಕ ಪದಾರ್ಥಗಳು ಮನುಷ್ಯರ ಹೊಟ್ಟೆ ಸೇರುತ್ತಿವೆ’ ಎಂದೂ ಕಳವಳ ವ್ಯಕ್ತಪಡಿಸಿದರು.

ಪೊಟ್ಟಣಕ್ಕೆ ಪೇಪರ್: ಅಪಾಯ

ವೆಚ್ಚ ತಗ್ಗಿಸಲು ಬಹುತೇಕ ಬೀದಿಬದಿಯ ಅಂಗಡಿಕಾರರು, ಹೊಟೆಲ್‍ನವರು ತಿಇಸುಗಳನ್ನು ಪೊಟ್ಟಣದಲ್ಲಿ ಕಟ್ಟಿಕೊಡಲು ಹಳೆಯ ದಿನಪತ್ರಿಕೆಗಳನ್ನು ಬಳಸುವುವುದು ಹೆಚ್ಚು. ಎಣ್ಣೆಯಲ್ಲಿ ಕರಿದ ಪದಾರ್ಥ, ಇತರ ತಿನಿಸುಗಳನ್ನು ಪತ್ರಿಕೆಯಲ್ಲಿ ಕಟ್ಟಿಕೊಡುತ್ತಿರುವುದು ಅಪಾಯಕಾರಿ ಎಂಬುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ಅನಿಸಿಕೆ.

ಕಾರವಾರದ ಬೇಕರಿಯೊಂದರಲ್ಲಿ ತಿನಿಸುಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ.
ಕಾರವಾರದ ಬೇಕರಿಯೊಂದರಲ್ಲಿ ತಿನಿಸುಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ.

‘ಪತ್ರಿಕೆಗಳನ್ನು ಮುದ್ರಿಸಲು ಬಳಸುವ ಇಂಕ್‍ಗಳಲ್ಲಿ ಕಾರ್ಬನ್‍ಯುಕ್ತ ರಾಸಾಯನಿಕಗಳಿರುತ್ತವೆ. ಪತ್ರಿಕೆಯಲ್ಲಿ ಎಣ್ಣೆಯಲ್ಲಿ ಕರಿದ ತಿನಿಸು, ಇತರ ಆಹಾರ ಪದಾರ್ಥ ಕಟ್ಟಿಕೊಡುವುದರಿಂದ ಈ ರಾಸಾಯನಿಕಗಳು ಆಹಾರದೊಂದಿಗೆ ಮಿಶ್ರಣಗೊಂಡು ಮನುಷ್ಯನ ಹೊಟ್ಟೆ ಸೇರುತ್ತವೆ. ಅಲ್ಲಿ ಜೀರ್ಣಾಂಗವ್ಯೂಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ’ ಎನ್ನುತ್ತಾರೆ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ರಾಜಶೇಖರ್.

ಶಿರಸಿಯ ಬೇಕರಿಯೊಂದರ ಆಹಾರ ತಯಾರಿಸುವ ಸ್ಥಳದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಶಿರಸಿಯ ಬೇಕರಿಯೊಂದರ ಆಹಾರ ತಯಾರಿಸುವ ಸ್ಥಳದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಕಾರವಾರದಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಚೇರಿ.
ಕಾರವಾರದಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಚೇರಿ.
ಅಜಿನೊಮೊಟೊ ಹೆಚ್ಚು ಬಳಕೆ ತಡೆಯುವ ಜತೆಗೆ ರಾಸಾಯನಿಕ ಬಣ್ಣಗಳನ್ನು ಆಹಾರ ಸಾಮಗ್ರಿಗಳಲ್ಲಿ ಬಳಸದಂತೆ ಎಚ್ಚವಹಿಸಲಾಗುತ್ತಿದೆ. ಹೊಟೆಲ್ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಇವುಗಳ ಪತ್ತೆ ಹಚ್ಚಲಾಗುತ್ತಿದೆ.
ಡಾ.ರಾಜಶೇಖರ್ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ
ಕಲಬೆರಕೆ ಪದಾರ್ಥ ರಾಸಾಯನಿಕಯುಕ್ತ ಆಹಾರ ಸಾಮಗ್ರಿ ಮಾರಾಟ ತಡೆಗೆ ನಿರಂತರವಾಗಿ ದಾಳಿ ನಡೆಸಿದ ಪರಿಣಾಮ ಈಚೆಗೆ ಅವುಗಳ ಬಳಕೆ ಕಡಿಮೆಯಾಗಿದೆ.
ಅರುಣಕಾಶಿ ಭಟ್, ಆಹಾರ ಸುರಕ್ಷತಾ ಅಧಿಕಾರಿ
ಆಹಾರ ಕೆಡದಂತೆ ಬಳಸುವ ಮತ್ತು ಅಲಂಕಾರಕ್ಕೆ ಬಳಸುವ ಕೆಲವು ಉತ್ಪನ್ನಗಳು ಆರೋಗ್ಯಕ್ಕೆ ಮಾರಕವಾಗಿವೆ. ಅವು ತಲೆನೋವಿನಂತ ಸಾಮಾನ್ಯ ಸಮಸ್ಯೆಯಿಂದ ಹಿಡಿದು ಹೃದಯ ಕಾಯಿಲೆಯಂತ ಗಂಭೀರ ಸಮಸ್ಯೆ ತಂದೊಡ್ಡಬಹುದು.
- ಡಾ.ಗಜಾನನ ನಾಯಕ, ಕ್ರಿಮ್ಸ್ ನಿರ್ದೇಶಕ
ಹೊಟೆಲ್ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಈಚೆಗೆ ರುಚಿ ಹೆಚ್ಚಿಸಲು ಮಿತಿಮೀರಿ ರಾಸಾಯನಿಕ ಅಂಶ ಬೆರೆಸಲಾಗುತ್ತಿದೆ. ಇವುಗಳಿಗೆ ನಿಯಂತ್ರಣ ಹೇರದಿದ್ದರೆ ಗಂಭೀರ ಕಾಯಿಲೆಗಳು ಹೆಚ್ಚಬಹುದು.
- ವಿನಾಯಕ ನಾಯ್ಕ ಸಾಮಾಜಿಕ ಕಾರ್ಯಕರ್ತ
ಗಂಭೀರ ಕಾಯಿಲೆಗಳಿಗೆ ಆಹ್ವಾನ
‘ಆಹಾರ ಪದಾರ್ಥ ದೀರ್ಘಕಾಲದವರೆಗೆ ಕೆಡದಂತೆ ಬಳಸುವ ರಾಸಾಯನಿಕಗಳಲ್ಲಿನ ನೈಟ್ರೇಟ್ ಅಂಶಗಳು ಅಲ್ಜಮೈರ್ ಮಧುಮೇಹದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಆಹಾರ ಕೆಡಿಸುವ ಬ್ಯಾಕ್ಟಿರಿಯಾ ಉತ್ಪಾದನೆಯಾಗದಂತೆ ತಡೆಯಲು ಬಳಕೆ ಮಾಡುವ ರಾಸಾಯನಿಕಗಳು ಉದರ ಕ್ಯಾನ್ಸರ್ ಉಂಟುಮಾಡುವ ಅಪಾಯ ಹೆಚ್ಚು’ ಎನ್ನುತ್ತಾರೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ನಿರ್ದೇಶಕ ಡಾ.ಗಜಾನನ ನಾಯಕ. ‘ಸಲಾಡ್‍ಗಳ ಅಲಂಕಾರ ಕೆಲ ಬಗೆಯ ಕ್ಯಾಂಡಿ ಸಿಹಿ ತಿನಿಸುಗಳಲ್ಲಿ ಬಳಸುವ ಪದಾರ್ಥಗಳ ಅತಿಯಾದ ಸೇವನೆ ಹಾರ್ಮೋನುಗಳ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಡ್ರೈ ಫ್ರುಟ್ಸ್ ಮಾಂಸಾಹಾರಿ ಖಾದ್ಯಗಳನ್ನು ಕೆಡದಂತೆ ಇಡಲು ಬಳಸುವ ಪದಾರ್ಥಗಳು ಹೊಟ್ಟೆ ಸೇರುವುದರಿಂದ ಅಲರ್ಜಿ ಅಸ್ತಮಾ ಸಮಸ್ಯೆಗಳು ಉದ್ಭವಗೊಳ್ಳಬಹುದು. ತಂಪುಪಾನೀಯ ಸಿಹಿ ಸಿರಪ್‍ಗಳಲ್ಲಿ ಬಳಸುವ ಪದಾರ್ಥಗಳು ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ’ ಎನ್ನುತ್ತಾರೆ ಅವರು. 
ಜಿಲ್ಲೆಗೆ ಇಬ್ಬರೇ ಅಧಿಕಾರಿಗಳು!
ಒಂದೆಡೆ ಈಚೆಗೆ ವ್ಯಾಪಕ ಪ್ರಮಾಣದಲ್ಲಿ ರಾಸಾಯನಿಕಯುಕ್ತ ತಿನಿಸುಗಳು ಬಳಕೆ ಹೆಚ್ಚುತ್ತಿದೆ ಎಂಬ ದೂರುಗಳ ನಡುವೆಯೇ ಅವುಗಳಿಗೆ ಕಡಿವಾಣ ಹಾಕಬೇಕಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದಲ್ಲಿ ಸಿಬ್ಬಂದಿ ಇಲ್ಲದೆ ಸಮಸ್ಯೆಯಾಗಿದೆ. 12 ತಾಲ್ಲೂಕುಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಪ್ರಾಧಿಕಾರಕ್ಕೆ ಜಿಲ್ಲಾ ಅಂಕಿತ ಅಧಿಕಾತ ಅಧಿಕಾರಿಯ ಹೊರತಾಗಿ ಒಬ್ಬರು ಆಹಾರ ಸುರಕ್ಷತಾ ಅಧಿಕಾರ ಮಾತ್ರ ಇದ್ದಾರೆ. ‘ಪ್ರತಿ ತಾಲ್ಲೂಕಿಗೆ ಒಂದರಂತೆ ಆಹಾರ ಸುರಕ್ಷತಾ ಅಧಿಕಾರಿ ಇರಬೇಕು ಎಂಬ ನಿಯಮವಿದೆ. ಸದ್ಯ ಒಬ್ಬರೇ ಅಧಿಕಾರಿ ಇದ್ದು ಅವರಿಗೆ ಎಲ್ಲ ತಾಲ್ಲೂಕು ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ರಸಾಯನಶಾಸ್ತ್ರದಲ್ಲಿ ಸ್ನತಕೋತ್ತರ ಪದವಿ ಪಡೆದವರ ಮಾಹಿತಿಯನ್ನು ಇಲಾಖೆ ಕೇಳಿದ್ದು ಅವರ ಮಾಹಿತಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಇನ್ನೊಂದಿಷ್ಟು ಅಧಿಕಾರಿಗಳ ನೇಮಕವಾಗಬಹುದು ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ರಾಜಶೇಖರ್.
ಒಂದು ವರ್ಷದಲ್ಲಿ 45 ದಾಳಿ
ಕಳೆದ ವರ್ಷದ ಜೂನ್‍ನಿಂದ ಪ್ರಸಕ್ತ ಸಾಲಿನ ಸೆಪ್ಟೆಂಬರ್ ತಿಂಗಳಿನವರೆಗೆ ಜಿಲ್ಲೆಯಾದ್ಯಂತ ಸುಮಾರು 45 ಕಡೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಲಾಗುತ್ತಿದ್ದ ಅಜಿನೊಮೊಟೊ ರಾಸಾಯನಿಕ ಬಣ್ಣಗಳನ್ನು ವಶಕ್ಕೆ ಪಡೆದು ಅಂಗಡಿಕಾರರಿಗೆ ದಂಡ ವಿಧಿಸಲಾಗಿದೆ. ‘ದಿಢೀರ್ ದಾಳಿ ನಡೆಸಿ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ₹157500 ಮೊತ್ತದಷ್ಟು ದಂಡ ಸಂಗ್ರಹಿಸಿದ್ದು ದಂಡ ಸಂಗ್ರಹದಲ್ಲಿ ರಾಜ್ಯದಲ್ಲಿ 4ನೇ ಸ್ಥಾನದಲ್ಲಿದ್ದೇವೆ’ ಎಂದು ಡಾ.ರಾಜಶೇಖರ್ ಹೇಳಿದರು.
ನಿರ್ಬಂಧವಿಲ್ಲ:ಬಳಕೆಗೆ ಮಿತಿ
‘ಅಜಿನೊಮೊಟೊ ಪದಾರ್ಥದ ಬಳಕೆಗೆ ನಿರ್ಬಂಧ ಹೇರಿಲ್ಲ. ಆದರೆ ಆಹಾರ ತಯಾರಿಕೆಯಲ್ಲಿ ನಿಗದಿತ ಮಿತಿಯಲ್ಲಿ ಬಳಕೆಗೆ ಸೂಚನೆ ಇದೆ. ಆಹಾರದ ಪ್ರಮಾಣ ಆಧರಿಸಿ ಗರಿಷ್ಠ 3 ಮಿಲಿ ಗ್ರಾಂ ಮಾತ್ರ ಬಳಕೆಗೆ ಅವಕಾಶವಿದೆ. ಇದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಸುತ್ತಾರೆ ಆಹಾರ ಸುರಕ್ಷತಾ ಅಧಿಕಾರಿ ಅರುಣಕಾಶಿ ಭಟ್. ‘ರಾಸಾಯನಿಕ ಬಣ್ಣಗಳನ್ನು ಸಿದ್ಧ ಆಹಾರ ಐಸ್‍ಕ್ರೀಮ್ ತಂಪುಪಾನೀಯಗಳಲ್ಲಿ ಮಾತ್ರ ಬಳಸಲು ಅನುಮತಿ ಇದೆ. ಇದರ ಹೊರತಾಗಿ ಹೊಟೆಲ್ ಅಥವಾ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಬಳಸಲು ಅನುಮತಿ ಇಲ್ಲ. ಗೋಬಿ ಮಂಚೂರಿ ಕಬಾಬ್ ತಂದೂರಿ ಪದಾರ್ಥ ಸೇರಿ ವಿವಿಧ ಪದಾರ್ಥಗಳಲ್ಲಿ ರಾಸಾಯನಿಕ ಬಣ್ಣ ಬಳಕೆಗೆ ಮುಂದಾದರೆ ಅಂತಹ ಅಂಗಡಿಕಾರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ’ ಎಂದೂ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT