ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಪ್ರತಿಭಟನೆ

ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಭಾಗಿ
Last Updated 9 ಜುಲೈ 2019, 11:01 IST
ಅಕ್ಷರ ಗಾತ್ರ

ಶಿರಸಿ: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಪಡಿಸಬೇಕು ಎಂಬ ಮುಖ್ಯ ಬೇಡಿಕೆಯೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರು ಮಂಗಳವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಬಿಡುವಿಲ್ಲದ ಮಳೆಯ ನಡುವೆಯೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಹಳಿಯಾಳ ಹಾಗೂ ಜೊಯಿಡಾ ತಾಲ್ಲೂಕುಗಳ ಸಾವಿರಾರು ಶಿಕ್ಷಕರು ಛತ್ರಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಸಭೆ ನಡೆಸಿ, ಅಲ್ಲಿಂದ ಮೆರವಣಿಗೆ ಹೊರಟು ಯಲ್ಲಾಪುರ ರಸ್ತೆ, ಅಶ್ವಿನಿ ಸರ್ಕಲ್, ಯಲ್ಲಾಪುರ ನಾಕೆ ಮೂಲಕ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಚೇರಿಗೆ ತೆರಳಿ, ಹಕ್ಕೊತ್ತಾಯ ಮಂಡಿಸಿದರು.

ಶಿಕ್ಷಕರ ವರ್ಗಾವಣೆ ನೀತಿ ಬದಲಿಸಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಡಿಡಿಪಿಐ ಹುದ್ದೆವರೆಗೆ ಬಡ್ತಿ ನೀಡಬೇಕು, ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮುಂದುವರಿಸಬೇಕು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೇ ಇರುವುದರಿಂದ ಈಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಎಲ್ಲ ಸೇವೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕ ಹುದ್ದೆಯವರೆಗೂ ಬಡ್ತಿ ನೀಡಬೇಕು. ಈಗಾಗಲೇ ಸರ್ಕಾರಕ್ಕೆ ಅನೇಕ ಬಾರಿ ಬೇಡಿಕೆ ಸಲ್ಲಿಸಲಾಗಿದೆ. ಈಗಲೂ ಸ್ಪಂದಿಸದಿದ್ದಲ್ಲಿ ಸೆಪ್ಟೆಂಬರ್‌ 5ರಂದು ನಡೆಯುವ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ನಾಯಕ, ಪ್ರಮುಖರಾದ ಸಿದ್ದಾಪುರದ ಎಂ.ಕೆ.ನಾಯ್ಕ ಕಡಕೇರಿ, ಸುರೇಶ ಪಟಗಾರ, ಅಶೋಕ ಭಜಂತ್ರಿ, ಬಾಲಚಂದ್ರ ಪಟಗಾರ, ಗಣೇಶ ನಾಯ್ಕ, ಪ್ರಕಾಶ ನಾಯ್ಕ ಯಲ್ಲಾಪುರ, ಪ್ರಶಾಂತ ನಾಯ್ಕ ಹಳಿಯಾಳ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕೃಷ್ಣ ಕಾಮಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT