ಸಹಕಾರ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಲಿ: ಸತೀಶ ಮರಾಠೆ

ಶಿರಸಿ: ‘ಸಹಕಾರ ಬ್ಯಾಂಕುಗಳು, ಸಂಸ್ಥೆಗಳು ದೈನಂದಿನ ಆಡಳಿತದಲ್ಲಿ ತಂತ್ರಜ್ಞಾನಗಳ ಬಳಕೆ ಹೆಚ್ಚಿಸಬೇಕು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಜತೆಗೆ ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು’ ಎಂದು ಆರ್.ಬಿ.ಐ. ಕೇಂದ್ರೀಯ ಮಂಡಳಿ ನಿರ್ದೇಶಕ ಸತೀಶ ಕೆ.ಮರಾಠೆ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ದಿ ಶಿರಸಿ ಅರ್ಬನ್ ಸಹಕಾರ ಬ್ಯಾಂಕ್ ಹಾಗೂ ದಿ.ವಿ.ಎಸ್.ಸೋಂದೆ ಫೌಂಡೇಶನ್ ಜಂಟಿಯಾಗಿ ದಿ.ವಿ.ಎಸ್.ಸೋಂದೆ ಅವರ ಸ್ಮರಣಾರ್ಥ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅರ್ಬನ್ ಸಹಕಾರ ಬ್ಯಾಂಕ್‍ಗಳು ದೇಶದ ಅರ್ಥ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡುತ್ತಿವೆ. ಕೇವಲ ವಹಿವಾಟು ವೃದ್ಧಿಸಿದರೆ ಸಾಲದು, ಅದರೊಟ್ಟಿಗೆ ಸೂಕ್ತ ನೀತಿಗಳ ರಚನೆ ಹಾಗೂ ಆರ್ಥಿಕ ಶಿಕ್ಷಣವನ್ನು ಗ್ರಾಹಕರಿಗೆ ನೀಡುವ ಕೆಲಸ ಆಗಬೇಕು. ಸರ್ಕಾರ, ಆರ್.ಬಿ.ಐ. ನಿಯಮಾವಳಿಗಳನ್ನು ಪಾಲಿಸಲು ಮುತುವರ್ಜಿ ವಹಿಸಬೇಕು’ ಎಂದು ಸೂಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಸರ್ಕಾರ ಹೇರುವ ನಿಯಮಗಳ ಪಾಲನೆಯಾಗಲಿ. ಶಿರಸಿ ಅರ್ಬನ್ ಬ್ಯಾಂಕ್ ಆರ್ಥಿಕ ಶಿಸ್ತು ಪಾಲನೆಯಲ್ಲಿ ಮಾದರಿಯಾಗಿದೆ’ ಎಂದರು.
ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ‘ಸಹಕಾರ ಕ್ಷೇತ್ರ ಸರಿದಾರಿಯಲ್ಲಿ ನಡೆಯಲು ಅರ್ಬನ್ ಸಹಕಾರ ಬ್ಯಾಂಕ್‍ಗಳ ಪಾತ್ರ ಮಹತ್ವದ್ದಾಗಿದೆ. ಕಿರು ಉದ್ಯಮಗಳಿಗೆ ನೆರವು ಒದಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಅವಕಾಶ ನಿರ್ಮಿಸಿ’ ಎಂದರು.
ಶಿರಸಿ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಜಯದೇವ ನೀಲೆಕಣಿ, ‘ಸಮಾಜದ ಹಲವು ಕ್ಷೇತ್ರಗಳಿಗೆ ವಿ.ಎಸ್.ಸೋಂದೆ ಕೊಡುಗೆ ನೀಡಿದ್ದಾರೆ’ ಹೀಗಾಗಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಉಪನ್ಯಾಸ ಆಯೋಜಿಸಲಾಗುವುದು’ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 400ಕ್ಕೂ ಹೆಚ್ಚು ಅರ್ಬನ್ ಸಹಕಾರ ಬ್ಯಾಂಕ್‍ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಿ.ಎಸ್.ಸೋಂದೆ ಫೌಂಡೇಶನ್ ಟ್ರಸ್ಟಿ ರಾಜೇಶ ಧಾಕಪ್ಪ ಇದ್ದರು.
ಸ್ಪೀಕರ್ ಮಾತಿಗೆ ಪ್ರತ್ಯುತ್ತರ:
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ‘ಜಗತ್ತಿನಲ್ಲಿ ಇಂಗ್ಲೆಂಡ್‍ನಂತಹ ಪ್ರಬಲ ರಾಷ್ಟ್ರಗಳ ಆರ್ಥಿಕ ಸ್ಥಿತಿ ಕುಗ್ಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಆಡಳಿತದಿಂದ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ’ ಎಂದರು.
ಇದಕ್ಕೆ ತಮ್ಮ ಭಾಷಣದ ವೇಳೆ ಪ್ರತ್ಯುತ್ತರ ನೀಡಿದ ಶಾಸಕ ಆರ್.ವಿ.ದೇಶಪಾಂಡೆ, ‘ಷೇರು ಸೂಚ್ಯಂಕ ನೋಡಿ ದೇಶದ ಆರ್ಥಿಕ ಸ್ಥಿತಿ ಅಳೆಯಬಾರದು. ಹಣದುಬ್ಬರ ಹೆಚ್ಚಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಬ್ಯಾಂಕ್‍ಗಳು ಠೇವಣಿ ಬಡ್ಡಿದರ ಇಳಿಸಿ, ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿವೆ. ಇವುಗಳನ್ನೆಲ್ಲ ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.