ಶನಿವಾರ, ಏಪ್ರಿಲ್ 1, 2023
23 °C
ನಬಾರ್ಡ್‍ನಿಂದ ಮಂಜೂರಾಗಿದ್ದ ಅನುದಾನ ಅನ್ಯ ಯೋಜನೆಗೆ ಬಳಕೆ ಸಾಧ್ಯತೆ

ಕಾರವಾರ: ‘ತಿಳಮಾತಿ’ಯಿಂದ ದೂರವಾದ ತೂಗುಸೇತುವೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ದೇಶದಲ್ಲಿರುವ ಕೇವಲ ಎರಡು ಕಪ್ಪು ಮರಳಿನ ಕಡಲತೀರದ ಪೈಕಿ ಒಂದೆನಿಸಿರುವ ತಾಲ್ಲೂಕಿನ ಮಾಜಾಳಿ ಸಮೀಪದ ತಿಳಮಾತಿಗೆ ತೂಗುಸೇತುವೆ ನಿರ್ಮಿಸುವ ಯೋಜನೆ ಕಡತಕ್ಕಷ್ಟೇ ಸೀಮಿತವಾಗಿದೆ. ಒಂಬತ್ತು ವರ್ಷಗಳ ಹಿಂದೆ ಮಂಜೂರಾಗಿದ್ದ ಅನುದಾನವೂ ವಾಪಸ್ಸಾಗಿದೆ.

2013–14ನೇ ಸಾಲಿನಲ್ಲಿ ನಬಾರ್ಡ್ ವತಿಯಿಂದ ಪ್ರವಾಸೋದ್ಯಮ ಇಲಾಖೆಗೆ ಗ್ರಾಮೀಣ ಅಭಿವೃದ್ಧಿ ಅನುದಾನದಡಿ (ಆರ್.ಡಿ.ಎಫ್.) ತಿಳಮಾತಿ ಕಡಲತೀರಕ್ಕೆ 600 ಮೀ. ಉದ್ದದ ತೂಗು ಸೇತುವೆ ನಿರ್ಮಿಸಲು ₹2.30 ಕೋಟಿ ಮತ್ತು ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹1.50 ಕೋಟಿ ಅನುದಾನ ಬಿಡುಗಡೆ ಆಗಿತ್ತು.

ನಿಗದಿತ ಅವಧಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ತರದ ಕಾರಣ ಎರಡು ವರ್ಷಗಳ ಹಿಂದೆಯೇ ಅನುದಾನ ವಾಪಸ್ ಮಾಡಲು ಪ್ರವಾಸೋದ್ಯಮ ಇಲಾಖೆಗೆ ನಬಾರ್ಡ್ ಸೂಚಿಸಿತ್ತು. ಪ್ರವಾಸೋದ್ಯಮ ಇಲಾಖೆಯ ಮೂಲಗಳ ಮಾಹಿತಿಯಂತೆ ಈ ಹಿಂದೆ ಮಂಜೂರಾಗಿದ್ದ ಅನುದಾನ ಸರ್ಕಾರಕ್ಕೆ ವಾಪಸ್ಸಾಗಿದೆ.

‘ತಿಳಮಾತಿ ಕಡಲತೀರ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಅನುದಾನ ಮರಳಿಸಲು ಪತ್ರ ವ್ಯವಹಾರ ನಡೆದಿರುವುದು ನಿಜ. ಆದರೆ ಅನುದಾನ ಜಿಲ್ಲೆಯ ಪ್ರವಾಸಿ ತಾಣದ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ಕುರಿತು ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ವಿ.ಜಯಂತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘2016–17ನೇ ಸಾಲಿನಲ್ಲಿ ತಿಳಮಾತಿ ಕಡಲತೀರಕ್ಕೆ ತೂಗು ಸೇತುವೆ, ಸಂಪರ್ಕ ರಸ್ತೆ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಮಂಗಳೂರಿನ ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದುಕೊಂಡಿದ್ದರು. ಆದರೆ ನಿಗದಿತ ಸಮಯದಲ್ಲಿ ಅವರು ಕೆಲಸ ಆರಂಭಿಸಿರಲಿಲ್ಲ. ಹಲವು ಬಾರಿ ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ. ನಿಗದಿತ ಅವಧಿ ಮುಗಿದ ಕಾರಣ ಅನುದಾನ ಮರಳಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತೂಗುಸೇತುವೆ ಅನುದಾನ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಯನ್ನು ನಂತರ ಬಂದ ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ತಾಂತ್ರಿಕ ಸಮಸ್ಯೆಯಿಂದ ಅನುದಾನ ಬಳಕೆ ಸಾಧ್ಯವಾಗಿಲ್ಲ. ಇದಕ್ಕೆ ರಾಜಕೀಯ ಬಣ್ಣ ಲೇಪನ ಸರಿಯಲ್ಲ ಎಂದು ಬಿಜೆಪಿ ಮುಖಂಡರು ವಾದಿಸುತ್ತಿದ್ದಾರೆ.

ಸೌಕರ್ಯದ ನಿರೀಕ್ಷೆಯಲ್ಲಿ:

ತಿಳಮಾತಿ ಕಡಲತೀರಕ್ಕೆ ಸಾಗಲು ಮಾಜಾಳಿಯ ಗಾಬೀತವಾಡಾ ಕಡಲತೀರದಿಂದ ಸುಮಾರು ಒಂದು ಕಿ.ಮೀ. ದೂರ ಗುಡ್ಡ ಹತ್ತಿ ಸಾಗಬೇಕು. ಕಡಿದಾದ ರಸ್ತೆಯಲ್ಲಿ ಸಾಗುವುದು ಅಪಾಯಕಾರಿಯೂ ಹೌದು. ಸಮುದ್ರದ ಅಲೆಗಳು ಅಬ್ಬರಿಸಿದರೆ ರಸ್ತೆಯೂ ಕಡಿತಗೊಳ್ಳುತ್ತದೆ. ಈ ಕಾರಣಕ್ಕೆ ತೂಗು ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಯೂ ಇದೆ.

‘ಪ್ರವಾಸಿಗರನ್ನು ಸೆಳೆಯುವ ಕಡಲತೀರದ ಬಳಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು’ ಎನ್ನುತ್ತಾರೆ ಪ್ರವಾಸಿಗ ನಿತೇಶ್.

*

ತಿಳಮಾತಿ ಕಡಲತೀರಕ್ಕೆ ತೂಗುಸೇತುವೆ ನಿರ್ಮಿಸಲು ಮಂಜೂರಾಗಿದ್ದ ಅನುದಾನ ನಿರ್ದಿಷ್ಟ ಸಮಯದಲ್ಲಿ ಬಳಸಲಾಗದೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಆ ಅನುದಾನವನ್ನು ಬೇರೆ ಸ್ಥಳದ ಅಭಿವೃದ್ಧಿಗೆ ಬಳಸಲು ಅವಕಾಶ ನೀಡುವ ಕುರಿತು ಇನ್ನಷ್ಟೆ ಚರ್ಚೆ ನಡೆಸಲಾಗುವುದು.
–ಎಚ್.ವಿ.ಜಯಂತ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು