ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಸಿರಿಯ ಮುಂದೆ ಕಂಗೊಳಿಸುವ ವಿದ್ಯಾಮಂದಿರ

ತೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ
Last Updated 12 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಕಾರವಾರ:‘ಮನುಷ್ಯತ್ವ ಇರೆ, ನಿಜಕ್ಕೂ ನೀ ದೊರೆ.. ನಿತ್ಯ ಸ್ವಾಗತದ ಕರೆ..!’

ಇದು ತಾಲ್ಲೂಕಿನ ತೋಡೂರು ಸರ್ಕಾರಿ ಪ್ರೌಢಶಾಲೆಯ ಬಾಗಿಲಿನಲ್ಲಿರುವ ನುಡಿಮುತ್ತು. ಸೀಬರ್ಡ್ ನೌಕಾನೆಲೆ ಸ್ಥಾಪನೆಗೆ ಭೂಮಿ ಕಳೆದುಕೊಂಡ ಕುಟುಂಬಗಳ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. ಶೈಕ್ಷಣಿಕ ಮಾತ್ರವಲ್ಲ ಮಾನವೀಯ ಗುಣಗಳನ್ನೂ ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಾಲೆಯ ಗೋಡೆಗಳಲ್ಲಿ ಇಂತಹ ಹಲವಾರು ಬರಹಗಳು ಆಕರ್ಷಿಸುತ್ತವೆ.

ದಟ್ಟವಾದ ಕಾಡಿನ ಹಿನ್ನೆಲೆಯಲ್ಲಿ 2007–08ರಲ್ಲಿ ಸ್ಥಾಪನೆಯಾದ ಈ ಶಾಲೆ ಇಂದು ತೋಡೂರು ಕಾಲೊನಿಯ ವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿದೆ. ವಿದ್ಯಾಭ್ಯಾಸಕ್ಕೆ ಸಮೀಪದಲ್ಲಿ ಯಾವುದೇ ಸೌಲಭ್ಯ ಇಲ್ಲದಿರುವ ಪ್ರದೇಶದಲ್ಲಿ ಮಕ್ಕಳ ಜ್ಞಾನ ದೀವಿಗೆಯನ್ನು ಪ್ರಖರವಾಗಿ ಬೆಳಗುತ್ತಿದೆ. ಸುತ್ತಮುತ್ತ ಯಾವುದೇ ಹೆದ್ದಾರಿಗಳೂ ಇಲ್ಲದ ಕಾರಣ ಪರಿಸರ ಅತ್ಯಂತ ಪ್ರಶಾಂತವಾಗಿದ್ದು, ವಿದ್ಯಾಭ್ಯಾಸಕ್ಕೆ ಪೂರಕವಾಗಿದೆ.

ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದುಕೊಂಡ ಈ ಶಾಲೆಯು ಶೈಕ್ಷಣಿಕವಾಗಿ ಸದಾ ಉತ್ತಮ ಸಾಧನೆ ತೋರುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲೂ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಗುಂಪು ಆಟಗಳಲ್ಲಿ ಬಾಲಕಿಯ ತಂಡವು ಬೆಳಗಾವಿ ವಿಭಾಗಮಟ್ಟಕ್ಕೆ ಎರಡು ಬಾರಿ ಆಯ್ಕೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಈಜು ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಶಾಲ್ ನಾಯ್ಕ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದ ಎನ್ನುವುದು ಶಾಲೆಯ ಶಿಕ್ಷಕರ ಹೆಮ್ಮೆಯನ್ನು ಹೆಚ್ಚಿಸಿದೆ.

‘ನಮ್ಮ ಶಾಲೆಯಲ್ಲಿ ಶಿಕ್ಷಕರು ಗುಣಮಟ್ಟದ ಬೋಧನೆ ಮಾಡುತ್ತಿದ್ದಾರೆ. ಈ ವರ್ಷವೂ ಶೇ 100 ಫಲಿತಾಂಶದ ಪಡೆಯುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಅಗತ್ಯ ಕಾಳಜಿ ವಹಿಸುತ್ತಿದ್ದೇವೆ. ಹೆಚ್ಚು ಗಮನ ಅಗತ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ಆಯೋಜನೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ರಾಜಮ್ಮ ನಾಯಕ.

ಈ ಹಿಂದೆ ಶಾಲೆಯಲ್ಲಿ ಯಕ್ಷಗಾನದ ಬಾಲಕಿಯ ತಂಡವಿತ್ತು. ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ನಾಯಕ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿದ್ದರು. ಈಗಲೂ ಆಸಕ್ತರಿಗೆ ಅವರು ಯಕ್ಷಗಾನ ಪಾಠ ಹೇಳಿಕೊಡುತ್ತಾರೆ. ಬಿಣಗಾದ ಕಾರ್ಖಾನೆಯಲ್ಲಿ ರಾಜ್ಯೋತ್ಸವ ಆಚರಣೆಗೆ, ಮುದಗಾ ಪ್ರೌಢಶಾಲೆಯ ಸುವರ್ಣ ಮಹೋತ್ಸವಕ್ಕೆ ಈ ತಂಡ ವಿಶೇಷ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದೆ.

ಏನಿದೆ, ಏನಿಲ್ಲ?:ಶಾಲೆಯಲ್ಲಿ ಮುಖ್ಯ ಶಿಕ್ಷಕರೂ ಸೇರಿ ಏಳು ಶಿಕ್ಷಕರನ್ನು ನಿಗದಿ ಮಾಡಲಾಗಿದೆ. ಆದರೆ, ಸಮಾಜ, ಇಂಗ್ಲಿಷ್ ವಿಷಯಗಳ ಶಿಕ್ಷಕರು ಹಾಗೂ ಒಬ್ಬರು ಕ್ಲರ್ಕ್ ಹುದ್ದೆಗಳಿಗೆ ನೇಮಕವಾಗಿಲ್ಲ.

ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ ಸೌಲಭ್ಯವಿದ್ದು, ಪ್ರೊಜೆಕ್ಟರ್‌ಗಳು, ಕಂಪ್ಯೂಟರ್‌ಗಳು ಹಾಗೂ ಪ್ರಯೋಗಾಲಯದ ಪರಿಕರಗಳಿವೆ.

ಶಾಲೆಯ ಎದುರು ವಿಶಾಲವಾದ ಆಟದ ಮೈದಾನಕ್ಕೆ ಜಾಗ ನೀಡಲಾಗಿದೆ. ಅಲ್ಲಿ ಇನ್ನೂ ಸಮತಟ್ಟು ಮಾಡದ ಕಾರಣ ವಿದ್ಯಾರ್ಥಿಗಳಿಗೆ ಆಟೋಟ ಚಟುವಟಿಕೆಗಳಿಗೆ ಅವಕಾಶವಿಲ್ಲ. ಶಾಲೆಯ ಕಟ್ಟಡ ನಿರ್ಮಾಣವಾದ ಬಳಿಕ ನಿರ್ವಹಣೆ ಮಾಡದೇ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕೆಲವು ಕಿಟಕಿ ಬಾಗಿಲು ಮುರಿದಿವೆ.

ಅಂಕಿ ಅಂಶ
* ವಿದ್ಯಾರ್ಥಿನಿಯರೇ ಹೆಚ್ಚು!
* 44 ಬಾಲಕರು
* 49 ಬಾಲಕಿಯರು
* 93 ಒಟ್ಟು ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT