ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮಂಗಳವಾರ ಉತ್ತಮ ಮಳೆಯಾಯಿತು. ಜೊಯಿಡಾ ತಾಲ್ಲೂಕಿನ ಗಣೇಶಗುಡಿಯ ಸೂಪಾ ಜಲಾಶಯ ಭರ್ತಿ ಹಂತಕ್ಕೆ ಸಮೀಪಿಸಿದ ಹಿನ್ನೆಲೆಯಲ್ಲಿ ಮೂರು ವರ್ಷದ ಬಳಿಕ 10 ಸಾವಿರ ಕ್ಯುಸೆಕ್ ನೀರು ಕಾಳಿ ನದಿಗೆ ಹರಿಸಲಾಯಿತು.
‘564 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ 559.75 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 22,144 ಕ್ಯುಸೆಕ್ ಇತ್ತು. ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಒಳಹರಿವು ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ನೀರು ಹರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ ಕೊನೆಯ ಬಾರಿಗೆ ಸೂಪಾ ಜಲಾಶಯದಿಂದ ನೀರು ಹೊರಬಿಡಲಾಗಿತ್ತು. ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯದಲ್ಲಿ ನೀರು ಸಂಗ್ರಹಣೆ ಕಡಿಮೆ ಆಗಿತ್ತು.
ಬಾಗಲಕೋಟೆ ವರದಿ: ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, 11 ಬ್ರಿಡ್ಜ್ ಕಮ್ ಬ್ಯಾರೇಜ್‌ಗಳು ಮುಳುಗಿವೆ. ನದಿಯಲ್ಲಿ 38,281 ಕ್ಯುಸೆಕ್ ನೀರು ಹರಿಯುತ್ತಿದೆ.
ಢವಳೇಶ್ವರ, ಮಿರ್ಜಿ, ಚನ್ನಾಳ, ಉತ್ತೂರ–ಜಾಲಿಬೇರ, ಮುಧೋಳ, ಜೀರಗ್ಯಾಳ, ಇಂಗಳಗಿ, ಜಂಬಗಿ ಕೆ.ಡಿ, ತಿಮ್ಮಾಪುರ, ಮಾಚಕನೂರ ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿದೆ.
‘ಮಲಪ್ರಭಾ ನದಿ ನೀರಿನ ಹರಿವಿನಲ್ಲೂ ಹೆಚ್ಚಳವಾಗಿದೆ. 10,000 ಕ್ಯುಸೆಕ್‌ನಿಂದ 15,000ಕ್ಕೆ ಹೊರ ಹರಿವು ಹೆಚ್ಚುಸುತ್ತಿರುವ ಕಾರಣ ನದಿ ತೀರದ ಜನರು ಎಚ್ಚರದಿಂದ ಇರಬೇಕು’ ಎಂದು ಪ್ರಕಟಣೆ ತಿಳಿಸಿದೆ.