ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment day 2023 ನಾನು ಹಸಿರಾಗಿದ್ದೇನೆ, ನೀವು ತಂಪಾಗಿ...

400 ಎಕರೆ ಬೆಟ್ಟದ ಹರವು, ಸಹಜ ಅರಣ್ಯದತ್ತ ಹೊರಳಿದ ‘ಕಳವೆ’ ಬರಡು ಬೆಟ್ಟ
Published 4 ಜೂನ್ 2023, 20:51 IST
Last Updated 4 ಜೂನ್ 2023, 20:51 IST
ಅಕ್ಷರ ಗಾತ್ರ

ಶಿರಸಿ: ಅಜಮಾಸು 400 ಎಕರೆ ಬೆಟ್ಟದ ಹರವಿನಲ್ಲಿ ಪುಟ್ಟಪುಟ್ಟ ಸಹಸ್ರಾರು ಹೊಸ ಗಿಡಗಳು ತಲೆ ಎತ್ತುತ್ತಿವೆ. ವಿವಿಧ ಜಾತಿಯ ಬೀಜಗಳು ಸಸಿಯಾಗಲು ಮಳೆಗೆ ಕಾಯುತ್ತಿವೆ. ಈಗ ನನ್ನೊಡಲು ತಂಪಾಗಿದೆ, ಬೇಸಿಗೆಯಲ್ಲೂ ಹಸಿರು ಹೊದ್ದು ಸೊಂಪಾಗಿದೆ.

ಹಸಿರಿನಿಂದ ಮೈತುಂಬಿಕೊಂಡು ಕಣ್ಣು ಕುಕ್ಕುವ ನಾನು ದಶಕಗಳ ಹಿಂದೆ ‘ಕಳವೆ’ಯೆಂಬ ಊರಿನ ಬೋಳು ಬೆಟ್ಟವಾಗಿದ್ದೆ. ನನ್ನೊಡಲಲ್ಲಿ ಉರುವಲಿಗೆ ಬಳಸುವ ಮರಗಳಷ್ಟೇ ಇತ್ತು. ಬೇಕಾದಾಗ ಕಡಿದು ಕೊಂಡೊಯ್ಯುತ್ತಿದ್ದವರು ಮತ್ತೆ ನನ್ನ ನೋಡುತ್ತಿದ್ದುದು ವರ್ಷವಾದ ನಂತರವೇ. ಆದರೀಗ ನನ್ನ ಹಸಿರಸಿರಿ ನೋಡಲು ಜನ ಸಾಗರ. 

ಯೋಚನೆ ಹಾಗೂ ಯೋಜನೆಯಲ್ಲಿ ಹಸಿರು ಪ್ರೀತಿಯಿದ್ದರೆ ಬರಡು ಭೂಮಿ ಕೂಡ ಸಹಜ ಅರಣ್ಯದಂತಾಗುತ್ತದೆ ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. 2001ರವರೆಗೂ ನಾನು ಸಾಮಾನ್ಯರಂತೆ ಇದ್ದೆ. ಬೇಸಿಗೆಯಲ್ಲಿ ಮೈತುಂಬ ಬಿರುಕು. ದಾಹವಾದರೆ ನೀರಿಲ್ಲ. ನನ್ನಿಂದ ಎಲ್ಲವೂ ದೂರಾಗಿತ್ತು. ಆಗ ಗ್ರಾಮದಲ್ಲಿ ರಸ್ತೆ ನಿರ್ಮಾಣ ನಡೆದಿತ್ತು. ಅದಕ್ಕೆ ನನ್ನೊಡಲ ಮಣ್ಣನ್ನು ತೆಗೆಯಲಾಗುತ್ತಿತ್ತು. ಪರಿಸರ ಬರಹಗಾರ ಶಿವಾನಂದ ಕಳವೆ ಹಾಗೂ ಗ್ರಾಮದ ಇತರ ಹಸಿರು ಪ್ರೀತಿಯ ವ್ಯಕ್ತಿಗಳು, ಮಣ್ಣು ತೆಗೆಯುವ ಪ್ರದೇಶವನ್ನು ಇಂಗುಗುಂಡಿ ಆಕಾರದಲ್ಲಿ ತೋಡಲು ಸೂಚಿಸಿದರು. ನಂತರ ಮಳೆಯಾಗುತ್ತಿದ್ದಂತೆ ಇಲ್ಲಿನ ತೋಡುಗಳೆಲ್ಲ ಜಲಪಾತ್ರೆಗಳಾಗಿ ನಿಂತಿದ್ದವು. ನಂತರ ನನ್ನೆದುರು ನಡೆದಿದ್ದು ಮಾತ್ರ ಹಸಿರು ತಪಸ್ಸು!

ಗ್ರಾಮದಲ್ಲಿ ಪರಿಸರ ಪಾಠ ಆರಂಭವಾಯಿತು. ಓಡುವ ನೀರು ನಿಲ್ಲಿಸುವ, ನಿಂತ ನೀರನ್ನು ನನ್ನಾಳಕ್ಕೆ ಇಂಗಿಸುವ ಮಾದರಿ ಹೆಚ್ಚಿದವು. ಕೆರೆಗಳು ಹುಟ್ಟಿದವು. ಸುತ್ತಮುತ್ತ ಗಿಡಗಳ ನಾಟಿ ನಡೆಯಿತು. ಬಗೆಬಗೆಯ ಹಣ್ಣುಗಳು, ನೀರು ಹಿಡಿದಿಡುವ ಜಾತಿಯ ಸಸ್ಯಗಳು ತಳವೂರಿದವು. ನನ್ನಾಳದಲ್ಲಿ ತಂಪು ಹೆಚ್ಚಿ ಹತ್ತಿರದ ಹೊಳೆಗೆ ಒರತೆ  ನೀರು ಹೊರಸೂಸಲಾರಂಭಿಸಿತು. ಬಿರುಬೇಸಿಗೆಗೂ ಹಸಿರು ಬಣ್ಣ ಕಳೆದುಕೊಳ್ಳದೆ ನಿಲ್ಲುವಂತಾಯಿತು. ಇಲ್ಲಿನವರು ‘ಕಾನ್ಮನೆ’ ನಿರ್ಮಿಸಿ ಪರಿಸರ ಪಾಠ ಆರಂಭಿಸಿದರು. ಲಕ್ಷಕ್ಕೂ ಹೆಚ್ಚು ಮಂದಿ ಪರಿಸರ ಎಂದರೇನು? ಅರಿತು ನಡೆದರು.

ಇವು ನಿರಂತರವಾಗಿ ನಡೆಯುವಾಗ ನನ್ನ ಮೈಮೇಲೆ ನೆಟ್ಟು ಬೆಳೆಸಿದ ಮರಗಳಿಂದ ಬೀಜಗಳು ಬಿದ್ದು ನೈಸರ್ಗಿಕವಾಗಿ ಸಸಿಗಳು ಹುಟ್ಟಲಾರಂಭಿಸಿದವು. ಅವೆಲ್ಲವೂ ಸೇರಿ ಮುಂದಿನ ಸಂತತಿ ಸೃಷ್ಟಿಸುತ್ತ ನನ್ನನ್ನು ಶ್ರೀಮಂತ ಗೊಳಿಸಿವೆ. ಈವರೆಗೆ ಮೂರು ಲಕ್ಷ ಗಿಡಗಳಿಗೆ ನಾನು ಆಶ್ರಯದಾತೆಯಾಗಿದ್ದೇನೆ. ಕೋಕಂ, ಸಾಲುದೂಪ, ದಾಲ್ಚಿನ್ನಿಯಂಥ ಹೊಸ ಸಸಿಗಳು ತಲೆಯೆತ್ತುತ್ತಿವೆ. ವನ್ಯಜೀವಿಗಳು ಮೊದಲಿಗಿಂತ ಹೆಚ್ಚು ಕಾಣುತ್ತಿವೆ. ತೋಟಪಟ್ಟಿಗೆ ಲಗ್ಗೆಯಿಡುತ್ತಿದ್ದ ಮಂಗಗಳು ಆಹಾರ ಹುಡುಕುತ್ತ ನನ್ನತ್ತ ಬರುತ್ತಿವೆ. ನಾನೀಗ ಸಹಜ ಅರಣ್ಯದತ್ತ ನಿಧಾನಕ್ಕೆ ಹೊರಳುತ್ತಿದ್ದೇನೆ.

2023ರಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಕಳವೆ ಬೆಟ್ಟ
2023ರಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಕಳವೆ ಬೆಟ್ಟ

ಇತ್ತೀಚೆಗೆ ಶಿವಾನಂದ ಕಳವೆ ಅರಣ್ಯ ಸಿಬ್ಬಂದಿಗೆ ಪಾಠ ಮಾಡುತ್ತ, 'ಅರಣ್ಯೀಕರಣ ಯಶಸ್ಸು ನಾವು ನೆಟ್ಟ ಸಸಿ ಮರವಾಗಿ ಬೆಳೆಯುವುದಲ್ಲ. ಬದಲಾಗಿ ನೆಟ್ಟು ಬೆಳೆಸಿದ ಮರಗಳ ಮುಂದಿನ ಪೀಳಿಗೆ ಅಲ್ಲಿ ಸೃಷ್ಟಿಯಾಗುವುದು ನಿಜವಾದ ಯಶಸ್ಸು' ಎನ್ನುತ್ತಿದ್ದುದು ಕೇಳಿ ಸಮಾಧಾನ ಪಟ್ಟಿದ್ದೇನೆ. 

Quote - ಬರಿದಾದ ನೆಲವು ಅರಣ್ಯ ಸ್ವರೂಪ ಪಡೆಯುವಲ್ಲಿ ನೆಲ ಜಲದೆಡೆ ಮಾನವರ ನಿಸ್ವಾರ್ಥ ಸೇವೆ ಅಗತ್ಯ.
–ಶಿವಾನಂದ ಕಳವೆ, ಪರಿಸರ ಬರಹಗಾರ ಶಿರಸಿ
ವೈವಿಧ್ಯದ ಹಸಿರು ತಾಣ...
ಶಿರಸಿ ತಾಲ್ಲೂಕಿನ ಕಳವೆ ಗ್ರಾಮದಲ್ಲಿ ಅಂದಾಜು 110 ಮನೆಗಳು ಸೇರಿ 400 ಎಕರೆಗೂ ಹೆಚ್ಚಿನ ಬೆಟ್ಟಭೂಮಿ ಇದೆ. ಗ್ರಾಮದ ಪ್ರತಿಯೊಬ್ಬರ ಸಹಕಾರದಲ್ಲಿ ಅದು ಸಮೃದ್ಧತೆ ಪಡೆದಿದೆ. ಪ್ರತಿ ಮನೆಗೆ ಸಂಬಂಧಿಸಿದ ಬೆಟ್ಟ ಪ್ರದೇಶದಲ್ಲಿ ವಿವಿಧ ಜಾತಿಗಳ ಗಿಡಗಳ ನಾಟಿ 20 ವರ್ಷಗಳಿಂದ ಸಾಗಿದೆ. ಅರಣ್ಯ ಇಲಾಖೆ ಸಹಕಾರದಲ್ಲಿ ಇಲ್ಲಿ ನಡೆಯುವ ಕಾರ್ಯಚಟುವಟಿಕೆ ರಾಜ್ಯದ ಗಮನ ಸೆಳೆದಿದೆ. ದಶಕಗಳ ಹಿಂದೆ ಹುಲ್ಲಿಗೆ ಉರುವಲಿಗೆ ಸೀಮಿತವಾಗಿದ್ದ ಕಳವೆಯ ಬೆಟ್ಟಗಳು ಈಗ ವೈವಿಧ್ಯತೆಯ ಹಸಿರು ಹೊದ್ದು ಗಮನ ಸೆಳೆಯುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT