ಗುರುವಾರ , ಜೂನ್ 30, 2022
27 °C

ಬೀದಿಯಲ್ಲಿ ಅಂಬೇಡ್ಕರ್‌, ಮನೆಯಲ್ಲಿ ಮನುವಾದ: ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಬೀದಿಯಲ್ಲಿ ಅಂಬೇಡ್ಕರ್‌ ವಾದ, ಮನೆಯಲ್ಲಿ ಮನುವಾದದ ನಾಟಕ ಆಡುತ್ತಿರುವುದರಿಂದ ಪರಿಶಿಷ್ಟರು ಬೀದಿಯಲ್ಲಿದ್ದಾರೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಶಾಖಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ವಿಜಯನಗರ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ ಹಾಗೂ ಅಂಬೇಡ್ಕರ್‌ 131ನೇ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಪರಿಶಿಷ್ಟರ ಬದುಕಿನ ಭಾಗವಾಗಬೇಕು. ಭಾಷಣದ ಅಂಬೇಡ್ಕರ್‌ ಅಲ್ಲ. ಐದು ಸಾವಿರ ಪರಿಶಿಷ್ಟರ ಹೆಣ್ಣು ಮಕ್ಕಳು ದೇವದಾಸಿಗಳಾಗಿದ್ದಾರೆ. ಪ್ರತಿ ಆರು ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ. ಪರಿಶಿಷ್ಟರು ಇನ್ನೂ ಬೀದಿಯಲ್ಲಿ ಕುಣಿತ, ಮದ್ಯ ಸೇವನೆಯಿಂದ ಹೊರಬಂದಿಲ್ಲ. ಪರಿಶಿಷ್ಟರು ಎಚ್ಚೆತ್ತುಕೊಂಡು ಜಾಗೃತ ಸಮಾಜವಾಗಬೇಕು ಎಂದು ಕಿವಿಮಾತು ಹೇಳಿದರು.

ಮತ ಸ್ವಂತ ಮಕ್ಕಳಿದ್ದಂತೆ. ಅದನ್ನು ಮಾರಾಟ ಮಾಡಿ ಜೈಭೀಮ್‌ ಎಂದರೆ ಅಂಬೇಡ್ಕರ್‌ ಅವರಿಗೆ ಮಾಡುವ ದೊಡ್ಡ ಅಪಮಾನ. ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದಡಿ ಕೆಲಸ ಮಾಡುವವರನ್ನು ನಾವು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಪಿಎಚ್‌.ಡಿ, ವೈದ್ಯಕೀಯ, ಎಂಜಿನಿಯರ್‌ ಓದುತ್ತಿರುವ ಪರಿಶಿಷ್ಟರ ಮಕ್ಕಳಿಗೆ ಸರ್ಕಾರ ಶಿಷ್ಯ ವೇತನ ನೀಡಿಲ್ಲ. ಎಸ್ಸಿ/ಎಸ್ಟಿ ಅನುದಾನ ಕಡಿತಗೊಳಿಸಲಾಗಿದೆ. ಪರಿಶಿಷ್ಟರ ಮಕ್ಕಳು ಶಿಕ್ಷಣ ಪಡೆದರೆ ಮುಖ್ಯವಾಹಿನಿಗೆ ಬರುತ್ತಾರೆ ಎಂಬ ಭಯ ಕಾಡುತ್ತಿದೆ. ಜಾತಿ, ಧರ್ಮ, ವರ್ಣದ ಹೆಸರಿನಲ್ಲಿ ದೇಶ ಛಿದ್ರ ಮಾಡಲಾಗುತ್ತಿದೆ. ಗಂಟೆ ಹೊಡೆಯುವವರು ಪುರೋಹಿತರಲ್ಲ, ಬೀದಿ ಬದಿ ಕಸ ಹೊಡೆಯುವವರು ಪೌರ ಕಾರ್ಮಿಕರು ಪುರೋಹಿತರು. ಅಸ್ಪೃಶ್ಯತೆ ಜೀವಂತವಾಗಿರುವ ಭಾರತ ವಿಶ್ವಗುರು ಆಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಇಂದು ದೇಶದಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಕೆಲಸಗಳು ನಡೆಯುತ್ತಿವೆ. ಅಪನಂಬಿಕೆಯಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮ ಆಚರಿಸುವ ಹಕ್ಕು ಸಂವಿಧಾನ ನೀಡಿದೆ. ಆದರೆ, ಕೆಲವರು ಹೆಚ್ಚುವರಿ ಸಾಂವಿಧಾನಿಕ ಹಕ್ಕು ಪಡೆದುಕೊಂಡವರಂತೆ ಎಲ್ಲರದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಂತಹವರನ್ನು ಸರ್ಕಾರ ನಿಗ್ರಹಿಸಬೇಕೇ ಹೊರತು ಅವರ ಮಾತಿಗೆ ಕಿವಿಗೊಟ್ಟು ಬೆಳೆಸುವುದು ಸರಿಯಲ್ಲ ಎಂದರು.

ಇನ್ನೊಬ್ಬ ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ, ‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಪರಿಶಿಷ್ಟರನ್ನು ಮೀಸಲಾತಿಯಿಂದ ವಂಚಿಸುವ ಬಹುದೊಡ್ಡ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ‘ದಲಿತರ ಬದುಕು–ಮೆಲಕು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಾಸಕರಾದ ಎಲ್‌.ಬಿ.ಪಿ. ಭೀಮ ನಾಯ್ಕ, ಜೆ.ಎನ್‌. ಗಣೇಶ್‌, ಪಿ.ಟಿ. ಪರಮೇಶ್ವರ ನಾಯ್ಕ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಮುಖಂಡರಾದ ವೆಂಕಟರಾವ ಘೋರ್ಪಡೆ, ಮೊಹಮ್ಮದ್ ಇಮಾಮ್‌ ನಿಯಾಜಿ, ಎ. ಮಾನಯ್ಯ, ರಾಜಶೇಖರ್‌ ಹಿಟ್ನಾಳ್‌, ಸಿದ್ದಾರ್ಥ ಸಿಂಗ್‌, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಟಿ. ವಾಸುದೇವ, ಪ್ರಧಾನ ಕಾರ್ಯದರ್ಶಿ ಸಿ. ಸೋಮಶೇಖರ್‌ ಬಣ್ಣದಮನೆ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು