ಹೊಸಪೇಟೆ (ವಿಜಯನಗರ): ನಗರಸಭೆ 7ನೇ ವಾರ್ಡ್‌ನ ಅನಂತಶಯನಗುಡಿಯಲ್ಲಿ ಗುಂಡಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಸೋಮವಾರ ನಗರಸಭೆ ಸದಸ್ಯರು ಕಚೇರಿ ಮುಂಭಾಗ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಪಕ್ಷಾತೀತವಾಗಿ ಧರಣಿ ನಡೆಸಿದ ಸದಸ್ಯರು ಪೌರಾಯುಕ್ತ ಚಂದ್ರಪ್ಪ ಅವರ ಅಮಾನತಿಗೆ ಒಕ್ಕೊರಲ ಒತ್ತಾಯ ಮಾಡಿದರು.
ಸದ್ಯ ನಗರಸಭೆಯಲ್ಲಿ ಅಧ್ಯಕ್ಷರಿಲ್ಲ, ಜಿಲ್ಲಾಧಿಕಾರಿ ಅವರೇ ಆಡಳಿತಾಧಿಕಾರಿ ಆಗಿದ್ದು, ಅವರ ಅಧಿಕಾರ ಅವಧಿಯಲ್ಲಿ ಮಗು ಸತ್ತಿದೆ, ಸ್ವತಃ ಡಿ.ಸಿ ಅವರೇ ಸ್ಥಳಕ್ಕೆ ಬರಬೇಕು, ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು.
ಬೆಳಿಗ್ಗೆ 10 ಗಂಟೆಗೆ ಆರಂಭವಾದ ಧರಣಿ ಸ್ಥಳಕ್ಕೆ ಮಧ್ಯಾಹ್ನ 1 ಗಂಟೆಯಾದರೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಬರಲಿಲ್ಲ, ಪೌರಾಯುಕ್ತರು, ಶಾಸಕರು ಸಹ ಬರಲಿಲ್ಲ. ಹೀಗಾಗಿ ಸಂಜೆಯವರೆಗೂ ಧರಣಿ ಮುಂದುವರಿಸಲು ಸದಸ್ಯರು ನಿರ್ಧರಿಸಿದರು.