ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ನಗರಕ್ಕೆ ₹81 ಕೋಟಿ ಬಜೆಟ್‌

Published 28 ಫೆಬ್ರುವರಿ 2024, 15:43 IST
Last Updated 28 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ನಗರಸಭೆಯ 2024–25ನೇ ಸಾಲಿಗೆ ₹ 81 ಕೋಟಿ ಗಾತ್ರದ ಆಯವ್ಯಯವನ್ನು ಬುಧವಾರ ಮಂಡಿಸಲಾಗಿದ್ದು, ವಿವಿಧ ವೆಚ್ಚಗಳನ್ನು ಕಳೆದ ಬಳಿಕ ₹2.35 ಕೋಟಿ ಉಳಿತಾಯ ಅಂದಾಜಿಸಲಾಗಿದೆ.

ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್‌ ಕುಮಾರ್ ಬಜೆಟ್ ಮಂಡಿಸಿದರು. ಅಧ್ಯಕ್ಷೆ ಎ.ಲತಾ, ಆಯುಕ್ತ ಎರಗುಡಿ ಶಿವಕುಮಾರ್‌ ಇದ್ದರು.

‘15ನೇ ಹಣಕಾಸು ಯೋಜನೆಯಡಿ ₹12.13 ಕೋಟಿ ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಾಗಿದೆ. ರಾಜ್ಯ ಹಣಕಾಸು ಆಯೋಗದಿಂದ ₹4.36 ಕೋಟಿ ಹಂಚಿಕೆಯಾಗಿದೆ. ಸಗಟು ನೀರಿನ ವ್ಯವಸ್ಥೆ ಸುಧಾರಣೆಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ–4 ಯೋಜನೆಯಲ್ಲಿ ₹20.73 ಕೋಟಿ ಅನುದಾನದ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ’ ಎಂದು ಬಜೆಟ್ ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದಿಂದ ಎಸ್ಎಫ್‌ಸಿ ಅಡಿಯಲ್ಲಿ ನೌಕರರ ವೇತನ ಪಾವತಿಗಾಗಿ ₹11.63 ಕೋಟಿ, ಬೀದಿದೀಪಕ್ಕೆ ₹6.26 ಕೋಟಿ, ನೀರು ಸ್ಥಾವರಗಳ ವಿದ್ಯುತ್ ಶುಲ್ಕ ರೂಪದಲ್ಲಿ ₹9.06 ಕೋಟಿ ಅನುದಾನ ಹಂಚಿಕೆಯಾಗಿದೆ.

ನಗರಸಭೆಯ ಆಂತರಿಕ ಸಂಪನ್ಮೂಲ ಕ್ರೋಡೀಕರಣ ಅನಿವಾರ್ಯ ವ್ಯಾಪಾರ ಮಳಿಗೆಗಳಿಂದ ಶುಲ್ಕ ಸಂಗ್ರಹಕ್ಕೆ ವಿಶೇಷ ಕಾರ್ಯಪಡೆ ರಚಿಸಬೇಕು
ಅಬ್ದುಲ್ ಖದೀರ್‌, ನಗರಸಭೆ ಸದಸ್ಯ

ಆದಾಯ: ಆಸ್ತಿ ತೆರಿಗೆ (ನಿವ್ವಳ, ಕರಗಳನ್ನು ಹೊರತುಪಡಿಸಿ) ₹ 11 ಕೋಟಿ ಹಾಗೂ ಖಾತೆ ಬದಲಾವಣೆಯಿಂದ ₹2.60 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ವ್ಯಾಪಾರ ಪರವಾನಗಿ ಶುಲ್ಕ ₹80 ಲಕ್ಷ, ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ₹90 ಲಕ್ಷ, ನೀರು ಪೂರೈಕೆ ಶುಲ್ಕ ₹1.72 ಕೋಟಿ, ಒಳಚರಂಡಿ ಶುಲ್ಕ ₹2.80 ಕೋಟಿ, ಘನ ತ್ಯಾಜ್ಯ ನಿರ್ವಹಣೆ ಕರ ₹3.20 ಕೋಟಿ ಆದಾಯವನ್ನು ಅಂದಾಜಿಸಲಾಗಿದೆ. 2023–24ನೇ ಸಾಲಿನಲ್ಲಿ ವ್ಯಾಪಾರ ಪರವಾನಗಿ ಶುಲ್ಕ ₹13.90 ಲಕ್ಷ, ಮಳಿಗೆಗಳಿಂದ ಬಾಡಿಗೆ ₹15.56 ಲಕ್ಷ, ನೀರಿನ ಶುಲ್ಕ ₹ 51.86 ಲಕ್ಷ ಮಾತ್ರ ಸಂಗ್ರಹವಾಗಿದ್ದನ್ನು ಬಜೆಟ್‌ನಲ್ಲಿ ತೋರಿಸಲಾಗಿದೆ.

110 ಪೌರಕಾರ್ಮಿಕರ ನಿಯೋಜನೆ: ‘ನಗರದಲ್ಲಿ ಸ್ವಚ್ಛತೆ ಕಾರ್ಯಗಳಿಗೆ ಪೌರ ಕಾರ್ಮಿಕರ ಕೊರತೆ ಇದೆ. ಈಗ ಇರುವ 104 ಕಾರ್ಮಿಕರ ಜತೆಗೆ ಇನ್ನೂ 110 ಮಂದಿಯನ್ನು ನೇಮಿಸುವ ಅಗತ್ಯ ಇದೆ ಎಂದು ಆಯುಕ್ತ ಎರಗುಡಿ ಶಿವಕುಮಾರ್ ತಿಳಿಸಿದರು. ಎಲ್ಲ ಸದಸ್ಯರು ಇದಕ್ಕೆ ಧ್ವನಿಮತದ ಸಹಮತ ವ್ಯಕ್ತಪಡಿಸಿದರು.

ಫಾರಂ–3 ಕೊಡುವ ವಿಚಾರದಲ್ಲಿ ಏನೇನು ಬೇಕು ಎಂಬುದನ್ನು ಸೂಚಿಸುವ ಪಟ್ಟಿಯನ್ನು ಸಿದ್ಧಪಡಿಸಿ ಗ್ರಾಹಕರಿಗೆ ಕಾಣುವಂತೆ ತಕ್ಷಣ ಅಳವಡಿಸಲು ಆಯುಕ್ತರು ಸಮ್ಮತಿ ಸೂಚಿಸಿದರು.

ಅಂಕಿ ಅಂಶ

₹43.64 ಕೋಟಿ  ಸರ್ಕಾರದ  ಅನುದಾನ

₹29.04 ಕೋಟಿ ನಗರಸಬೆ ನಿಧಿ

₹9.07 ಕೋಟಿ ವಿವಿಧ ಇಲಾಖೆಗಳು ಪಾವತಿಸಬೇಕಾದ ಅಸಾಮಾನ್ಯ ಆದಾಯ

ಬಜೆಟ್ ಮುಖ್ಯಾಂಶಗಳು

6500 ವಸತಿ ರಹಿತರಿಗಾಗಿ ಮತ್ತು ನಿವೇಶನ ರಹಿತರಿಗಾಗಿ ಕೆಎಂಇಆರ್‌ಎಲ್‌ ಯೋಜನೆಯಡಿಯಲ್ಲಿ ₹ 150 ಕೋಟಿ ಪ್ರಸ್ತಾವ ಸಲ್ಲಿಸಲು ಕ್ರಮ 3 ಬೀದಿಬದಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ಎಲ್ಲ 104 ಕಾಯಂ ಪೌರಕಾರ್ಮಿಕರಿಗೆ ಜಂಬುನಾಥ ಹಳ್ಳಿಯ 3 ಎಕರೆ ಪ್ರದೇಶದಲ್ಲಿ ಪೌರಕಾರ್ಮಿಕ ಗೃಹ ನಿರ್ಮಾಣಕ್ಕೆ ಕ್ರಮ ಕಂದಾಯ ಇಲಾಖೆ ಯೋಜನೆಯಡಿ ‘ಏಕ ಗವಾಕ್ಷಿ’ ಮಾದರಿಯಲ್ಲಿ ಫಾರಂ–3 ವಿತರಣೆ ನಗರದ ಪ್ರಮುಖ ಉದ್ಯಾನಗಳನ್ನು ಖಾಸಗಿ ನಿರ್ವಹಣೆಗೆ ವಹಿಸಲು ಕ್ರಮ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು 50 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಪ್ರಮುಖ ರಸ್ತೆಗಳಲ್ಲಿ ‘ಗ್ರೀನ್ ಸ್ಕ್ವಾಡ್‌’ ಮಾದರಿ ತನಿಖಾ ತಂಡ ರಚನೆ

ಎರಡೇ ತಿಂಗಳಲ್ಲಿ ಮನಗೆದ್ದ ಆಯುಕ್ತ

ಎರಗುಡಿ ಶಿವಕುಮಾರ್ ಅವರು ನಗರಸಭೆ ಆಯುಕ್ತರಾಗಿ ಎರಡು ತಿಂಗಳಷ್ಟೇ ಕೆಲಸ ಮಾಡಿದ್ದು ಅವರ ಸ್ಥಾನಕ್ಕೆ ಇದೀಗ ಇನ್ನೊಬ್ಬರ ನಿಯೋಜನೆ ಆಗಿದೆ. ಬಹುತೇಕ ಸದಸ್ಯರು ಶಿವಕುಮಾರ್ ಅವರೇ ಮುಂದುವರಿಯಬೇಕು ಎಂದು ಪಟ್ಟು ಹಿಡಿದರು. ‘ಸಿಬ್ಬಂದಿಯ ಸಹಕಾರದಿಂದ ನಾನು ಕೆಲಸ ಮಾಡುವುದು ಸಾಧ್ಯವಾಯಿತು’ ಎಂದು ಆಯುಕ್ತರು ಹೇಳಿದಾಗ ಮನೆಯ ಯಜಮಾನ ಸರಿ ಇದ್ದರೆ ಇತರರೂ ಸರಿಯಾಗಿಯೇ ಇರುತ್ತಾರೆ ಎಂದು ಸದಸ್ಯರು ಹೇಳಿದರು ಹಾಗೂ ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT