ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವದ ನೆನಪಲ್ಲಾದರೂ ಟ್ಯಾಂಕ್‌ ನಿರ್ಮಿಸಿಕೊಡಿ: ಸ್ಥಳೀಯ ನಿವಾಸಿಗಳ ಮೊರೆ

Published 29 ಜನವರಿ 2024, 5:40 IST
Last Updated 29 ಜನವರಿ 2024, 5:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರದ ಗತ ವೈಭವವನ್ನು ನೆನಪು ಮಾಡಿಕೊಳ್ಳುವ ಮುಖ್ಯ ಉದ್ದೇಶದೊಂದಿಗೆ ಆಚರಿಸುವ ಹಂಪಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಹಂಪಿ ಗ್ರಾಮ ಪಂಚಾಯಿತಿ ಮಾತ್ರ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆಗಾಗಿ ಹಲವು ವರ್ಷಗಳಿಂದ ಕಾಯುತ್ತಲೇ ಇದೆ.

ಹಂಪಿ ಉತ್ಸವಕ್ಕೆ ಬರುವ ಮಂದಿ ಉತ್ಸವಕ್ಕೆ ಮಾಡಲಾದ ವ್ಯವಸ್ಥೆ, ರಂಗಸಜ್ಜಿಕೆ, ಕಲಾವಿದರ ಕೂಟ, ಮನರಂಜನೆಯ ವೈವಿಧ್ಯಗಳನ್ನು ಕಂಡು ಪುಳಕಿತರಾಗಿ ಮನೆಗೆ ತೆರಳುತ್ತಾರೆ. ಆದರೆ ವರ್ಷವಿಡೀ ಇಲ್ಲೇ ಇರುವ ಸ್ಥಳೀಯ ನಿವಾಸಿಗಳಿಗೆ ಮಾತ್ರ ಉತ್ಸವ ಮನರಂಜನೆಗಷ್ಟೇ ಸೀಮಿತವಾಗಿ ಮನಃಶ್ಯಾಂತಿಗೆ ದಾರಿ ಮಾಡಿಕೊಡುವ ಸ್ಥಳೀಯ ಜನರ ಜೀವನ ಸುಧಾರಿಸುವ ಆಚರಣೆಯಾಗಿ ಪರಿವರ್ತನೆಗೊಂಡಿಲ್ಲ ಎಂಬ ಬೇಸರ ಇದ್ದೇ ಇದೆ.

‘ಹಂಪಿ ಜಗತ್ತಿನ ಪ್ರಮುಖ ಪ್ರವಾಸಿ ತಾಣ. ಇಂತಹ ತಾಣವನ್ನು ಹೊಂದಿರುವ ಹಂಪಿ ಗ್ರಾಮ ಪಂಚಾಯಿತಿಗೆ ಬಹಳ ದೊಡ್ಡ ಹೆಮ್ಮೆಯೂ ಇದೆ. ಆದರೆ ಇಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕನಿಷ್ಠ 1.50 ಲಕ್ಷ ಲೀಟರ್ ನೀರು ಸಾಮರ್ಥ್ಯದ ಬೃಹತ್ ಟ್ಯಾಂಕ್‌ ನಿರ್ಮಿಸಿದರೆ ಮಾತ್ರ ಹಂಪಿ ಪರಿಸರದ ಮತ್ತು ಸ್ಥಳೀಯ ಜನರ ನೀರಿನ ಸಮಸ್ಯೆ ಬಗೆಹರಿಸಬಹುದಷ್ಟೇ. ಹಲವಾರು ವರ್ಷಗಳಿಂದ ಈ ಬೇಡಿಕೆ ಮುಂದಿಡುತ್ತಿದ್ದರೂ, ಇದುವರೆಗೂ ಭರವಸೆ ಈಡೇರಿಲ್ಲ’ ಎಂದು ಹೆಸರು ಹೇಳಲು ಬಯಸದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ‘ಪ‍್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಕಡೆಗಳಲ್ಲಿ ಸ್ಮಾರಕಗಳು ಇರುವ ಕಾರಣ ಹೆಜ್ಜೆ ಹೆಜ್ಜೆಗೆ ಇಲ್ಲಿ ನಿರ್ಬಂಧ ಇದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ), ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳೆಂಬ ಹಲವು ಇಲಾಖೆಗಳ ಹಲವು ನಿರ್ಬಂಧಗಳು, ನಿಯಮಗಳ ನಡುವೆ ಗ್ರಾಮ ಪಂಚಾಯಿತಿ ತನ್ನ ಕೆಲವ ಮಾಡಬೇಕಾಗುತ್ತದೆ. ತುಂಗಭದ್ರಾ ನದಿಯಲ್ಲಿ ನೀರಿದೆ, ನೀರೆತ್ತುವ ವ್ಯವಸ್ಥೆಯೂ ಇದೆ. ಅದನ್ನು ಶುದ್ಧೀಕರಿಸುವ ವ್ಯವಸ್ಥೆ ಸಹ ಸಮರ್ಪಕವಾಗಿದೆ. ಆದರೆ ನೀರು ಸಂಗ್ರಹಿಸಿ ಇಡುವ ದೊಡ್ಡ ಟ್ಯಾಂಕ್‌ನ ಕೊರತೆ ಗ್ರಾಮ ಪಂಚಾಯಿತಿಯನ್ನು ಕಾಡುತ್ತಿದೆ’ ಎಂದು ಅವರು ವಿವರಿಸಿದರು.

‘ಪಂಚಾಯಿತಿಯ ಪ್ರಮುಖ ಆದಾಯ ಮೂಲವೆಂದರೆ ವಾಹನ ನಿಲುಗಡೆ ಶುಲ್ಕವಾಗಿತ್ತು. ಸದ್ಯ ಮಾತಂಗ ಪರ್ವತ ಸಮೀಪದ ಮೈದಾನದಲ್ಲಿ ವಾಹನ ನಿಲುಗಡೆ ಶುಲ್ಕವನ್ನು ಮುಜರಾಯಿ ಇಲಾಖೆಯೇ ಪಡೆಯುತ್ತಿದೆ. ಶುಲ್ಕ ರೂಪದಲ್ಲಿ ₹10 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹವಾಗುತ್ತದೆ. ಇದನ್ನು ಮತ್ತೆ ಗ್ರಾಮ ಪಂಚಾಯಿತಿಗೆ ಒದಗಿಸಿದರೆ ಒಂದಿಷ್ಟು ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತದೆ’ ಎಂದು ಅವರು ಕೇಳಿಕೊಂಡರು

ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿರೂಪಾಕ್ಷ ದೇವಸ್ಥಾನ ಸಹಿತ ಹಲವು ಸ್ಮಾರಕ ಪ್ರದೇಶಗಳು, ರಾಣಿಸ್ನಾನಗೃಹ, ಜನತಾ ಪ್ಲಾಟ್‌, ಪ್ರಕಾಶ ನಗರ, ಗಾಯತ್ರಿ ಪೀಠ, ಕಡ್ಡಿರಾಂಪುರ, ಹೊಸಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಒಳಪಡುತ್ತವೆ. ಈ ಭಾಗದ ಜನರನ್ನು ಮಾತನಾಡಿಸಿದರೂ ವ್ಯಕ್ತವಾಗುವ ಅಭಿಪ್ರಾಯ ಬಹುತೇಕ ಒಂದೇ. ನಮಗೆ ನೀರು ಕೊಡಿ, ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ.

ಪ್ರಕಾಶ್ ನಗರದಲ್ಲಿ 90 ವಿದ್ಯಾರ್ಥಿಗಳು ಓದುತ್ತಿರುವ ಶಾಲೆ ಇದ್ದು, ಅಲ್ಲಿಗೆ ನೀರಿನ ಕೊರತೆ ಬಹುವಾಗಿ ಕಾಡುತ್ತಿದೆ. ಬಿಸಿಯೂಟ ತಯಾರಿಸಲು ಸಹ ನೀರು ಸಿಗುತ್ತಿಲ್ಲ ಎಂದು ಶಾಲೆಯ ಶಿಕ್ಷಕರು ಹಾಗೂ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಹಂಪಿ ಉತ್ಸವ ಬಂದಿದೆ. ಹಂಪಿಗೆ ಬೀದಿದೀಪ, ಕುಡಿಯುವ ನೀರು, ನೈರ್ಮಲ್ಯದಂತಹ ಅಗತ್ಯದ ಸೌಲಭ್ಯ ಕಲ್ಪಿಸುವ ಹೊಣೆ ಹೊತ್ತಿರುವ ಗ್ರಾಮ ಪಂಚಾಯಿತಿಯ ಮೊರೆಯನ್ನು ದೊರೆ ಕೇಳಿಸಿಕೊಳ್ಳಲಿ ಎಂಬುದು ಸ್ಥಳೀಯರ ಒತ್ತಾಯ.

ಹಂಪಿಯಲ್ಲಿ ಉತ್ಸವಕ್ಕೆ ಭರ್ಜರಿ ತಯಾರಿ ಆದರೆ ಮೂಲಸಮಸ್ಯೆಗೆ ಮಾತ್ರ ಪರಿಹಾರ ಇಲ್ಲ
ಹಂಪಿಯಲ್ಲಿ ಉತ್ಸವಕ್ಕೆ ಭರ್ಜರಿ ತಯಾರಿ ಆದರೆ ಮೂಲಸಮಸ್ಯೆಗೆ ಮಾತ್ರ ಪರಿಹಾರ ಇಲ್ಲ
ಜನರಿಗೆ ಪ್ರವಾಸಿಗರಿಗೆ ಸೂಕ್ತ ಕುಡಿಯುವ ನೀರು ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಹಲವಾರು ನಿರ್ಬಂಧಗಳಿಂದಾಗಿ ಕೈಕಟ್ಟಿದ ಸ್ಥಿತಿ ಇದ್ದು ಅದನ್ನು ಸ್ವಲ್ಪ ಸಡಿಲಿಸಬೇಕಿದೆ
ಕೆ.ರಾಮು ಕಲಾವಿದ ಕಡ್ಡಿರಾಂಪುರ
ಹಂಪಿಯನ್ನು ಸ್ಥಳೀಯರ ಜತೆಗೆ ಪ್ರವಾಸಿಗರ ದೃಷ್ಟಿಯಿಂದಲೂ ನೋಡಬೇಕು9. ಸಣ್ಣ ಸಣ್ಣ ಹೋಟೆಲ್‌ಗಳು ಇನ್ನಷ್ಟು ಶೌಚಾಲಯ ನಿರ್ಮಾಣ ಆಗಬೇಕು.
ಎಂ.ನಾಗರಾಜ್‌ ಪ್ರವಾಸಿ ಮಾರ್ಗದರ್ಶಿ ಕಡ್ಡಿರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT