ಹರಪನಹಳ್ಳಿ (ವಿಜಯನಗರ ಜಿಲ್ಲೆ) : ರೋಗ, ರುಜಿನಗಳು ಬಾರದಿರಲಿ ಎಂದು ಪ್ರಾರ್ಥಿಸಿ ಸಾಂಪ್ರದಾಯಿಕ ಬೇವು ಮತ್ತು ಹೋಳಿಗೆ ಎಡೆ ಕಳಿಸುವ ಅಜ್ಜಮ್ಮನ ಹಬ್ಬವನ್ನು ಸಡಗರ, ಸಂಭ್ರಮದಿಂದ ವಾಲ್ಮೀಕಿ ನಗರದಲ್ಲಿ ಆಚರಿಸಲಾಯಿತು.
ಚಿಕ್ಕೇರಿಗೇರಿ, ಕೊರಮರಗೇರಿ, ಆಂಜನೇಯ ಬಡಾವಣೆ, ಭಾರತಿ ನಗರ, ವಾಲ್ಮೀಕಿ ನಗರ, ಅಂಬೇಡ್ಕರ ನಗರ ಸೇರಿದಂತೆ ವಿವಿಧ ಬಡಾವಣೆಯ ನಿವಾಸಿಗಳು ಹಸನು ಮಾಡುವ ಹೊಸ ಮೊರದಲ್ಲಿ ಬೇವಿನ ಸೊಪ್ಪು, ಹೋಳಿಗೆ, ಊದುಬತ್ತಿಯ ಎಡೆಯನ್ನು ತಯಾರಿಸಿಕೊಂಡು ಬಂದು ವಾಲ್ಮೀಕಿ ನಗರದ ಚೌತಿಮನೆ ಕಟ್ಟೆ ಆವರಣದಲ್ಲಿ ಇರಿಸಿದರು.
ಸಾವಿರಾರು ಮನೆಗಳಿಂದ ತಂದಿದ್ದ ಎಡೆಯನ್ನು ರಸ್ತೆಯ ಮೇಲಿಟ್ಟು, ಪೂಜೆ ಸಲ್ಲಿಸಿದ ಬಳಿಕ ಎಲ್ಲರೂ ಸಹ ಅವರವರ ಎಡೆಯನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ತೆರಳಿ, ಊರಾಚೆ ಇರುವ ಮರದ ಬಳಿಯಿಟ್ಟು ಪೂಜೆ ಸಲ್ಲಿಸಿ ಹಿಂತಿರುಗಿದರು.