ಮಂಗಳವಾರ, ಮಾರ್ಚ್ 28, 2023
22 °C

ಆತ್ಮವಿಶ್ವಾಸವೇ ಗೆಲುವಿಗೆ ಸೋಪಾನ; ವಿದ್ಯಾರ್ಥಿಗಳ ಪ್ರಶ್ನೆಗೆ ನಟ ರಮೇಶ ಅರವಿಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ಶ್ರೀ ಗುರು ಪಿಯು ಕಾಲೇಜಿನಲ್ಲಿ ಮಂಗಳವಾರ ನಟ ರಮೇಶ ಅರವಿಂದ್‌ ಅವರು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕೂಡ ನಡೆಸಿದರು. ವಿದ್ಯಾರ್ಥಿಗಳು ಕೇಳಿದ ಪ್ರತಿಯೊಂದು ಪ್ರಶ್ನೆಗೆ ಸಂಯಮ, ನಗುಮುಖದಿಂದಲೇ ಉತ್ತರಿಸಿದರು. ಆ ಪ್ರಶ್ನೋತ್ತರದ ವಿವರ ಇಂತಿದೆ.

ಪ್ರಶ್ನೆ (ವಿದ್ಯಾರ್ಥಿನಿ ಭಾವನಾ): ಭಾರತದ ಅಭಿವೃದ್ಧಿ ಬಗ್ಗೆ ನಿಮಗೇನು ಅನಿಸುತ್ತದೆ?

ಉತ್ತರ: ಭಾರತ ಅಂದರೆ ನಾವೆಲ್ಲರೂ. ನಾವಿರುವ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಉತ್ತಮ ಕೆಲಸ ಮಾಡಬೇಕು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಭಾರತ ಅಭಿವೃದ್ಧಿ ಹೊಂದುತ್ತದೆ.

ಪ್ರಶ್ನೆ (ವಿದ್ಯಾರ್ಥಿ ಸಂದೀಪ): ನಿಮ್ಮಂತಹವರು ಮಾತನಾಡಿದ ನಂತರ ಪ್ರೇರಣೆ ಸಿಗುತ್ತದೆ. ಉತ್ಸಾಹ ಬರುತ್ತದೆ. ನೀವು ಹೋದ ನಂತರ ಇರುವುದಿಲ್ಲ.

ಉತ್ತರ: ಎಷ್ಟು ಜನಕ್ಕೆ ಈ ಸಮಸ್ಯೆ ಇದೆ ಎಂದು ಕೇಳಿದಾಗ ಅಲ್ಲಿದ್ದವರೆಲ್ಲರೂ ಕೈ ಎತ್ತಿದರು. ನಸು ನಕ್ಕಿದ ರಮೇಶ, ಪ್ರೇರಣೆ ಎನ್ನುವುದು ನಿತ್ಯ ಸ್ನಾನ ಮಾಡಿದಂತೆ. ಪ್ರತಿಯೊಬ್ಬರೂ ಪ್ರೇರಣೆಯ ಸ್ನಾನ ಮಾಡಬೇಕು. ನಾವಿರುವ ಕ್ಷೇತ್ರದಲ್ಲಿ ಕೌಶಲ ಬೆಳೆಸಿಕೊಳ್ಳಬೇಕು. ಸವಾಲುಗಳು ಎದುರಾದಾಗ ಭಯ ಪಡಬಾರದು. ಆತ್ಮವಿಶ್ವಾಸ ಎಲ್ಲಕ್ಕಿಂತ ಬಹಳ ಮುಖ್ಯವಾದುದು. ಅದೇ ಗೆಲುವಿನ ಸೋಪಾನ.

ಪ್ರಶ್ನೆ (ವಿದ್ಯಾರ್ಥಿನಿ ನಂದಿನಿ): ಯಾವ ಕೋರ್ಸ್‌ ಆಯ್ಕೆ ಮಾಡಬೇಕು ಎನ್ನುವ ದೊಡ್ಡ ಗೊಂದಲವಿದೆ. ಅದಕ್ಕೇನು ಹೇಳುವಿರಿ?

ಉತ್ತರ: ಅಪ್ಪ, ಅಮ್ಮ, ಒಳಿತು ಬಯಸುವವರು ಅವರದೇ ಆದ ಸಲಹೆ ಕೊಡುತ್ತಾರೆ. ಆದರೆ, ಯಾವ ಕೋರ್ಸ್‌ ಆಯ್ಕೆ ಮಾಡಬೇಕು ಎನ್ನುವ ಅಂತಿಮ ನಿರ್ಧಾರ ನಮ್ಮದಾಗಿರಬೇಕು. ಆಸಕ್ತಿಯ ವಿಷಯ ಆಯ್ಕೆ ಮಾಡಬೇಕು. ನಮಗೆ ಅತಿ ಆಸಕ್ತಿಯಿರುವ ವಿಷಯ ಆಯ್ಕೆ ಮಾಡಿಕೊಂಡು, ಅದರಲ್ಲಿ ಮುಂದುವರೆಯುವುದು ಒಳಿತು.

ಪ್ರಶ್ನೆ (ವಿದ್ಯಾರ್ಥಿನಿ ವಾರಿಧಿ): ಎಷ್ಟೇ ಓದಿದರೂ ಮರುದಿನ ನೆನಪಿನಲ್ಲಿ ಇರುವುದಿಲ್ಲ. ಓದಿದ್ದು ನೆನಪಿನಲ್ಲಿ ಇರಬೇಕಾದರೆ ಏನು ಮಾಡಬೇಕು?

ಉತ್ತರ: ನಾವು ಯಾವುದಾದರೂ ಆಟವಾಡುತ್ತ ಇದ್ದರೆ ಎಷ್ಟು ಸಮಯ ಕಳೆದಿದ್ದೇವೆ ಎನ್ನುವುದು ಗೊತ್ತಾಗುವುದೇ ಇಲ್ಲ. ಏಕೆಂದರೆ ನಮಗೆ ಅದರಲ್ಲಿ ಆಸಕ್ತಿ ಇರುತ್ತದೆ. ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇಷ್ಟಪಟ್ಟು ಓದಬೇಕು. ಆಗ ಎಲ್ಲವೂ ನೆನಪಿನಲ್ಲಿ ಇರುತ್ತದೆ.

ಪ್ರಶ್ನೆ (ವಿದ್ಯಾರ್ಥಿನಿ ನತಾಶಾ): ಸಮಯ ನಿರ್ವಹಣೆ ಹೇಗೆ ಮಾಡಬೇಕು?

ಉತ್ತರ: ಯಾವುದಕ್ಕೆ ಎಷ್ಟು ಮಹತ್ವ, ಸಮಯ ಕೊಡಬೇಕು ಎನ್ನುವುದನ್ನು ನಿರ್ಧರಿಸಬೇಕು. ಯಾವುದಾದರೂ ಒಂದು ಕೆಲಸ ಮಾಡುವಾಗ ಬೇರೆ ಕಡೆ ಚಿತ್ತ ಹರಿಯಬಾರದು. ಓದುವ ವಯಸ್ಸಿನಲ್ಲಿ ಓದಿನ ಕಡೆ ಹೆಚ್ಚು ಗಮನ ಹರಿಸಿದರೆ ಉತ್ತಮ.

ಪ್ರಶ್ನೆ: (ವಿದ್ಯಾರ್ಥಿನಿ ದೀಪಿಕಾ): ಖುಷಿಯಾಗಿ ಜೀವನ ನಡೆಸಲು ಏನು ಮಾಡಬೇಕು?

ಉತ್ತರ: ನಾವು ಯೋಚನೆ ಮಾಡುವ ರೀತಿಯಲ್ಲೇ ಖುಷಿಯ ಗುಟ್ಟು ಅಡಗಿದೆ.

ಪ್ರಶ್ನೆ (ವಿದ್ಯಾರ್ಥಿ ಆಲಂ ಬಾಷಾ): ಮನೆ ಕೆಲಸ ಮಾಡ್ಬೇಕಾ ಅಥವಾ ಓದ್ಬೇಕಾ?

ಉತ್ತರ: ಎರಡೂ ಮಾಡಬೇಕು. ಓದು ಬಿಟ್ಟು ಕೆಲಸ ಮಾಡುವಂತೆ ಯಾವ ಪೋಷಕರು ಹೇಳುವುದಿಲ್ಲ. ಓದುವುದರೊಂದಿಗೆ ಸಣ್ಣಪುಟ್ಟ ಕೆಲಸ ಮಾಡಿದರೆ ತಪ್ಪಿಲ್ಲ. ಭವಿಷ್ಯದಲ್ಲಿ ನಾವು ಸ್ವಾವಲಂಬಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು