ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

70ನೇ ಅಖಿಲ ಭಾರತ ಸಹಕಾರ ಸಪ್ತಾಹ: ವಿಭಾಗ ಮಟ್ಟದಲ್ಲಿ ಒಬ್ಬರಿಗಷ್ಟೇ ಪ್ರಶಸ್ತಿ

14ರಿಂದ 20ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹ 8 ಸಹಕಾರಿ ರತ್ನ ಪ್ರಶಸ್ತಿಗೆ 8 ಹೆಸರು ಶಿಫಾರಸು
Published 9 ನವೆಂಬರ್ 2023, 15:27 IST
Last Updated 9 ನವೆಂಬರ್ 2023, 15:27 IST
ಅಕ್ಷರ ಗಾತ್ರ

ಹೊಸಪೇಟೆ : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿರುವ ಎಲ್ಲ ಸಹಕಾರ ಸಂಘಗಳ ಮತ್ತು ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ–2023 ನ. 14ರಿಂದ 20ರವರೆಗೆ ಎರಡೂ ಜಿಲ್ಲೆಗಳ ಆಯ್ದ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಾರಿ ಒಂಬತ್ತು ಮಂದಿ ಸಹಕಾರಿಗಳು ಸಹಕಾರ ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು ಎಂಟು ಜನರ ಹೆಸರನ್ನು ವಿಭಾಗ ಮಟ್ಟಕ್ಕೆ ಕಳುಹಿಸಲಾಗಿದೆ. ವಿಭಾಗ ಮಟ್ಟದಲ್ಲಿ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲು ಈ ಬಾರಿ ಸರ್ಕಾರ ನಿರ್ಧರಿಸಿದೆ ಎಂದು ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು’ ಎಂಬ ಶಿರ್ಷಿಕೆಯ ಅಡಿಯಲ್ಲಿ 7 ದಿನಗಳ ಕಾಲ ವಿಭಿನ್ನ ವಿಷಯ ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

‘ನ. 14ರಂದು ಬೆಳಿಗ್ಗೆ 8.30ಕ್ಕೆ ಅಖಿಲ ಭಾರತ ಸಹಕಾr ಸಪ್ತಾಹದ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಹಕಾr ಸಂಘ ಸಂಸ್ಥೆಗಳಲ್ಲಿಯ ಈಚಿನ ಬೆಳವಣಿಗೆಗಳು ವಿಷಯವಾಗಿ ಹೊಸಪೇಟೆಯಲ್ಲಿ ಗೋಷ್ಠಿ ನಡೆಯಲಿದೆ. 15ರಂದು ಸಾಲೇತರ ಸಹಕಾರ ಸಂಘಗಳ ಪುನಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ ವಿಷಯವಾಗಿ ಹರಪನಹಳ್ಳಿಯಲ್ಲಿ, 16ರಂದು ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ ವಿಷಯವಾಗಿ ಬಳ್ಳಾರಿಯ ಸಂಗನಕಲ್ಲಿನಲ್ಲಿ, 17ರಂದು ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು ವಿಷಯವಾಗಿ ಸಂಡೂರು ತಾಲ್ಲೂಕು ಭುಜಂಗನಗರದಲ್ಲಿ, 18ರಂದು ಸಾರ್ವಜನಿಕ-ಖಾಸಗಿ-ಸಹಭಾಗಿತ್ವವನ್ನು ಬಲಪಡಿಸುವ ವಿಷಯವಾಗಿ ಬಳ್ಳಾರಿಯಲ್ಲಿ, 19ರಂದು ಮಹಿಳೆಯರು, ಯುವಜನರು ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು ವಿಷಯವಾಗಿ ಕಂಪ್ಲಿಯಲ್ಲಿ ಮತ್ತು 20ರಂದು ಸಹಕಾರ ಶಿಕ್ಷಣ ತರಬೇತಿ ಪರಿಷ್ಕರಣೆ ವಿಷಯವಾಗಿ ಕೊಟ್ಟೂರಿನಲ್ಲಿ ಗೋಷ್ಠಿಗಳು ನಡೆಯಲಿವೆ’ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಮತ್ತು ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಹಿರಿಯ ನಿರ್ದೇಶಕರಾದ ಬಿ.ಕೆ. ನಾಗರಾಜ, ಅಯ್ಯಾಳಿ ಶಂಕ್ರಪ್ಪ, ಡಿ.ಎಚ್. ರಾಮಣ್ಣ, ಗೌಳಿ ಕುಮಾರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT