ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯದಿಂದಲೇ ದಲಿತ ಹೋರಾಟಕ್ಕೆ ಸೋಲು: ಪ್ರೊ.ಚಿನ್ನಸ್ವಾಮಿ ಸೋಸಲೆ

Published : 1 ಸೆಪ್ಟೆಂಬರ್ 2024, 15:37 IST
Last Updated : 1 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ‘ದಲಿತ ಚಳವಳಿಯಲ್ಲಿ ರಾಜಕೀಯ ಸೇರಿಕೊಂಡಾಗ ತನ್ನ ಶಕ್ತಿಯನ್ನೇ ಕಳೆದುಕೊಳ್ಳುವಂತಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎನ್‌.ಚಿನ್ನಸ್ವಾಮಿ ಸೋಸಲೆ ಹೇಳಿದರು.

ಇಲ್ಲಿ ಭಾನುವಾರ ರೋಟರಿ ಕ್ಲಬ್‌ ಸಹಯೋಗದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ನ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ದಲಿತರಿಗೆ ಸಂವಿಧಾನದ ಮಹತ್ವ ಗೊತ್ತಾದುದೇ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಹುಟ್ಟಿದ ಮೇಲೆ. ಹೀಗಾಗಿ ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿದ್ದು 50 ವರ್ಷದ ಹಿಂದೆ ಮಾತ್ರ ಎಂದರು.

ಎರಡು ಸಾವಿರ ವರ್ಷಗಳಿಂದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತ ಬಂದಿರುವವರಿಗೆ ಕಳೆದ 50 ವರ್ಷಗಳಲ್ಲಿ ತುಳಿತಕ್ಕೊಳಗಾದವರಿಗೆ ಒಂದಿಷ್ಟು ಸೌಲಭ್ಯ ಸಿಕ್ಕಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಸಂವಿಧಾನ ಬದಲಿಸಬೇಕೆಂಬ ಹುಯಿಲೆಬ್ಬಿಸುತ್ತಿದ್ದಾರೆ. ಇಂತಹ ವಾಸ್ತವಗಳು ದಲಿತ ಸಾಹಿತ್ಯದಲ್ಲಿ ಮೂಡಿಬರಬೇಕು ಎಂದರು.

‘1999ರ ಏಪ್ರಿಲ್‌15ರಂದು ಹೊಸಪೇಟೆ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್‌ನ ಘಟಕ ಉದ್ಘಾಟನೆಗೊಂಡಿತ್ತು. ನಾನು ಆರು ವರ್ಷ ಅಧ್ಯಕ್ಷನಾಗಿದ್ದೆ. ಅಮಾನವೀಯ ಆಚರಣೆಗಳ ಕುರಿತು ಅರಿವು ಮೂಡಿಸುವಲ್ಲಿ ಸಫಲರಾಗಿದ್ದೆವು. ಇಂದು ಅದೇ ವೇದಿಕೆಯಲ್ಲಿ ಜಿಲ್ಲಾ ಘಟಕ ಉದ್ಘಾಟನೆಗೊಳ್ಳುತ್ತಿದೆ. ಎರಡು ಸಾವಿರ ವರ್ಷಗಳ ಒಪ್ಪಿತ ಅಜ್ಞಾನ ಮತ್ತು ಸ್ವಾತಂತ್ರ್ಯ ಲಭಿಸಿದ ಬಳಿಕದ  ಒಪ್ಪಿಸಿಕೊಳ್ಳುವ ಅಜ್ಞಾನದಲ್ಲಿ ಸಿಲುಕಿರುವ ಅಸ್ಪೃಶ್ಯರಿಗೆ ಸಂಬಂಧಿಸಿದ ಸಾಹಿತ್ಯವೆಲ್ಲವೂ ದಲಿತ ಸಾಹಿತ್ಯವೇ. ಅದಕ್ಕೆ ಊರು– ಕೇರಿ ಎಂಬ ಪದ ಬಹಳ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಇಂತಹ ಸಮುದಾಯದವರ ಒಡಲಾಳದ ನೋವನ್ನು, ತೊಳಲಾಟವನ್ನು ಬಿಂಬಿಸುವ  ಕವನಗಳು, ಕತೆ, ಕಾದಂಬರಿಗಳ ಹೆಚ್ಚು ಹೆಚ್ಚು ರಚನೆಗೊಳ್ಳಬೇಕು’ ಎಂದು ಸೋಸಲೆ ಸಲಹೆ ನೀಡಿದರು.

ಪರಿಷತ್‌ನ ನೂತನ ಅಧ್ಯಕ್ಷ ದಯಾನಂದ ಕಿನ್ನಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿ, ದಲಿತ ಸಾಹಿತ್ಯ ಕೆಲವೇ ಜನರನ್ನು ತಲುಪುತ್ತಿದೆ. ಶೋಷಣೆಗೆ ಒಳಗಾದವರೆಲ್ಲರೂ ದಲಿತರೇ. ಅದರ ಬಗ್ಗೆ ಗಂಭೀರ ಚಿಂತನೆ ಅಗತ್ಯ. 1994ರಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ರಚನೆಯಾದ ಬಳಿಕ 70ಕ್ಕೂ ಅಧಿಕ ಕೃತಿಗಳು ಹೊರಬಂದಿವೆ ಎಂದರು.

ದಲಿತ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ, ಗದಗದ ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್‌.ಡಿ.ಸುಲೋಚನಾ ಅವರು ಬರೆದ ‘ಡಾ.ಜಾಹ್ನವಿ’ ಕಾದಂಬರಿಯನ್ನು ಬಳ್ಳಾರಿ ಬಾಲಕಿಯರ ಬಾಲಮಂದಿರದ ನಿವೃತ್ತ ಅಧೀಕ್ಷಕಿ ಚೆನ್ನಮ್ಮ ಸಿ.ಬಿನ್ನಾಳ ಬಿಡುಗಡೆಗೊಳಿಸಿ ಕೃತಿ ಪರಿಚಯ ಮಾಡಿದರು.

ಕೊಪ್ಪಳದ ಲೇಖಕ ಸಿದ್ಲಿಂಗಪ್ಪ ಕೊಟ್ನಿಕಲ್‌, ಹೊಸಪೇಟೆ ಕಸಾಪದ ನಿಕಟಪೂರ್ವ ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ವಿಜಯುನಗರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುರಚೆನ್ನ ಶಾಸ್ತ್ರಿ ಹಿರೇಮಠ, ಮಕ್ಕಳ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಬಡಿಗೇರ, ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಹಾಲ್ಯಾ ನಾಯ್ಕ, ಲೇಖಕ ಚಂದ್ರಶೇಖರ ರೋಣದಮಠ, ನಿವೃತ್ತ  ಉಪನ್ಯಾಸಕ ನಾಗರಾಜ ಪತ್ತಾರ್‌ ಇತರರು ಪಾಲ್ಗೊಂಡಿದ್ದರು.

ವಾಸ್ತವದ ದಲಿತ ಸಾಹಿತ್ಯ ಮೂಡಿ ಬರಲಿ ಶೋಷಣೆಗೆ ಒಳಗಾದವರೆಲ್ಲರೂ ದಲಿತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT