ಹೊಸಪೇಟೆ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಹೊಸಪೇಟೆ ತಾಲ್ಲೂಕು ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಚೇರಿಯಲ್ಲಿನ ಕೆಲವು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ತಮ್ಮ ಕಚೇರಿಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಅವರು ಈ ಭೇಟಿ ನೀಡಿದರು. ಅವರು ಉಪ ನೋಂದಣಿ ಕಚೇರಿಗೆ ಸಹ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.
ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡಬೇಕು. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸಲಹೆ ಮಾಡಿದರು.
ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳು ಇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ಸೋಮವಾರ, ಮಂಗಳವಾರ ಪೌತಿ, ವಾರಸು ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಪೌತಿ ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದು ಎಂದರು.
ಆಹಾರ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಮಂದಗತಿಯಲ್ಲಿ ಆಗುತ್ತಿವೆ ಎನ್ನುವ ದೂರುಗಳಿದ್ದು, ಈ ಬಗ್ಗೆ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು. ಯಾವುದೇ ಕೆಲಸಕ್ಕೆ ಸಾರ್ವಜನಿಕರು ಕಾಯಬಾರದು ಎಂದು ತಿಳಿಸಿದರು.
ವಾರ್ತಾ ಇಲಾಖೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ ಸಿಬ್ಬಂದಿಯ ಕೆಲಸ ಕಾರ್ಯದ ಬಗ್ಗೆ ವಿಚಾರಿಸಿದರು.
ಶುಚಿತ್ವದ ಕಡೆ ಗಮನ ನೀಡಿ: ವಿವಿಧ ತಾಲ್ಲೂಕು ಕಚೇರಿಗಳನ್ನು ಹೊಂದಿರುವ ತಾಲೂಕು ಕಚೇರಿ ಸಂಕೀರ್ಣದ ಸುತ್ತಲೂ ಶುಚಿತ್ವ ಕಾಯ್ದುಕೊಳ್ಳಬೇಕು. ಇಲ್ಲಿ ಸಾರ್ವಜನಿಕ ಶೌಚಾಲಯ ಸರಿಯಾಗಿ ನಿರ್ವಹಣೆ ಆಗಬೇಕು. ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಹವಾಲು ಸ್ವೀಕಾರ: ಹೊಸಪೇಟೆ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಹವಾಲುಗಳನ್ನು ನೀಡಿದರು.
ಗ್ರೇಡ್-2 ತಹಶೀಲ್ದಾರ್ ವೆಂಕಟೇಶ್ ಆಶ್ರಿತ್, ಶೀರಸ್ತೇದಾರ ಶ್ರೀಧರ್ ಎಸ್. ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.