ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ | ಅಂಜೂರ ಬೇಸಾಯ: ವರ್ಷಕ್ಕೆ ₹20 ಲಕ್ಷ ಆದಾಯ

ಕೆ. ಸೋಮಶೇಖರ್
Published 17 ಮೇ 2024, 6:06 IST
Last Updated 17 ಮೇ 2024, 6:06 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಕಂದಗಲ್ಲು ಗ್ರಾಮದ ರೈತರೊಬ್ಬರು 40 ಎಕರೆಯಲ್ಲಿ ಅಂಜೂರ ಬೆಳೆದು, ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧನೆ ಮೂಲಕ ರಾಜ್ಯ, ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡು ಮಾದರಿಯಾಗಿದ್ದಾರೆ.

ಬಳ್ಳಾರಿಯ ಪ್ರಗತಿಪರ ರೈತ ಆರ್. ರಾಮಕೃಷ್ಣ (ರಾವಿ) ಅವರು ಕಂದಗಲ್ಲು ಗ್ರಾಮದಲ್ಲಿ 18 ವರ್ಷಗಳ ಹಿಂದೆ 40 ಎಕರೆ ಪಾಳು ಭೂಮಿ ಖರೀದಿಸಿದ್ದರು. ಕೃಷಿಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದ ನೆಲವನ್ನು ಹದಗೊಳಿಸಿ, ಏಳು ವರ್ಷಗಳ ಹಿಂದೆ ಇಡೀ ವಿಸ್ತೀರ್ಣಕ್ಕೆ ‘ಡಯಾನ’ ತಳಿಯ ಅಂಜೂರ ಕೃಷಿ ಅಳವಡಿಸಿದ್ದಾರೆ. ಕೆಲವೇ ವರ್ಷಗಳ ಹಿಂದೆ ಕುರಚಲು ಕಾಡಿನಂತಿದ್ದ ನೆಲದಲ್ಲೀಗ ಫಲಭರಿತ ಅಂಜೂರ ತೋಟ ನಳನಳಿಸುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಡಿ ಅಖಂಡ ಬಳ್ಳಾರಿ ಜಿಲ್ಲೆಗೆ ಅಂಜೂರ ಬೆಳೆ ಆಯ್ಕೆಯಾಗಿದೆ. ಈ ಯೋಜನೆಯಡಿ ದೊರೆತ ಸರ್ಕಾರದ ಅಲ್ಪ ನೆರವಿನ ಜತೆಗೆ ರಾಮಕೃಷ್ಣ ಅವರು ಸ್ವಂತ ಬಂಡವಾಳ ಹೂಡಿ ತಮ್ಮದೇ ತೋಟದಲ್ಲೇ ಸಂಸ್ಕರಣ ಘಟಕ ನಿರ್ಮಿಸಿಕೊಂಡಿದ್ದಾರೆ.

ಅಂಜೂರ ಋತುವಿನಲ್ಲಿ ಕಟಾವು ಮಾಡಿದ ಹಣ್ಣುಗಳನ್ನು ಸಂಸ್ಕರಣೆ ಮಾಡಿ, ಆಧುನಿಕ ತಂತ್ರಜ್ಞಾನ ನೆರವಿನಿಂದ ಹದವಾಗಿ ಒಣಗಿಸಿ ದಾಸ್ತಾನು ಮಾಡುತ್ತಾರೆ. ವರ್ಷದ ಎಲ್ಲ ಕಾಲದಲ್ಲೂ ಇವರಲ್ಲಿ ಒಣ ಹಣ್ಣು ದೊರೆಯುತ್ತವೆ.

ತುಂಗಭದ್ರಾ ನದಿಯ ನೀರು, ಇಲ್ಲಿನ ವಿಶಿಷ್ಟ ಹವಾಗುಣದಲ್ಲಿ ಬೆಳೆದ ಒಣ ಅಂಜೂರ ಹೆಚ್ಚು ಸ್ವಾದಿಷ್ಟವಾಗಿವೆ. ಈ ಕಾರಣಕ್ಕೆ ರಾಜ್ಯ, ಹೊರ ರಾಜ್ಯಗಳಲ್ಲೂ ಬೇಡಿಕೆ ಸೃಷ್ಟಿಯಾಗಿದೆ.

ಹೂವಿನಹಡಗಲಿ, ಮುಂಡರಗಿ, ಗದಗ, ಬೆಂಗಳೂರು ಸ್ಥಳೀಯ ಮಾರುಕಟ್ಟೆ ಅಲ್ಲದೆ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ಪಂಜಾಬ್, ಜಾರ್ಖಂಡ, ಉತ್ತರಾಖಂಡ, ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಗ್ರೇಡ್ ಆಧಾರದಲ್ಲಿ ಪ್ರತಿ ಕೆ.ಜಿಗೆ ₹500ರಿಂದ ₹1,100 ದರ ನಿಗದಿಪಡಿಸಿ, 500 ಗ್ರಾಂ.ನಿಂದ 5-10 ಕೆ.ಜಿ.ವರೆಗೆ ತಮ್ಮದೇ ಬ್ರಾಂಡ್‌ನ ಪೌಚ್ ಮತ್ತು ಬಾಟಲಿಯಲ್ಲಿ ತುಂಬಿ ಕಳಿಸಿಕೊಡುತ್ತಾರೆ.

‘ರೈತರು ಸಾಂಪ್ರದಾಯಿಕ ಬೆಳೆಗಳನ್ನು ಅವಲಂಬಿಸದೇ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ, ಹೆಚ್ಚು ಲಾಭ ತಂದುಕೊಡುವ ಬೆಳೆ ಬೆಳೆಯಲು ಆಸಕ್ತಿ ವಹಿಸಬೇಕು. ನಮ್ಮಲ್ಲಿರುವ ಸಂಸ್ಕರಣೆ ಘಟಕಕ್ಕೆ ನೂರಾರು ಎಕರೆಯಲ್ಲಿ ಬೆಳೆವ ಅಂಜೂರ ಹಣ್ಣುಗಳನ್ನು ಒಣಗಿಸಿ, ಸಂಸ್ಕರಣೆ ಮಾಡುವ ಸಾಮರ್ಥ್ಯವಿದೆ. ರೈತರು ಈ ಬೆಳೆ ಬೆಳೆಯಲು ಮುಂದಾದರೆ ಸಂಸ್ಕರಣೆ ಮಾಡಿಕೊಡಲು ಸಿದ್ದರಿದ್ದೇವೆ’ ರಾಮಕೃಷ್ಣ ಎಂದು ತಿಳಿಸಿದರು.

ವರ್ಷಕ್ಕೆ 8ರಿಂದ 10 ಟನ್ ಉತ್ಪಾದನೆ

‘ಅನಂತಪುರದಿಂದ ಏಳು ಸಾವಿರ ಅಂಜೂರ ಸಸಿಗಳನ್ನು ತಂದು ನಾಟಿ ಮಾಡಿದ್ದೆವು. ಬೆಳೆ ನಿರ್ವಹಣೆ ಮಾಹಿತಿ ಕೊರತೆಯಿಂದ ಆರಂಭಿಕ ನಷ್ಟ ಅನುಭವಿಸಬೇಕಾಯಿತು. 4ನೇ ವರ್ಷದಿಂದ ಫಸಲು ಪ್ರಾರಂಭವಾಗಿದ್ದು ವರ್ಷಕ್ಕೆ ಸರಾಸರಿ 8-10 ಟನ್ ಒಣ ಹಣ್ಣು ಉತ್ಪಾದನೆಯಾಗುತ್ತಿದೆ. ವರ್ಷಕ್ಕೆ ಎಲ್ಲ ಖರ್ಚು ವೆಚ್ಚ ತೆಗೆದು ₹20 ಲಕ್ಷ ಆದಾಯ ಸಿಗುತ್ತಿದೆ’ ಮಾರುಕಟ್ಟೆ ವಿಸ್ತಾರವಾದಂತೆ ಲಾಭ ಹೆಚ್ಚುವ ನಿರೀಕ್ಷೆಯಿದೆ’ ಎಂದು ರಾಮಕೃಷ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT