ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

Published 6 ಜೂನ್ 2023, 4:08 IST
Last Updated 6 ಜೂನ್ 2023, 4:08 IST
ಅಕ್ಷರ ಗಾತ್ರ

ವಿಶ್ವನಾಥ ಡಿ.

ಚಿನ್ನ ಗಣಿಗಾರಿಕೆಗೆ ಇದೊಂದು ದೊಡ್ಡ ಹಿನ್ನಡೆ ಎಂಬ ಭಾವಿಸಲಾಗಿದ್ದು, ಇನ್ನು ಮುಂದೆ ಟೆಂಡರ್‌ ಕರೆಯುವುದಿಲ್ಲ, ಚಿನ್ನದ ನಿಕ್ಷೇಪ ಎಷ್ಟಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರವೇ ನಡೆಸುವ ಚಿಂತನೆ ಇದೆ ಎಂದು ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭೂ ಸರ್ವೇಕ್ಷಣಾ ಸಂಸ್ಥೆಯ ತಜ್ಞರ ಸಮೀಕ್ಷೆಯು ಭೂ ಗರ್ಭದಲ್ಲಿ ಎಷ್ಟು ಅಡಿ ಆಳದಲ್ಲಿ ಚಿನ್ನವಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. 30.78 ಚದರ ಕಿ.ಮೀ. ವಿಸ್ತಾರದ ಪೈಕಿ 643.24 ಹೆಕ್ಟೇರ್‌ ಭೂಮಿ ಖಾಸಗಿ ವಲಯದ್ದು ಎಂದು ತಿಳಿಸಿದೆ. ಆ ಪ್ರದೇಶ ಸ್ವಾಧೀನಪಡಿಸುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಇಲಾಖೆ ಸೂಚಿಸಿಲ್ಲ. ಇದರ ನಡುವೆ 2,340.27 ಹೆಕ್ಟೇರ್‌ ಗುಡ್ಡಗಾಡು ಪ್ರದೇಶವಿದ್ದು, ಅದನ್ನು ಸ್ವಾಧೀನಪಡಿಸಿಕೊಂಡು ಗಣಿಗಾರಿಕೆಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತದೆಯೇ ಎನ್ನುವ ಸ್ಪಷ್ಟನೆ ಸಾರಾಂಶದಲ್ಲಿ ಕಾಣಿಸಿಲ್ಲ.

‘ಈಗಿನ ಟೆಂಡರ್ ನಿಯಮ ಪ್ರಕಾರ ಗುತ್ತಿಗೆ ಪಡೆದು ಸಮೀಕ್ಷೆ ನಡೆಸಿದ ನಂತರ ಚಿನ್ನದ ಪ್ರಮಾಣ ಕಡಿಮೆಯಿದ್ದರೆ ಹೂಡಿಕೆ ಮಾಡುವ ಬಂಡವಾಳ ನಷ್ಟವಾಗಿ ಕೈಸುಟ್ಟುಕೊಳ್ಳುವ ಸಾಧ್ಯತೆಯಿದೆ. ಈ ಕಾರಣಗಳಿಗಾಗಿ ಎರಡು ಸಲ ಕರೆದಿದ್ದ ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗವಹಿಸುವ ಆಸಕ್ತಿ ತೋರಿಸಿಲ್ಲ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಲ್ಲೂಕಿನ ಕಣಿವಿಹಳ್ಳಿ ಮತ್ತು ಕೊಂಗನಹೊಸೂರು ಗ್ರಾಮ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದ್ದ ಭೂ ಸರ್ವೇಕ್ಷಾಣಾ ಸಂಸ್ಥೆ 30.78 ಚದರ ಕಿ.ಮೀ. ಪ್ರದೇಶದ ಭೂಗರ್ಭದಲ್ಲಿ ಚಿನ್ನದ ನಿಕ್ಷೇಪವಿರುವ ಬಗ್ಗೆ ಖಚಿತಪಡಿಸಿಕೊಂಡು, ಗುಡ್ಡದ ಸುತ್ತಲೂ ಅಕ್ಷಾಂಶ ಮತ್ತು ರೇಖಾಂಶದ ಕಾರ್ನರ್ ಪಾಯಿಂಟ್ ಅನ್ನು ಕಳೆದ ವರ್ಷ ಗುರುತಿಸಿತ್ತು.

ಇದೇ ಸಂಸ್ಥೆಯು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಎಷ್ಟು ಅಡಿ ಆಳದಲ್ಲಿ, ಎಷ್ಟು ಪ್ರಮಾಣದ ಚಿನ್ನವಿದೆ ಎಂಬುದನ್ನು ಪತ್ತೆ ಹಚ್ಚಲು ಸಂಯೋಜಿತ ಗುತ್ತಿಗೆ ನೀಡುವ ಸಲುವಾಗಿ 2022ರ ಫೆಬ್ರವರಿಯಲ್ಲಿ ಪ್ರಥಮ ಟೆಂಡರ್, 2023ರ ಮಾರ್ಚ್‌ನಲ್ಲಿ ಎರಡನೇ ಟೆಂಡರ್ ಕರೆದಿತ್ತು. ಅದರನ್ವಯ ಹರಾಜಿನಲ್ಲಿ ಗುತ್ತಿಗೆ ಪಡೆಯುವ ಗುತ್ತಿಗೆದಾರರು ನಿಗದಿತ ಸ್ಥಳದಲ್ಲಿ ಸಮೀಕ್ಷೆ ನಡೆಸಿ, ಎಷ್ಟು ಪ್ರಮಾಣ ಚಿನ್ನವಿದೆ ಎಂಬುದನ್ನು ಪತ್ತೆ ಹಚ್ಚಿದ ಬಳಿಕ, ಗಣಿಗಾರಿಕೆಗೆ ಅವಕಾಶ ಕೊಡಲು ನಿಯಮ ವಿಧಿಸಿತ್ತು.

‘ಗುಡ್ಡದಲ್ಲಿ ಚಿನ್ನವಿದೆ ಎಂದು ನಾಲ್ಕೈದು ವರ್ಷಗಳಿಂದ ಸಮೀಕ್ಷೆ ಕಾರ್ಯ ನಡೆಯುತ್ತಲೇ ಇದೆ. ಆದರೆ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಹಳ್ಳಿಯ ರೈತರಿಗೆ ಯಾವುದೇ ಮಾಹಿತಿ ಇಲ್ಲ’ ಎಂದು ಕೊಂಗನಹೊಸೂರು ರೈತ ಕೆ.ಮುನೇಗೌಡ ತಿಳಿಸಿದರು.

‘ಜಿ-4 ಪರಿಶೀಲನೆ ವೇಳೆ ಭೂಮಿಯ ಆಳದಲ್ಲಿ ಚಿನ್ನದ ನಿಕ್ಷೇಪ ಇರುವುದು ಖಚಿತವಾಗಿದೆ. ಭೂ ಸರ್ವೇಕ್ಷಣಾ ಸಂಸ್ಥೆಯೇ ಸ್ವತಃ ಚಿನ್ನ ಲಭ್ಯತೆಯ ಪ್ರಮಾಣ ಪತ್ತೆ ಹಚ್ಚಿ ನಂತರ ಗಣಿಗಾರಿಕೆಗೆ ಟೆಂಡರ್ ಆಹ್ವಾನಿಸಿದರೆ ಮಾತ್ರ ಖಾಸಗಿಯವರು ಗುತ್ತಿಗೆ ಪಡೆಯಲು ಮುಂದೆ ಬರುತ್ತಾರೆ’ ಎಂದು ಉಪನ್ಯಾಸಕ ಟಿ.ಮಲ್ಲಿಕಾರ್ಜುನ್ ತಿಳಿಸಿದರು.‌

‘ಚಿನ್ನದ ಗಣಿ ನಿಕ್ಷೇಪ ಸಂಶೋಧಿಸುವುದು ವೆಚ್ಚದ ಕೆಲಸ. ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಅಪಾರ ಪ್ರಮಾಣದಲ್ಲಿ ನಷ್ಟವಾಗುವ ಅಪಾಯ ಇದೆ. ಇದೇ ಕಾರಣಕ್ಕೆ ಬಿಡ್‌ದಾರರು ಟೆಂಡರ್‌ ಹಾಕುವುದರಿಂದ ಹಿಂದೆ ಸರಿದಿರಬಹುದು. ಸರ್ಕಾರವಂತೂ ಈ ಯೋಜನೆ ಕೈಬಿಡುವುದಿಲ್ಲ’ ಎಂದು ಗಣಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

3078.7 ಹೆಕ್ಟೇರ್‌ ಪ್ರದೇಶದಲ್ಲಿ ಯೋಜನೆ

ಟೆಕ್ನೋ ಎಕನಾಮಿಕಲ್ ಫೀಸಿಬಿಲಿಟಿ ಸ್ಟಡಿ ಹಾಗೂ ಮಿನರಲ್ ಎಕ್ಸ್‌ಪ್ಲೋರೇಷನ್ ಕಾರ್ಪೊರೇಷನ್‌ ಸಂಸ್ಥೆ 2018 2021ರಲ್ಲಿ ವರದಿ ಸಲ್ಲಿಸಿದೆ. ಕಣಿವಿಹಳ್ಳಿ ಮತ್ತು ಕೊಂಗನಹೊಸೂರು ಸುತ್ತಲೂ 30.78 ಚದರ ಕಿ.ಮೀ. ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಗುರುತಿಸಲಾಗಿದೆ. ಈ ಪೈಕಿ 2340.27 ಹೆಕ್ಟೇರ್‌ ಅರಣ್ಯ ಭೂಮಿ 95.19 ಹೆಕ್ಟೇರ್ ಸರ್ಕಾರಿ 643.24 ಹೆಕ್ಟೇರ್‌ ಖಾಸಗಿ ಭೂಮಿ ಒಳಗೊಂಡಿದ್ದು ಒಟ್ಟು 3078.7 ಹೆಕ್ಟೇರ್‌ ಪ್ರದೇಶ ಚಿನ್ನ ಗಣಿಗಾರಿಕೆಗೆ ಒಳಪಡಿಸುವ ಯೋಜನೆ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT