ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಹಂಪಿ ಸ್ನಾನಘಟ್ಟ ಅಭಿವೃದ್ಧಿಯೇ ಸವಾಲು

ನಿರ್ವಹಣೆ ಕೊರತೆಯೇ ಸಮಸ್ಯೆಗೆ ಮುಖ್ಯ ಕಾರಣ; ನದಿ ಉಕ್ಕಿ ಹರಿದಾಗ ಸಮಸ್ಯೆ ಸೃಷ್ಟಿ
Last Updated 6 ನವೆಂಬರ್ 2021, 7:53 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರಸಿದ್ಧ ಹಂಪಿ ಸ್ನಾನಘಟ್ಟ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಆದರೆ, ಅದರ ಅಭಿವೃದ್ಧಿ ಮೊದಲಿನಿಂದಲೂ ಸವಾಲಾಗಿ ಪರಿಣಮಿಸಿದೆ.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿ ಸ್ನಾನಘಟ್ಟದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವುದು ದಶಕಗಳ ಬೇಡಿಕೆ. ಅದಕ್ಕೆ ಸ್ಪಂದಿಸಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಅಲ್ಲಿ ₹5 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ. ಅದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಆದರೆ, ಇದು ಹೊಸತೇನಲ್ಲ. ಈ ಹಿಂದೆಯೂ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ, ಸೂಕ್ತ ನಿರ್ವಹಣೆಯ ಕೊರತೆಯಿಂದ ಪ್ರವಾಸಿಗರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ನಾಲ್ಕು ವರ್ಷಗಳ ಹಿಂದೆ ನದಿ ಸ್ನಾನಘಟ್ಟವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಅಲ್ಲಿ ಕಿತ್ತು ಹೋಗಿದ್ದ ಮೆಟ್ಟಿಲುಗಳ ಕಲ್ಲನ್ನು ದುರಸ್ತಿಗೊಳಿಸಲಾಗಿತ್ತು.

ಸ್ನಾನಘಟ್ಟದುದ್ದಕ್ಕೂ ಹೂವಿನ ಗಿಡಗಳನ್ನು ನೆಡಲಾಗಿತ್ತು. ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸತತ ಮೂರು ವರ್ಷಗಳಿಂದ ತುಂಗಭದ್ರಾ ಜಲಾಶಯ ತುಂಬುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿ ತುಂಬಿ ಹರಿದಿದ್ದರಿಂದ ಸ್ನಾನಘಟ್ಟ ಪ್ರದೇಶದ ಉದ್ಯಾನ ಹಾಳಾಗಿದೆ. ಅದರ ಯಾವ ಕುರುಹುಗಳು ಅಲ್ಲಿಲ್ಲ.

ನದಿ ಉಕ್ಕಿ ಹರಿದಾಗಲೆಲ್ಲಾ ಅಪಾರ ಪ್ರಮಾಣದ ಮಣ್ಣು, ಪಾಚಿ, ಬಟ್ಟೆ, ಬಾಟಲಿ ಸೇರಿದಂತೆ ಇತರೆ ವಸ್ತುಗಳು ನದಿ ದಂಡೆಗೆ ರಾಶಿರಾಶಿಯಾಗಿ ಬಂದು ಬೀಳುತ್ತವೆ. ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇರುವುದು, ಪುನಃ ಉದ್ಯಾನವನ್ನು ಹಿಂದಿನಂತೆ ನಿರ್ವಹಣೆ ಮಾಡದೆ ಇರುವುದರಿಂದ ಇಡೀ ಪರಿಸರ ಪಾಳು ಬಿದ್ದಂತಾಗಿದೆ. ಮೇಲಿಂದ ಮೇಲೆ ಹಂಪಿಯಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತದೆ. ಆದರೆ, ದಿನ ಕಳೆದಂತೆ ಮತ್ತೆ ತ್ಯಾಜ್ಯ ಸಂಗ್ರಹವಾಗುತ್ತದೆ.

ಹಾಗಿದ್ದರೆ ಏನು ಮಾಡಬೇಕು?: ನದಿಯ ದಿಕ್ಕು ಬದಲಿಸುವುದು ಅಸಾಧ್ಯ. ಜಲಾಶಯ ತುಂಬಿದಾಗಲೆಲ್ಲಾ ನದಿಗೆ ನೀರು ಹರಿಸುವುದು ಸಾಮಾನ್ಯ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ನದಿ ಸ್ನಾನಘಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಎಷ್ಟೇ ನೀರು ಬಂದರೂ ಅದನ್ನು ತಡೆಯುವ ರೀತಿಯಲ್ಲಿ ಸ್ನಾನಘಟ್ಟದ ಮೆಟ್ಟಿಲುಗಳನ್ನು ನಿರ್ಮಿಸಬೇಕು ಎನ್ನುತ್ತಾರೆ ಹಿರಿಯ ಗೈಡ್‌ಗಳು.

‘ನದಿ ಉಕ್ಕಿ ಹರಿದಾಗ ನೀರಿನ ಹರಿವು ಬಹಳ ವೇಗವಾಗಿರುತ್ತದೆ. ಅದನ್ನು ತಡೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಇಡೀ ಸ್ನಾನಘಟ್ಟವನ್ನು ಅಭಿವೃದ್ಧಿ ಪಡಿಸಬೇಕು. ಈಗಿರುವ ಶೌಚಾಲಯದ ಪಕ್ಕದಲ್ಲೇ ಮಹಿಳೆಯರು ಬಟ್ಟೆ ಬದಲಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು. ಅದರ ಜೊತೆಗೆ ಸ್ನಾನಘಟ್ಟದಲ್ಲಿ ತಾತ್ಕಾಲಿಕ ವ್ಯವಸ್ಥೆಯೂ ಮಾಡಬೇಕು. ನದಿ ತುಂಬಿ ಹರಿದಾಗ ಅದನ್ನು ಸ್ಥಳಾಂತರಿಸಿ ಪುನಃ ಅದನ್ನು ಅಲ್ಲಿಯೇ ಮರುಸ್ಥಾಪಿಸುವ ಕೆಲಸ ಆಗಬೇಕು’ ಎನ್ನುತ್ತಾರೆ ಗೈಡ್‌ ರಾಜು.

‘ಇನ್ನು ನದಿ ಸ್ನಾನಘಟ್ಟದಲ್ಲಿ ಎಷ್ಟೇ ಸ್ವಚ್ಛತೆ ಕಾಪಾಡಿದರೂ ಬೇರೆ ಕಡೆಯಿಂದ ಕೊಳಚೆ ಹರಿದು ಬರುತ್ತದೆ. ಅದನ್ನು ತಡೆಯಲು ಆಗುವುದಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ಸ್ವಚ್ಛತಾ ಸಿಬ್ಬಂದಿ ಮೀಸಲಿಡಬೇಕು. ನಿತ್ಯವೂ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮಾಡಬೇಕು. ತಿರುಪತಿ, ಧರ್ಮಸ್ಥಳದಲ್ಲಿ ಈ ಕೆಲಸ ಸಾಧ್ಯವಾಗುವುದಾದರೆ ನಮ್ಮಲ್ಲೇಕೇ ಆಗುವುದಿಲ್ಲ?’ ಎಂದು ಪ್ರಶ್ನಿಸಿದರು.

ವಿಶೇಷ ಸಂದರ್ಭಕ್ಕೆ ವಿಶೇಷ ವ್ಯವಸ್ಥೆ
ಸಂಕ್ರಾಂತಿ, ಯುಗಾದಿ, ಶ್ರಾವಣ ಮಾಸ, ಅಮವಾಸ್ಯೆ, ಹುಣ್ಣಿಮೆ ಹಾಗೂ ಇತರೆ ಹಬ್ಬ ಹರಿದಿನಗಳಂದು ಹೆಚ್ಚಿನ ಸಂಖ್ಯೆಯ ಭಕ್ತರು ಹಂಪಿಗೆ ಬಂದು ಹೋಗುತ್ತಾರೆ. ಈ ವೇಳೆ ನದಿ ಸ್ನಾನಘಟ್ಟದಲ್ಲಿ ಹೆಚ್ಚಿನವರು ಸ್ನಾನ ಮಾಡುತ್ತಾರೆ. ಈ ವಿಶೇಷ ಸಂದರ್ಭಗಳಲ್ಲಿ ಅಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.

‘ಸಾಮಾನ್ಯ ದಿನಗಳಲ್ಲಿ ನದಿ ಸ್ನಾನಘಟ್ಟಕ್ಕೆ ಬೆರಳೆಣಿಕೆಯ ಜನ ಬರುತ್ತಾರೆ. ಹಬ್ಬ ಹರಿದಿನ, ಉತ್ಸವಗಳ ಸಂದರ್ಭಗಳಲ್ಲಿ ಹೆಚ್ಚಾಗಿ ಬರುತ್ತಾರೆ. ಆ ವಿಶೇಷ ದಿನಗಳಂದು ಭಕ್ತರ ಅನುಕೂಲಕ್ಕಾಗಿ ನದಿ ಸ್ನಾನಘಟ್ಟದಲ್ಲಿ ತಾತ್ಕಾಲಿಕ ಶೌಚಾಲಯ, ಬಟ್ಟೆ ಬದಲಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ರೀತಿಯ ತ್ಯಾಜ್ಯ ಬಿಸಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಗ ಇಡೀ ಪರಿಸರ ಸ್ವಚ್ಛವಾಗಿರುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ರಮೇಶ, ರಾಜು, ವೆಂಕಟೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT