ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ: ಗೈಡ್‌ಗಳಿಗೆ 5 ತಿಂಗಳಿಂದ ಬಂದಿಲ್ಲ ಗೌರವಧನ, ಗ್ಯಾರಂಟಿಗಳ ಪ್ರಭಾವದ ಆರೋಪ

ಹಲವು ಮನವಿ ಸಲ್ಲಿಸಿದರೂ ದೊರಕದ ಸ್ಪಂದನೆ
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿರುವ 151 ಮಂದಿ ಸಹಿತ ರಾಜ್ಯದ 398 ಪ್ರವಾಸಿ ಮಾರ್ಗದರ್ಶಿಗಳಿಗೆ ಕಳೆದ ಐದು ತಿಂಗಳುಗಳಿಂದ ₹ 5 ಸಾವಿರ ಗೌರವಧನ ಸಿಕ್ಕಿಲ್ಲ.

ಬಿರು ಬಿಸಿಲು ಆರಂಭವಾಗಿದ್ದು, ಪ್ರವಾಸಿಗರು ಸ್ಮಾರಕಗಳನ್ನು ನೋಡಲು ಬರುವ ಪ್ರಮಾಣ ಇಳಿಮುಖವಾಗತೊಡಗಿದೆ. ಮುಂದಿನ ತಿಂಗಳಿನಿಂದ ಪರೀಕ್ಷೆಗಳು ಆರಂಭವಾಗಲಿವೆ. ಮತ್ತೆ ಪ್ರವಾಸಿಗರು ಬರುವುದು ಆಗಸ್ಟ್‌ ನಂತರವೇ. ಹೀಗಾಗಿ ಸುಮಾರು ಆರು ತಿಂಗಳ ಕಾಲ ಸರ್ಕಾರ ನೀಡುವ ಗೌರವಧನವೇ ಅದೆಷ್ಟೋ ಮಂದಿಯ ಜೀವನಾಧಾರವಾಗಿದ್ದು, ಯಾವಾಗ ಅದು ಬರುತ್ತದೆ ಎಂಬ ಕಾತರದಲ್ಲಿ ಕುಟುಂಬವರಿದ್ದಾರೆ.

‘2023ರ ಸೆಪ್ಟೆಂಬರ್‌ನಲ್ಲಿ ಪಡೆದ ಗೌರವಧನವೇ ಕೊನೆಯದು. ಬಳಿಕ ಸಂದಾಯವಾಗಿಯೇ ಇಲ್ಲ. ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ, ಆದರೂ ಹಣ ಬಿಡುಗಡೆ ಆಗಿಲ್ಲ’ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಜಿ.ಮಂಜುನಾಥ ಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.

ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ:

‘ಬಜೆಟ್‌ಗಿಂತ ಮೊದಲಾಗಿ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್ ಅವರನ್ನೂ ಭೇಟಿ ಮಾಡಿ ನಮ್ಮ ಕಷ್ಟ ಹೇಳಿಕೊಂಡಿದ್ದೇವೆ. ಗೌರವಧನವನ್ನು ಇನ್ನೂ ₹2 ಸಾವಿರ ಹೆಚ್ಚಿಸಬೇಕೆಂದು ಕೋರಿಕೆ ಸಲ್ಲಿಸಿದ್ದೇವೆ. ಬಜೆಟ್‌ನಲ್ಲಿ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ನೀಡುತ್ತಿದ್ದ ಗೌರವಧನವನ್ನೇ  ತಡೆಹಿಡಿದಿರುವುದರಿಂದ ನಮಗೆ ಬಹಳ ತೊಂದರೆಯಾಗಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ವಿ.ಹಂಪಿ ಹೇಳಿದರು.

2023ರ ಜುಲೈನಲ್ಲೂ ಇದೇ ಸ್ಥಿತಿ ನೆಲೆಸಿತ್ತು. ಆಗ ನಾಲ್ಕು ತಿಂಗಳಿಂದ ಗೌರವಧನ ಸಿಕ್ಕಿರಲಿಲ್ಲ. ವಿಧಾನಸಭಾ ಚುನಾವಣೆ, ಫಲಿತಾಂಶ, ಜಿ–20 ಸಭೆಗಳ ಕಾರಣ ಗೌರವಧನ ನೀಡಿಕೆ ವಿಳಂಬವಾಗಿತ್ತು. 2023ರ ಜುಲೈ 27ರಂದು ಈ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಗೌರವಧನ ಬಿಡುಗಡೆಯಾಗಿತ್ತು. ಮತ್ತೆ ಮುಂದಿನ ಎರಡು ತಿಂಗಳಷ್ಟೇ ಗೌರವಧನ ಬಿಡುಗಡೆಯಾಗಿದ್ದು, ಅಕ್ಟೋಬರ್‌ನಿಂದೀಚೆಗೆ ಗೌರವಧನ ಸಿಕ್ಕಿಲ್ಲ.

ಪ್ರಭುಲಿಂಗ ತಳಕೇರಿ
ಪ್ರಭುಲಿಂಗ ತಳಕೇರಿ
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪ  (ಸಂಗ್ರಹ ಚಿತ್ರ)
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪ  (ಸಂಗ್ರಹ ಚಿತ್ರ)
ಗ್ಯಾರಂಟಿಗಳಿಂದಾಗಿ ಈ ಸ್ಥಿತಿ ಒದಗಿತೋ ಗೊತ್ತಿಲ್ಲ ನಮ್ಮ ಕಷ್ಟವನ್ನೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ
–ಡಿ.ಕೆ. ರಾಮಕೃಷ್ಣ ಹಂಪಿ ಪ್ರವಾಸಿ ಮಾರ್ಗದರ್ಶಿ
ಇಡೀ ರಾಜ್ಯದ ಸಮಸ್ಯೆ ಇದು. ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರ ಗೌರವಧನ ಬಿಡುಗಡಯಾಗುವ ವಿಶ್ವಾಸ ಇದೆ
–ಪ್ರಭುಲಿಂಗ ತಳಕೇರಿ ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ

2 ವರ್ಷದಿಂದ ಕಾಯುತ್ತಿದ್ದಾರೆ 56 ಮಂದಿ ಪ್ರವಾಸಿ ಮಾರ್ಗದರ್ಶಕರಾಗಲು ಅಗತ್ಯವಿರುವ ತರಬೇತಿ ಪಡೆದು ಅರ್ಹ ಮಾರ್ಗದರ್ಶಕರು ಎಂದು ಪ್ರವಾಸೋದ್ಯಮ ಇಲಾಖೆಯಿಂದಲೇ ಗುರುತಿಸಲಾಗಿರುವ ಹಂಪಿಯ 28 ಮಂದಿ ಪ್ರವಾಸಿ ಮಾರ್ಗದರ್ಶಿಗಳ ಸಹಿತ ರಾಜ್ಯದ 56 ಮಂದಿ ಕಳೆದ ಎರಡು ವರ್ಷಗಳಿಂದ ಈ ₹5 ಸಾವಿರ ಗೌರವಧನಕ್ಕಾಗಿ ಕಾಯುತ್ತಲೇ ಇದ್ದಾರೆ. ‘ಸ್ಟೇಟ್‌ ಕಾರ್ಡ್‌ ಪಡೆದರೆ ಅವರ ಹೆಸರಲ್ಲೂ ಬಜೆಟ್‌ನಲ್ಲಿ ಹಣ ತೆಗೆದಿರಿಸುವ ಕೆಲಸ ಆಗಿಬಿಡುತ್ತದೆ. ಆದರೆ ಈ 56 ಮಂದಿಗೆ ಇನ್ನೂ ಸ್ಟೇಟ್‌ ಕಾರ್ಡ್ ವಿತರಿಸಿಲ್ಲ. ಸಂಘದ ವತಿಯಿಂದ ಈ ಬಗ್ಗೆಯೂ ಒತ್ತಾಯಿಸಲಾಗಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ.ಹಂಪಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT