ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ: 8 TMC ನೀರು ಖಾಲಿ, ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್‌ ಅಳವಡಿಕೆ?

Published : 12 ಆಗಸ್ಟ್ 2024, 5:08 IST
Last Updated : 12 ಆಗಸ್ಟ್ 2024, 5:08 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್‌ ನೀರಲ್ಲಿ ಕೊಚ್ಚಿಹೋದ ಕಾರಣ ಹೊಸ ಗೇಟ್‌ ಅಳವಡಿಸಲು ಜಲಾಶಯದ ನೀರನ್ನು ಬಹುತೇಕ ಅರ್ಧದಷ್ಟು ಖಾಲಿ ಮಾಡುವ ಯತ್ನ ನಿರಂತರ ಸಾಗಿದ್ದು, 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಶಾಶ್ವತ ಗೇಟ್‌ ಬದಲಿಗೆ ತಾತ್ಕಾಲಿಕ ‘ಸ್ಟಾಪ್‌ ಲಾಗ್ ಗೇಟ್‌’ ಮಾತ್ರ ಅಳವಡಿಸುವ ಸಾಧ್ಯತೆ ಇದೆ.

ಶಾಶ್ವತ ಕ್ರಸ್ಟ್‌ಗೇಟ್‌ ನಿರ್ಮಾಣಕ್ಕೆ ಬಹಳಷ್ಟು ಸಮಯ ಹಿಡಿಯುತ್ತದೆ, ಸದ್ಯ ಜಲಾಶಯದ ನೀರನ್ನು ಹಿಡಿದಿಟ್ಟುಕೊಳ್ಳುವುದೇ ಆದ್ಯತೆ. ಹೀಗಾಗಿ 19ನೇ ಗೇಟ್‌ ಅನ್ನು ಸಂಪೂರ್ಣವಾಗಿ ಮುಚ್ಚಿ ಅಲ್ಲಿ ನೀರು ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ‘ಸ್ಟಾಪ್‌ ಲಾಗ್ ಗೇಟ್‌’ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳಿಂದ ಮಾಹಿತಿ ಲಭಿಸಿದೆ.

ಗೇಟ್ ತಯಾರಿಸಲು ಸೂಚಿಸಲಾದ ಕಂಪನಿಯ ಕಚೇರಿ ಇರುವುದು ಹೊಸಪೇಟೆಯಲ್ಲಾದರೂ ನಿರ್ಮಾಣ ಶೆಡ್‌ ಇರುವುದು ಕೊಪ್ಪಳ ಜಿಲ್ಲೆಯ ಹೊಸಹಳ್ಳಿ ಸಮೀಪ. ಅಲ್ಲಿ ಈಗಾಗಲೇ ಗೇಟ್ ತಯಾರಿಗೆ ಸಿದ್ಧತೆ ಆರಂಭವಾಗಿದೆ. ಜಲಾಶಯದ ನೀರು 50 ಟಿಎಂಸಿ ಅಡಿಗೆ ಕುಸಿದಂತೆ ಗೇಟ್‌ ಸಹ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.

8 ಟಿಎಂಸಿ ನೀರು ಖಾಲಿ: ಸದ್ಯ ಅಣೆಕಟ್ಟೆಯಿಂದ ನದಿಗೆ ಸರಾಸರಿ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣ 25 ಸಾವಿರ ಕ್ಯುಸೆಕ್‌ನಷ್ಟು ಮಾತ್ರ ಇದೆ. ಹೀಗಾಗಿ ಒಂದೇ ದಿನದಲ್ಲಿ ಜಲಾಶಯದಿಂದ 8 ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗಿದೆ. ಶನಿವಾರ ರಾತ್ರಿ ಜಲಾಶಯ ಭರ್ತಿಯಾಗಿಯೇ ಇತ್ತು. ಗರಿಷ್ಠ ಸಂಗ್ರಹ ಸಾಮರ್ಥ್ಯವಾದ 105.78 ಟಿಎಂಸಿ ಅಡಿ ನೀರಿತ್ತು. ಸೋಮವಾರ ಬೆಳಿಗ್ಗೆ ನೀರಿನ ಸಂಗ್ರಹ 97.75 ಟಿಎಂಸಿ ಅಡಿಗೆ ಕುಸಿದಿದೆ.

ಇನ್ನಷ್ಟು ನೀರು ನದಿಗೆ–ಎಚ್ಚರಿಕೆ: ಬಹಳ ಬೇಗನೆ ನೀರು ಖಾಲಿ ಮಾಡುವ ಒತ್ತಡದಲ್ಲಿ ತುಂಗಭದ್ರಾ ಮಂಡಳಿ ಇದೆ. ಮೇಲಾಗಿ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಸುರಿಯುವ ಮುನ್ಸೂಚನೆಯೂ ಇದೆ. ಹೀಗಾಗಿ ನಾಲ್ಕೈದು ದಿನದೊಳಗೆಯೇ ಜಲಾಶಯದ ನೀರು ಸಂಗ್ರಹವನ್ನು 45ರಿಂದ 50 ಟಿಎಂಸಿ ಅಡಿಗೆ ಇಳಿಸಬೇಕಾಗಿದ್ದು, ಸೋಮವಾರದಿಂದ 1.50 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುವುದು ಎಂದು ಮಂಡಳಿ ಭಾನುವಾರ ರಾತ್ರಿಯೇ ಎಚ್ಚರಿಕೆ ನೀಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಹರಿಸುವ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ವಿರೋಧ ಪಕ್ಷಗಳ ನಾಯಕರ ಭೇಟಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ಮಧ್ಯಾಹ್ನ ಅಣೆಕಟ್ಟೆಗೆ ಭೇಟಿ ನೀಡಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ಬಸವರಾಜ ಬೊಮ್ಮಾಯಿ ಅವರು ಸಹ ಭೇಟಿ ನೀಡುವ ನಿರೀಕ್ಷೆ ಇದೆ.

ಮಂಡಳಿಯ ಅಧಿಕಾರಿಗಳೂ ಭೇಟಿ: ತುಂಗಭದ್ರಾ ಮಂಡಳಿಯ ಅಧ್ಯಕ್ಷರು, ಕೇಂದ್ರೀಯ ಜಲ ಆಯೋಗದ ಸದಸ್ಯರು ಸೋಮವಾರ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT