ಹೊಸಪೇಟೆ (ವಿಜಯನಗರ): ‘ಸಂಡೂರು ತಾಲ್ಲೂಕಿನ ಎಮ್ಮಿಹಟ್ಟಿಯಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ ಇನಾಂ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದ ದಿನವೇ ಆಣೆ ಪ್ರಮಾಣ ಮಾಡಲು ಸಿದ್ಧ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು.
‘ಆಣೆ ಪ್ರಮಾಣಕ್ಕೆ ಸಚಿವರೇ ದಿನಾಂಕ ನಿಗದಿಪಡಿಸಲಿ. ನಾನು ಸಂಡೂರಿನ ವಿಜಯ ವೃತ್ತದಿಂದ ಕುಮಾರಸ್ವಾಮಿ ದೇವಾಲಯಕ್ಕೆ ಹೋಗಿ ದೀಪ ಹಚ್ಚುವೆ. ಸಚಿವ ಆನಂದ್ ಸಿಂಗ್ ಹಾಗೂ ಅವರ ಮಗ ಸಿದ್ದಾರ್ಥ ಸಿಂಗ್ ಬಂದು ನಾನು ಹಚ್ಚಿದ ದೀಪ ಆರಿಸುವುದರ ಮೂಲಕ ಆಣೆ ಪ್ರಮಾಣ ಮಾಡಲಿ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವರಿಗೆ ಸವಾಲು ಹಾಕಿದರು.
‘ನಾನು ಸಚಿವರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಒಬ್ಬ ಸಚಿವರಿಗೆ ಹಣ ಕೊಡಬೇಕೆಂದು ಬ್ಲ್ಯಾಕ್‌ಮೇಲ್ ಮಾಡಿದ್ದು ಎಲ್ಲಾದರೂ ಆಗಿದೆಯಾ? ಸಚಿವರೇ ಮೂರನೇ ವ್ಯಕ್ತಿಯನ್ನು ನನ್ನ ಬಳಿ ಸಂಧಾನಕ್ಕೆ ಕಳಿಸಿದ್ದರು. ನಾನು ಸಂಧಾನಕ್ಕೆ ಹೋಗಿಲ್ಲ. ಜಮೀನು ಕಬಳಿಕೆ ವಿರುದ್ಧ ನಾನು ತಕರಾರು ಅರ್ಜಿ ಸಲ್ಲಿಸಿದಾಗ ಪೊಲೀಸರನ್ನು ಕಳುಹಿಸಿದ್ದರು. ನಾಲ್ಕು ವಾಹನಗಳಲ್ಲಿ 20ಕ್ಕೂ ಹೆಚ್ಚು ಜನರನ್ನು ಕಳುಹಿಸಿ ನನ್ನನ್ನು ಎತ್ತಿಹಾಕಿಕೊಂಡು ಬರುವಂತೆ ಹೇಳಿದ್ದರು. ನನ್ನ ಬಾಯಿ ಮುಚ್ಚಿಸಲು ಏನು ಬೇಕೋ ಎಲ್ಲ ಮಾಡಿದ್ದಾರೆ. ಅವರು ಪ್ರಭಾವಿ ಸಚಿವರಿದ್ದಾರೆ’ ಎಂದು ಹೇಳಿದರು.
‘ಕುಮಾರಸ್ವಾಮಿ ಅವರು ₹50 ಲಕ್ಷಕ್ಕಾಗಿ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹಣ ಕೊಡದ ಕಾರಣ ನನ್ನ ಮಗ ಸಿದ್ದಾರ್ಥ ಸಿಂಗ್ ವಿರುದ್ಧ ಸರ್ಕಾರಿ ಜಮೀನು ಕಬಳಿಸಿದ ಆರೋಪ ಮಾಡುತ್ತಿದ್ದಾರೆ. ನನ್ನ ಮಗ ಅವರ ವಿರುದ್ಧ ಮಾನನಷ್ಟ ಕ್ರಿಮಿನಲ್ ಮೊಕದ್ದಮೆ ಹೂಡಲು ತೀರ್ಮಾನಿಸಿದ್ದಾನೆ’ ಎಂದು ಸಚಿವ ಆನಂದ್ ಸಿಂಗ್ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು.
ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್ ಠಾಕೂರ್, ಭಾಮೈದ ಧರ್ಮೇಂದ್ರ ಸಿಂಗ್, ಮಾವ ಅಬ್ದುಲ್ ರಹೀಮ್ ಮತ್ತು ಇತರೆ ಎಂಟು ಜನರ ಹೆಸರಿನಲ್ಲಿ ಸಚಿವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಮಾರ್ಚ್ 19ರಂದು ಗಂಭೀರ ಆರೋಪ ಮಾಡಿದ್ದರು.
***
‘ರೌಡಿಶೀಟರ್ ಹಾಕಿಸಿದ್ದೇನೆ ಎಂದು ಸಚಿವರೇ ಹೇಳಿದ್ದಾರೆ’
‘ನನ್ನ ವಿರುದ್ಧ ರೌಡಿಶೀಟರ್ ಕೇಸ್ ಹಾಕಿಸಿದ್ದೇನೆ ಎಂದು ಸ್ವತಃ ಸಚಿವ ಆನಂದ್ ಸಿಂಗ್ ಅವರೇ ಹೇಳಿದ್ದಾರೆ. ನಾನು ಹಗಲು ಕಳ್ಳತನ ಮಾಡಿ 18 ತಿಂಗಳು ಜೈಲುವಾಸ ಅನುಭವಿಸಿಲ್ಲ. ಅಕ್ರಮ ಗಣಿಗಾರಿಕೆ ನಡೆಸಿಲ್ಲ ಅಥವಾ ಗ್ಯಾಂಗ್ ಕಟ್ಟಿಕೊಂಡು ಜಗಳ ಮಾಡಿಲ್ಲ. ಸಚಿವರೇ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಈಗ ಅವರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ಹೈಕೋರ್ಟ್ ತಡೆ ನೀಡಿದೆ. ಬಳ್ಳಾರಿ ಬ್ರೂಸ್‌ಪೇಟೆ ಠಾಣೆಯಲ್ಲೂ ಇದೇ ರೀತಿ ಕೇಸ್ ಹಾಕಿಸಿದ್ದರು. ಬಳಿಕ ಆ ಕೇಸ್ ವಜಾಗೊಂಡಿತು’ ಎಂದು ನಗರಸಭೆ ಸದಸ್ಯ ಅಬ್ದುಲ್ ಖದೀರ್ ಹೇಳಿದರು.
‘ರೌಡಿಶೀಟರ್‌ಗಳ ಗುಂಪು ಎಂದು ನಮಗೆ ಹೇಳುತ್ತಾರೆ. ಆದರೆ, ಸಚಿವರು ಗುಂಪು ಕಟ್ಟಿಕೊಂಡು ನನ್ನ ಮನೆಗೆ ಬಂದಿದ್ದರು. ಅನಂತರ ಪೊಲೀಸರ ಮೂಲಕ ಅವರ ಕಚೇರಿಗೆ ಕರೆದೊಯ್ದು ನಾಲ್ಕು ಗಂಟೆ ಕೂಡಿ ಹಾಕಿದ್ದರು. ಪೊಲೀಸರ ಮೇಲೆ ಪ್ರಭಾವ ಬೀರಿ ಕಿರಿಕಿರಿ ಕೊಟ್ಟಿದ್ದರು. ಈ ವಿಷಯ ಅಂದಿನ ಎಸ್ಪಿಯವರ ಗಮನಕ್ಕೂ ತರಲಾಗಿತ್ತು’ ಎಂದು ಡಿ. ಪೋಲಪ್ಪ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.