ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು, ಮೇವು, ನರೇಗಾ ಪಿ.ಡಿ ಖಾತೆಯ ಹಣ ಬಳಸಲೇಬೇಕು: ಸಿದ್ದರಾಮಯ್ಯ

Published 21 ಜೂನ್ 2024, 8:22 IST
Last Updated 21 ಜೂನ್ 2024, 8:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ನರೇಗಾ ಉದ್ಯೋಗಕ್ಕೆ ಯಾವ ಕಾರಣಕ್ಕೂ ಹಣದ ಕೊರತೆ ಆಗಬಾರದು, ಪಿ.ಡಿ ಖಾತೆಯ ಹಣವನ್ನು ಅದಕ್ಕಾಗಿ ಬಳಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ಕೆರೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಸಬೇಕು. ಒತ್ತುವರಿಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾದಲ್ಲಿ ಕೆರೆ ಹೂಳು ತೆಗೆದು ಕೆರೆಗಳಿಗೆ ಮರು ಜೀವ ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.

52 ಶುದ್ಧ ನೀರಿನ ಘಟಕಗಳು ಕೆಲಸ ಸ್ಥಗಿತಗೊಳಿಸಿದ್ದರೂ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಕೆಲವು ಬೋರ್ ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಗರಂ ಆದರು. ರಿಪೇರಿ ಮಾಡಿದ್ದು ಇಲಾಖೆಯವರೇ ತಾನೆ? ಪದೇ ಪದೇ ಕೆಟ್ಟು ಹೋಗುವ ರೀತಿ ರಿಪೇರಿ ಯಾಕೆ ಮಾಡ್ತಾರೆ. ಅದರಲ್ಲಿ ಏನಾದರೂ ರಿಪೇರಿಯಾಗದ ಸಮಸ್ಯೆ ಇದೆಯಾ ಪರಿಶೀಲಿಸಿ ಎಂದು ಕಟು ಮಾತುಗಳಲ್ಲೇ ಆದೇಶ ನೀಡಿದರು.

ಪಂಪ್ ಕಳವು:

ಊರಿನ ಹೊರಗೆ ಇರುವ ಕೊಳವೆ ಬಾವಿಗಳ ಮೋಟಾರ್ ಪಂಪ್ ಗಳನ್ನು ಪದೇ ಪದೇ ಕದಿಯುತ್ತಿದ್ದಾರೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಹಾಗಿದ್ದರೆ ಏಕೆ ಇದುವರೆಗೂ ದೂರು ದಾಖಲಿಸಿಲ್ಲ? ಕಳ್ಳರ ಮೇಲೆ ನೀವು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದೆ. ಈ ನಷ್ಟಕ್ಕೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ಮೋಟಾರ್ ಕಳ್ಳರು ಯಾರು ಎನ್ನುವುದು, ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಗೊತ್ತಿರುತ್ತವೆ. ಆದರೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಮಟ್ಕಾ, ಬೆಟ್ಟಿಂಗ್, ಜೂಜು ಹೆಚ್ಚಾಗಿದೆ ಎನ್ನುವ ವರದಿ ಇದೆ. ಇವನ್ನೆಲ್ಲಾ ಸಂಪೂರ್ಣವಾಗಿ ನಿಲ್ಲಿಸಲು ಏಕೆ ಸಾಧ್ಯವಾಗಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪ್ರಶ್ನಿಸಿದರು. ಕೇವಲ ನಿಯಂತ್ರಣ ಸಾಲಲ್ಲ. ಸಂಪೂರ್ಣ ನಿಲ್ಲಿಸಬೇಕು. ಅವರವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೈಂಗಳು ಠಾಣಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಆದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಂದಿನ ಮೂರು ತಿಂಗಳುಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಬಂದ್ ಆಗಬೇಕು. ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಿಎಂ ಎಚ್ಚರಿಸಿದರು.

ಶೌಚಾಲಯ:

ಜಿಲ್ಲೆಯಲ್ಲಿ ಶೌಚಾಲಯಗಳು ಇಲ್ಲದ ಮನೆಗಳು ಇವೆಯೇ ಎಂದು ಸಿಎಂ ಪ್ರಶ್ನಿಸಿದರು. ಇದ್ದಾವೆ ಎಂದು ಅಧಿಕಾರಿಗಳು ವರದಿ ನೀಡಿದರು. ಹೀಗಿದ್ದೂ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದ್ದು ಏಕೆ ಎಂದು ತೀವ್ರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿ, ನೀವು ಕೊಡುವ ತಪ್ಪು ಮಾಹಿತಿಯನ್ನು ನಾವು ಅಧಿವೇಶನದಲ್ಲಿ ಹೇಳುವುದಕ್ಕೆ ಆಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಸರ್ಕಾರಕ್ಕೆ ಸುಳ್ಳು ಮತ್ತು ತಪ್ಪು ಮಾಹಿತಿ ಕೊಡಬಾರದು ಎಂದು ಎಚ್ಚರಿಸಿದರು.

ಪಿಡಿಒ ಗಳ ಮೂಲಕ ಮನೆ ಮನೆ ಸಮೀಕ್ಷೆ ಮಾಡಿ ಎಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ , ಶೌಚಾಲಯಗಳಿದ್ದಿದ್ದರೂ ಅವರು ಏಕೆ ಶೌಚಾಲಯಗಳಿಗಾಗಿ ಅರ್ಜಿ ಸಲ್ಲಿಸುತ್ತಿಲ್ಲ? ಎಷ್ಟು ಶೌಚಾಲಯಗಳ ಅಗತ್ಯ ಇದೆ? ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಸಂಪೂರ್ಣ ವಿವರ ಕೇಳಿದ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಮುಂದಿನ ಸಭೆಯೊಳಗೆ ಸಮೀಕ್ಷೆ ಮುಗಿದು ಶೌಚಾಲಯಗಳ ನಿರ್ಮಾಣ ಆಗಿರಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT