ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆಗೆ ವರ್ಷದ ಸಂಭ್ರಮ: ಅಭಿವೃದ್ಧಿಯ ಗುಟ್ಟೇನು?

ಹೊಸ ಜಿಲ್ಲೆಗೆ ವರ್ಷದ ಸಂಭ್ರಮ; ಹೆಚ್ಚಿನ ಕಾಮಗಾರಿಗೆ ಡಿಎಂಎಫ್‌, ಕೆಕೆಆರ್‌ಡಿಬಿ ಹಣ
Last Updated 2 ಅಕ್ಟೋಬರ್ 2022, 15:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆ ಉದ್ಘಾಟನೆಗೊಂಡು ಭಾನುವಾರ (ಅಕ್ಟೋಬರ್‌ 2ಕ್ಕೆ) ಒಂದು ವರ್ಷ ಪೂರೈಸಿದೆ. ಯಾವುದೇ ಹೊಸ ಜಿಲ್ಲೆಗೆ ಒಂದು ವರ್ಷ ಕಡಿಮೆ ಸಮಯವೇನಲ್ಲ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿದ್ದೇನು? ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳಾಗಿವೆಯೇ? ಇಂಥ ಪ್ರಶ್ನೆಗಳು ಕಾಡುವುದು ಸಹಜ. ಅದರ ಮೇಲೆ ‘ಪ್ರಜಾವಾಣಿ’ ಬೆಳಕು ಚೆಲ್ಲುವ ಕೆಲಸ ಮಾಡಿದೆ.

ಈ ಹಿಂದೆ ರಾಜ್ಯ ಸರ್ಕಾರ ಹೊಸ ಜಿಲ್ಲೆಗಳನ್ನು ರಚಿಸಿದ ಅನುಭವದ ಆಧಾರದ ಮೇಲೆ ನೋಡಿದರೆ ವಿಜಯನಗರ ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳಾಗಿವೆ ಎಂದೇ ಹೇಳಬಹುದು. ಹಿಂದೆ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದಾಗ ಅವುಗಳು ಪೂರ್ಣ ಪ್ರಮಾಣದಲ್ಲಿ ಒಂದು ಜಿಲ್ಲೆಗೆ ಇರಬೇಕಾದ ಎಲ್ಲ ರೀತಿಯ ಸೌಕರ್ಯ, ಸೇವೆಗಳನ್ನು ಕಲ್ಪಿಸಲು ದಶಕಕ್ಕೂ ಹೆಚ್ಚು ಸಮಯ ಬೇಕಾಯಿತು. ಆದರೆ, ಒಂದು ವರ್ಷದ ಕೂಸಾದ ವಿಜಯನಗರ ಜಿಲ್ಲೆ ಈ ವಿಷಯದಲ್ಲಿ ಅಂಬೆಗಾಲಲ್ಲ ಸಣ್ಣ ನಡೆಯೂ ಅಲ್ಲ, ಓಡಲು ಆರಂಭಿಸಿದೆ ಎಂದರೆ ತಪ್ಪಾಗುವುದಿಲ್ಲ.

ಅಂದಹಾಗೆ, ಈ ಓಟಕ್ಕೆ ಹಲವು ಕಾರಣಗಳು ಕೂಡ ಇವೆ. ಈ ಹಿಂದೆ ಹೊಸ ಜಿಲ್ಲೆಗಳಾದಾಗ ಅವುಗಳಿಗೆ ವಿಜಯನಗರಕ್ಕಿರುವ ಸೌಲಭ್ಯಗಳು, ಅನುದಾನ ಇರಲಿಲ್ಲ. ಹಿಂದೆ ಹೊಸ ಜಿಲ್ಲೆಗಳು ರಚನೆಯಾದಾಗ ಏನೇ ಕೆಲಸ ಮಾಡಬೇಕಾದರೂ ರಾಜ್ಯ ಸರ್ಕಾರದ ವಿಶೇಷ ಅನುದಾನಕ್ಕಾಗಿ ಕಾದು ಕೂರಬೇಕಿತ್ತು. ಆದರೆ, ವಿಜಯನಗರದ ಪರಿಸ್ಥಿತಿ ಹಾಗಿಲ್ಲ. ಜಿಲ್ಲಾ ಖನಿಜ ನಿಧಿ (ಡಿಎಂಎಫ್‌) ಇದಕ್ಕೆ ದೊಡ್ಡ ವರವಾಗಿದೆ. ಹೊಸ ಜಿಲ್ಲೆಯಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಈ ಅನುದಾನದಿಂದಲೇ ಎನ್ನುವುದು ಗಮನಾರ್ಹ ಸಂಗತಿ. ಇನ್ನು, ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಜಿಲ್ಲೆ ಬರುವುದರಿಂದ ಮೂಲಸೌಕರ್ಯಕ್ಕೆ ಕೆಕೆಆರ್‌ಡಿಬಿಯಿಂದಲೂ ಅನುದಾನ ಹರಿದು ಬರುತ್ತಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ಹೆಚ್ಚಿನ ಕೆಲಸಗಳು ಭರದಿಂದ ನಡೆಯುತ್ತಿವೆ.

ಟಿಎಸ್‌ಪಿಯಲ್ಲಿ ಮೂರು ಅಂತಸ್ತಿನ ಜಿಲ್ಲಾ ಸಂಕೀರ್ಣದ ಕಟ್ಟಡ ನವೀಕರಣ ಕಾಮಗಾರಿ ಪೂರ್ಣಗೊಳ್ಳಲು ಬಂದಿದ್ದು, ಎರಡ್ಮೂರು ತಿಂಗಳಲ್ಲಿ ಪ್ರಮುಖ ಕಚೇರಿಗಳು ಅಲ್ಲಿಂದಲೇ ಕೆಲಸ ನಿರ್ವಹಿಸಲಿವೆ. ಡಿಜಿಟಲ್‌ ಗ್ರಂಥಾಲಯ, ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ, ಜೋಳದರಾಶಿ ಗುಡ್ಡದ ಅಭಿವೃದ್ಧಿ ಕೆಲಸಗಳು ಚುರುಕಿನಿಂದ ನಡೆಯುತ್ತಿವೆ. ಇತ್ತೀಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಭೂಮಿಪೂಜೆ ನೆರವೇರಿಸಲಾಗಿದ್ದು, ಒಂದೂವರೆ ವರ್ಷದೊಳಗೆ ಹೊಸ ಕಚೇರಿ ತಲೆ ಎತ್ತಲಿದೆ. ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸಿ, ₹129 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಇಷ್ಟರಲ್ಲೇ ಕೆಲಸ ಆರಂಭವಾಗಲಿದೆ. ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸವೂ ಪ್ರಗತಿಯಲ್ಲಿದೆ. ಈಗಾಗಲೇ ಪ್ರಮುಖ ಇಲಾಖೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಚುರುಕಿನಿಂದ ಕೆಲಸಗಳು ನಡೆಯುತ್ತಿವೆ.

ಜಮೀನು ದುಬಾರಿ

ಹೊಸ ಜಿಲ್ಲೆ ರಚನೆಯಿಂದ ಭೌಗೋಳಿಕವಾಗಿ ದೂರದ ಪ್ರದೇಶದ ಜನ ಹೊಸಪೇಟೆ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಅನುಕೂಲವಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಹೂವಿನಹಡಗಲಿ, ಹರಪನಹಳ್ಳಿಯ ಕೆಲ ಗ್ರಾಮಸ್ಥರು ಸುಮಾರು 200 ಕಿ.ಮೀ ಕ್ರಮಿಸಬೇಕಿತ್ತು. ಈಗ ಅದು ತಪ್ಪಿದಂತಾಗಿದೆ.

ಇದೇ ವೇಳೆ ಜಿಲ್ಲೆ ಘೋಷಣೆಯಾದ ನಂತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದರ ಬೆನ್ನಲ್ಲೇ ಭೂಕಬಳಿಕೆ ಪ್ರಕರಣಗಳು ಹೆಚ್ಚಾಗಿವೆ. ಇನ್ನೊಂದೆಡೆ ಜಿಲ್ಲಾ ಕೇಂದ್ರದ ಸುತ್ತಮುತ್ತ ಮನೆ, ವಾಣಿಜ್ಯ ಬಾಡಿಕೆ ಏಕಾಏಕಿ ಹೆಚ್ಚಾಗಿದೆ. ಜಮೀನಿನ ಬೆಲೆ ದುಬಾರಿಯಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗದವರ ಮನೆ ಕಟ್ಟಬೇಕೆಂಬ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಜಿಲ್ಲೆಗೆ ಒಂದೂವರೆ, ಉದ್ಘಾಟನೆಗೆ ವರ್ಷ

ಅಂದಹಾಗೆ, ವಿಜಯನಗರ ಹೊಸ ಜಿಲ್ಲೆಯೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು 2021ರ ಫೆ. 8ರಂದು. ಕೋವಿಡ್‌ ಕಾರಣದಿಂದ ತಕ್ಷಣವೇ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಕೋವಿಡ್‌ನಿಂದ ಪರಿಸ್ಥಿತಿ ಸಹಜಗೊಂಡ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2021ರ ಅ. 2ರಂದು ಖುದ್ದು ಜಿಲ್ಲೆಗೆ ಬಂದು ಜಿಲ್ಲೆ ಉದ್ಘಾಟಿಸಿದ್ದರು. ಬಿ.ಎಸ್‌. ಯಡಿಯೂರಪ್ಪನವರು ಜಿಲ್ಲೆ ರಚಿಸಿ ಘೋಷಿಸಿದ್ದರು. ಉದ್ಘಾಟನೆ ಕಂಡಿದ್ದು ಬೊಮ್ಮಾಯಿ ಕಾಲದಲ್ಲಿ. ಅಂದಹಾಗೆ, ಉದ್ಘಾಟನಾ ಸಮಾರಂಭಕ್ಕೆ ಇಬ್ಬರೂ ಸಾಕ್ಷಿಯಾಗಿದ್ದರು.

‘ಒಂದು ವರ್ಷದೊಳಗೆ ಸಾಕಷ್ಟು ಕೆಲಸ’

‘ವಿಜಯನಗರ ಜಿಲ್ಲೆ ಉದ್ಘಾಟನೆಗೊಂಡ ಒಂದು ವರ್ಷದೊಳಗೆ ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಮೊದಲನೇ ಹಂತದಲ್ಲಿ ಪ್ರಮುಖ ಕಚೇರಿಗಳು ಆಗಿವೆ. ಕಂದಾಯ ಯೋಜನೆಯಡಿ ಆಶ್ರಯ ಮನೆಗಳಿಗೆ ಜಾಗ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ ಕಚೇರಿ ಸ್ಥಾಪನೆಗೂ ಒಪ್ಪಿಗೆ ಸಿಕ್ಕಿದೆ. ಈ ವರ್ಷ ಇನ್ನಷ್ಟು ಕೆಲಸಗಳಾಗಲಿವೆ. ಜಿಲ್ಲಾ ಖನಿಜ ನಿಧಿ (ಡಿಎಂಎಫ್‌) ಹಾಗೂ ಕೆಕೆಆರ್‌ಡಿಬಿ ಅನುದಾನದಿಂದ ಬಹಳ ಅನುಕೂಲವಾಗಿದೆ. ಈ ಹಿಂದೆ ಬೇರೆ ಹೊಸ ಜಿಲ್ಲೆಗಳಾದಾಗ ಈ ಅನುಕೂಲ ಇರಲಿಲ್ಲ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ತಿಳಿಸಿದರು.

ದಕ್ಷ ಅಧಿಕಾರಿಗಳ ತಂಡ

ವಿಜಯನಗರ ಜಿಲ್ಲೆ ಅಭಿವೃದ್ಧಿಯ ನಾಗಾಲೋಟದಲ್ಲಿ ಮುಂದುವರೆಯಲು ಜಿಲ್ಲೆಯ ಆಯಕಟ್ಟಿನಲ್ಲಿರುವ ದಕ್ಷ ಅಧಿಕಾರಿಗಳು ಕೂಡ ಕಾರಣವೆಂದರೆ ತಪ್ಪಾಗುವುದಿಲ್ಲ.

ಅದರಲ್ಲೂ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಜಿಲ್ಲೆಗೆ ಬಂದ ದಿನದಿಂದಲೇ ಹೊಸ ಜಿಲ್ಲೆ ಕಟ್ಟುವುದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿಗೊಳಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ‘ಸಕಾಲ’ದಲ್ಲಿ ವಿಜಯನಗರ ಜಿಲ್ಲೆ 2ನೇ ಸ್ಥಾನ ಪಡೆದಿದ್ದೇ ಇದಕ್ಕೆ ಸಾಕ್ಷಿ. ಮೈಗಳ್ಳ ಅಧಿಕಾರಿ, ಸಿಬ್ಬಂದಿಗೆ ಬಿಸಿ ಮುಟ್ಟಿಸಿ ಕೆಲಸ ಮಾಡುತ್ತಿದ್ದಾರೆ. ಭೂಒತ್ತುವರಿಗೂ ಕಡಿವಾಣ ಹಾಕಲು ಕ್ರಮ ಜರುಗಿಸಿದ್ದಾರೆ. ಇನ್ನು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರ ದಕ್ಷ ಕಾರ್ಯವೈಖರಿಯಿಂದ ಪೊಲೀಸ್‌ ಇಲಾಖೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತೀವ್ರ ಗತಿಯಲ್ಲಿ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೋಯರ್‌ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲ, ಈ ಮೂರೂ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳು ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದರಿಂದ ಜನರಿಗೂ ಹತ್ತಿರವಾಗಿದ್ದಾರೆ.

ಆನಂದ್‌ ಸಿಂಗ್‌ ಕಾಳಜಿಯೇಕೇ?

ವಿಜಯನಗರ ಜಿಲ್ಲೆಯನ್ನು ತ್ವರಿತ ಗತಿಯಲ್ಲಿ ಕಟ್ಟಬೇಕೆಂಬ ಉಮೇದಿನಿಂದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರು. ಅದರ ತರುವಾಯ 2019ರಲ್ಲಿ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದರು. ಹೊಸ ಜಿಲ್ಲೆ ರಚನೆಗಾಗಿ ಬಿಜೆಪಿ ಸೇರಿರುವೆ ಎಂದು ತಿಳಿಸಿದ್ದರು. ಅದರಂತೆ ಜಿಲ್ಲೆ ರಚನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಈಗ ಕೆಲಸಗಳನ್ನು ಬೇಗ ಮಾಡಿಸುತ್ತಿದ್ದಾರೆ. ಅದಕ್ಕೆ ಕಾರಣ ಮುಂಬರುವ ವಿಧಾನಸಭೆ ಚುನಾವಣೆ. ಬೇಗ ಕೆಲಸಗಳಾದರೆ ಚುನಾವಣೆಯಲ್ಲಿ ಅದರ ಪ್ರಯೋಜನವಾಗಬಹುದು ಎಂಬ ಲೆಕ್ಕಾಚಾರ ಅವರದು. ಹೋದಲ್ಲಿ, ಬಂದಲ್ಲಿ ವಿಜಯನಗರದ ಜಪವೂ ಮಾಡುತ್ತಿದ್ದಾರೆ. ಜನ ಹೇಗೆ ಸ್ವೀಕರಿಸುತ್ತಾರೋ ನೋಡಬೇಕಿದೆ. ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT