ಶನಿವಾರ, ಮಾರ್ಚ್ 25, 2023
29 °C
ಇನ್ನೂ ಆರಂಭಗೊಳ್ಳದ ಭತ್ತ ಖರೀದಿ ಕೇಂದ್ರ

ಭತ್ತ ಮಾರಾಟ ಮಾಡದೆ ಅತಂತ್ರ; ಬೆಳೆಗಾರರಿಗೆ ಸಂಕಷ್ಟ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಭತ್ತ ಖರೀದಿ ಕೇಂದ್ರ ಆರಂಭಿಸದ ಕಾರಣ ಅವಳಿ ಜಿಲ್ಲೆಯ ಭತ್ತ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪದಲ್ಲಿ ಭತ್ತ ಖರೀದಿ ಕೇಂದ್ರಗಳಿವೆ. ಒಂದುವರೆ ವರ್ಷದ ಹಿಂದೆ ಕೋವಿಡ್‌ ಲಾಕ್‌ಡೌನ್‌ ಜಾರಿಯಾದಾಗ ಭತ್ತ ಖರೀದಿ ಕೇಂದ್ರ ಮುಚ್ಚಲಾಗಿತ್ತು. ಆಗ ಬಾಗಿಲು ಮುಚ್ಚಿದ ಕೇಂದ್ರಗಳು ಇದುವರೆಗೆ ತೆರೆದಿಲ್ಲ.

ಅವಳಿ ಜಿಲ್ಲೆಯ ಹೊಸಪೇಟೆ, ಕಂಪ್ಲಿ, ಸಿರುಗುಪ್ಪ, ಕುರುಗೋಡು, ಬಳ್ಳಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಒಂದುವರೆ ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಸಲ ಭತ್ತದ ಇಳುವರಿ ಉತ್ತಮವಾಗಿ ಬಂದಿದೆ. ಆದರೆ, ರೈತರಿಗೆ ಅದನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸತತ ಮಳೆ ಕಾಟದಿಂದ ರೈತರಿಗೆ ಅದನ್ನು ಸಂಗ್ರಹಿಸಿಡುವುದು ಬಹಳ ಕಷ್ಟವಾಗುತ್ತಿದೆ.

ಸಾಲ ಮಾಡಿ ಬೆಳೆ ಬೆಳೆದ ಸಣ್ಣ ರೈತರಿಗೆ ಬೇಗ ಮಾರಾಟ ಮಾಡುವ ಅನಿವಾರ್ಯತೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಮಧ್ಯವರ್ತಿಗಳು ಅತಿ ಕಡಿಮೆ ಬೆಲೆಗೆ ಭತ್ತ ಖರೀದಿಸುತ್ತಿದ್ದಾರೆ. ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಪ್ರತಿ ಕ್ವಿಂಟಲ್‌ ಭತ್ತಕ್ಕೆ ಸರ್ಕಾರ ₹1,810 ನಿಗದಿಪಡಿಸಿದೆ. ಸೆಪ್ಟೆಂಬರ್‌ನಲ್ಲಿ ₹1700ರಿಂದ ₹1800ರ ಬೆಲೆಯಲ್ಲಿ ಮಾರಾಟವಾಗಿದೆ. ಈಗ ಎಲ್ಲ ರೈತರು ಭತ್ತ ಕಟಾವು ಮಾಡಿದ್ದಾರೆ. ಮಧ್ಯವರ್ತಿಗಳು ₹1200ರಿಂದ ₹1250ಕ್ಕೆ ಕೇಳುತ್ತಿದ್ದಾರೆ. ಖರೀದಿ ಕೇಂದ್ರ ಶೀಘ್ರ ಆರಂಭಿಸದಿದ್ದರೆ ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಭತ್ತ ಖರೀದಿ ಕೇಂದ್ರಗಳಿದ್ದರೆ ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬಹುದು. ಆದರೆ, ಅವುಗಳು ಮುಚ್ಚಿರುವುದರಿಂದ ಮಧ್ಯವರ್ತಿಗಳು ಆಡಿದ್ದೇ ಆಟ ಎಂಬಂತಾಗಿದೆ. ಸಣ್ಣ ರೈತರಿಗೆ ಭತ್ತ ದಾಸ್ತಾನು ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಅವರು ಅನಿವಾರ್ಯವಾಗಿ ಮಾರುಕಟ್ಟೆಗೆ ಸಾಗಿಸಬೇಕಾಗುತ್ತದೆ. ಇದನ್ನು ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ತಿಳಿಸಿದರು.

ಈ ಸಂಬಂಧ ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು