ಹೊಸಪೇಟೆ: ಜಿ 20 ಸಭೆ ಮುಗಿಯುವ ತನಕ ಹಂಪಿ ಗತವೈಭವ ಪಡೆದಂತೆ ಕಂಗೊಳಿಸುತ್ತಿತ್ತು. ಬಯಲು ವಸ್ತುಸಂಗ್ರಹಾಲಯದಲ್ಲಿ ಸುತ್ತಾಡುವುದೇ ಮುದ ಕೊಡುವ ವಿಷಯವಾಗಿತ್ತು. ಆದರೆ ಸಭೆ ಮುಗಿದು ಎರಡು ವಾರ ಕಳೆದಿಲ್ಲ, ಪ್ರವಾಸಿಗರಿಗೆ ಪ್ರಯಾಸ ಶುರುವಾಗಿದೆ, ನಗುಮೊಗದಿಂದ ಸೇವೆ ಸಲ್ಲಿಸುತ್ತಿದ್ದ ಬ್ಯಾಟರಿ ವಾಹನ ಚಾಲಕಿಯರಿಗೆ ಪಾಳಿಯೇ ಇಲ್ಲದ ಕೆಲಸವೇ ಹೊರೆಯಾಗಿದೆ.
‘ಮಹಿಳಾ ಸಬಲೀಕರಣದ ಭಾಗವಾಗಿ ಸ್ಥಳೀಯ ಮಹಿಳೆಯರಿಗೇ ಬ್ಯಾಟರಿ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯದೇ, ಆದರೆ ಅವರು ಬೆಳಿಗ್ಗೆ 8ಕ್ಕೆ ಕರ್ತವ್ಯಕ್ಕೆ ಬಂದರೆ ಸಂಜೆ 7ರವರೆಗೂ ವಾಹನ ಚಲಾಯಿಸುತ್ತಲೇ ಇರಬೇಕಾಗಿದೆ. ಹೆಣ್ಣು ಮಕ್ಕಳೆಂದ ಮೇಲೆ ಅವರಿಗೂ ಕೆಲವೊಂದು ದೈಹಿಕ ತೊಂದರೆಗಳು ಇರುತ್ತವೆ, ವಿರಾಮ ಬೇಕಾಗುತ್ತದೆ. ಪಾಳಿ ವ್ಯವಸ್ಥೆ ಮಾಡದೆ ಈ ರೀತಿ ದುಡಿಸುವುದು ಸರಿಯೇ?’ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ಪ್ರಶ್ನಿಸಿದರು.
ವಿಜಯ ವಿಠ್ಠಲ ದೇವಸ್ಥಾನಕ್ಕೆ ಹೋಗಬೇಕಿದ್ದರೆ ಬ್ಯಾಟರಿ ವಾಹನ ಅವಲಂಬನೆ ಅನಿವಾರ್ಯ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳಿಲ್ಲ, ಹೀಗಾಗಿ ವೃದ್ಧರು, ಮಹಿಳೆಯರು ಹಾಗೂ ಇತರ ಪ್ರವಾಸಿಗರಿಗೆ ಸರದಿಯಲ್ಲಿ ಕಾಯುವುದೇ ಕೆಲಸವಾಗುತ್ತಿದೆ. ಒಟ್ಟಾರೆ ವ್ಯವಸ್ಥೆ ಸುಧಾರಣೆ ಆಗಲೇಬೇಕು‘ ಎಂದು ಅವರು ಹೇಳಿದರು.
ಕುಡಿಯಲು ನೀರು ಕೊಡಿ: ‘ಮಹಾನವಮಿ ದಿಬ್ಬದ ಬಳಿ ಕುಡಿಯಲು ನೀರಿಲ್ಲ, ಶೌಚಾಲಯ ಇಲ್ಲ, ವಿಶ್ರಾಂತಿ ಕೊಠಡಿ ಇಲ್ಲ. ರಾಣಿ ಸ್ನಾನಗೃಹದ ಬಳಿ ಸಹ ಕುಡಿಯಲು ನೀರಿಲ್ಲ. ಇಲ್ಲಿಗೆ ಸಾವಿರಾರು ಜನ ಬರುತ್ತಲೇ ಇರುತ್ತಾರೆ. ಇಂತಹ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲು ಯಾವ ನಿಯಮ ಅಡ್ಡಿ ಆಗುತ್ತದೆ ಎಂದು ಭಾರತೀಯ ಪುರಾತತ್ವ ಇಲಾಖೆ ಹೇಳಬೇಕು’ ಎಂದು ಕಮಲಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ಕೊರವರ ಭೀಮಣ್ಣ ಪ್ರಶ್ನಿಸಿದರು.
‘ಲೋಟಸ್ ಮಹಲ್, ಆನೆಸಾಲು ಕಡೆಯಲ್ಲೂ ಪ್ರವಾಸಿಗರಿಗೆ ಅಗತ್ಯದ ಸೌಲಭ್ಯ ಇಲ್ಲ. ಎಲ್ಲಿ ಏನಿದೆ ಎಂಬ ಮಾಹಿತಿಯ ಫಲಕವೂ ಇಲ್ಲ. ಮಳೆಗಾಲದಲ್ಲಿ ಹಂಪಿ ನೋಡಲು ಚೆಂದ, ಆದರೆ ಪ್ರವಾಸಿಗರಿಗೆ ಮಾತ್ರ ಹಿಂಸೆ ತಪ್ಪಿದ್ದಲ್ಲ‘ ಎಂದು ಅವರು ಹೇಳಿದರು.
ಕೆಸರಲ್ಲಿ ಹೂತ ಬಸ್: ಶನಿವಾರ ಕೆಕೆಆರ್‌ಟಿಸಿ ಬಸ್ಸೊಂದು ವಿರೂಪಾಕ್ಷ ದೇವಸ್ಥಾನ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಕೆಸರು ಮಣ್ಣಲ್ಲಿ ಹೂತುಕೊಂಡಿತು. ಕೊನೆಗೆ ಹತ್ತಾರು ಮಂದಿ ಬಸ್ಸನ್ನು ನೂಕಿ, ಕೆಸರಿನ ಜಾಗಕ್ಕೆ ಕಲ್ಲು ಹಾಕಿ ಬಸ್ಸನ್ನು ಮೇಲೆತ್ತಬೇಕಾಯಿತು. ಇದೇ ಸ್ಥಳದಲ್ಲಿ ಎರಡು ವಾರದ ಹಿಂದೆ ಸುಂದರ ವಾಹನ ನಿಲುಗಡೆ ವ್ಯವಸ್ಥೆ ಇತ್ತು. ಏಕೆಂದರೆ ಅದು ಜಿ 20 ಸಭೆಗೆ ಬರುವ ಅಧಿಕಾರಿಗಳು, ಇತರ ವಾಹನಗಳ ನಿಲುಗಡೆಯ ತಾಣವಾಗಿತ್ತು!
ವಿರೂಪಾಕ್ಷ ದೇವಸ್ಥಾನದ ಮುಂಭಾಗ ಕೆಸರು ಗದ್ದೆಯಂತಹ ಸ್ಥಿತಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರ ಪರದಾಟ ಜನತಾ ಕಾಲೋನಿ –ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.