ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ರೈತರ ಜೀವನಾಡಿ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್ ಶೀಘ್ರ ದುರಸ್ತಿಗೊಳಿಸಿ ನೀರು ಸಂಗ್ರಹಣೆ ಉಳಿಸಿಕೊಳ್ಳುವುದು ಮತ್ತು ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ನೇತೃತ್ವದಲ್ಲಿ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಬುಧವಾರ ಹೊಸಪೇಟೆಯಲ್ಲಿ ಮನವಿ ಸಲ್ಲಿಸಲಾಯಿತು.
ಮಾಲವಿ ಜಲಾಶಯದಲ್ಲಿ 2ಟಿಎಂಸಿ ನೀರು ಸಂಗ್ರಹಗೊಳ್ಳುತ್ತದೆ. ಈ ಹಿಂದೆ ಶಾಸಕರಾಗಿದ್ದ ಎಲ್.ಬಿ.ಪಿ. ಭೀಮನಾಯ್ಕ ಅವರು ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಸಿ.ಎಂ ಆಗಿದ್ದ ಅವಧಿಯಲ್ಲಿ ₹165 ಕೋಟಿ ಅನುದಾನ ಒದಗಿಸಿದ ಪರಿಣಾಮವಾಗಿ ತುಂಗಭದ್ರಾ ಜಲಾಶಯದಿಂದ ನೀರು ಹರಿದು ಬರುತ್ತಿದೆ. ಆದರೆ ಮಾಲವಿ ಜಲಾಶಯದ 9ನೇ ಕ್ರಸ್ಟ್‌ಗೇಟ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನೀರು ಹಗರಿಹಳ್ಳದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತದೆ. ಕೂಡಲೇ ಕ್ರಸ್ಟ್‌ಗೇಟ್ ದುರಸ್ತಿ ಮಾಡಿಸಬೇಕು. ಎಡ ಮತ್ತು ಬಲದಂಡೆ ಕಾಲುವೆಗಳನ್ನು ಸುಸ್ಥಿತಿಯಲ್ಲಿರಿಸಬೇಕು ಎಂದು ಅಕ್ಕಿ ತೋಟೇಶ್ ಒತ್ತಾಯಿಸಿದರು.
ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ ಸರ್ಕಾರಿ ಪದವಿ ಕಾಲೇಜ್ ಆರಂಭಿಸುವಂತೆ ಜಿಲ್ಲಾ ಕೇಂದ್ರದವರೆಗೂ ಪಾದಯಾತ್ರೆ ನಡೆಸಲಾಗಿದೆ. ಆದರೆ ಇದುವರೆಗಿನ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಕಾಲೇಜು ಆರಂಭಿಸಬೇಕು, ತುಂಗಭದ್ರಾ ಜಲಾಶಯದಿಂದ ಮೂರುವರೆ ಸಾವಿರ ಎಕರೆ ನೀರಾವರಿ ಪ್ರದೇಶವಾಗುವ ಗ್ರಾಮದ ಏತನೀರಾವರಿಯ 2ನೇ ಹಂತದ ಯೋಜನೆಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಕೂಡಲೇ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು.
ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ವೆಂಕೋಬಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗೌರಜ್ಜನವರ ಗಿರೀಶ್, ಸುರೇಶ್ ಯಳಕಪ್ಪನವರ, ಐ.ಟಿ.ಕೊಟ್ರೇಶ್, ಅಂಬಾಡಿ ಮಹೇಶ್, ವಸಂತಕುಮಾರ ಜನ್ನು ಇದ್ದರು.