ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವರ್ಣ ಧ್ವಜದೊಂದಿಗೆ ಕೇಸರಿ ಧ್ವಜ ಎಂಬರ್ಥದಲ್ಲಿ ಈಶ್ವರಪ್ಪ ಹೇಳಿಕೆ: ಶಶಿಕಲಾ

Last Updated 20 ಫೆಬ್ರುವರಿ 2022, 12:06 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ತ್ರಿವರ್ಣ ಧ್ವಜವನ್ನು ಇಳಿಸಿಬಿಟ್ಟು ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಎಲ್ಲೂ ಹೇಳಿಲ್ಲ. ತ್ರಿವರ್ಣ ಧ್ವಜದೊಂದಿಗೆ ಕೇಸರಿ ಧ್ವಜ ಕೂಡ ಇನ್ನೊಂದು ಕಡೆ ಇರಬಹುದು ಎಂಬರ್ಥದಲ್ಲಿ ಹೇಳಿದ್ದಾರೆ. ಹೀಗಾಗಿ ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಅಂತ ಅನಿಸುವುದಿಲ್ಲ’ ಎಂದು ಮುಜರಾಯಿ ಮತ್ತು ವಕ್ಫ್‌ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಭಾನುವಾರ ನಗರದಲ್ಲಿ 67 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಕೊಟ್ಟಿರುವುದು ಬೇಜವಾಬ್ದಾರಿ ಹೇಳಿಕೆಯಲ್ಲ. ಅವರು ಹೇಳಿರುವುದು ಒಂದು ಅರ್ಥದಲ್ಲಿ, ನಾವು ಅರ್ಥ ಮಾಡಿಕೊಂಡಿದ್ದು ಬೇರೆ ರೀತಿಯಲ್ಲಿ. ರಾಷ್ಟ್ರ ಧ್ವಜದ ಬಗ್ಗೆ ಯಾರೂ ಚಕಾರ ಎತ್ತುವಂತಹದ್ದಲ್ಲ. ಐದು ವರ್ಷದ ಮಗುವಿನಿಂದ 90 ವರ್ಷದ ವೃದ್ಧನ ವರೆಗೆ ಎಲ್ಲರೂ ಗೌರವಿಸುತ್ತಾರೆ. ಅವರು ಧ್ವಜವನ್ನು ಅಪಮಾನಿಸುವ ರೀತಿಯಲ್ಲಿ ಹೇಳಿಕೆ ಕೊಡುವ ಪ್ರೇಮಯವೇ ಇಲ್ಲ. ಅವರು ಬಹಳ ಹಿರಿಯರು. ವಿರೋಧಪಕ್ಷದವರು ಈಶ್ವರಪ್ಪನವರ ಹೇಳಿಕೆಯ ನೆಪ ಮಾಡಿಕೊಂಡು ಅಧಿವೇಶನ ನಡೆಯಲು ಬಿಡುತ್ತಿಲ್ಲ. ಅಭಿವೃದ್ಧಿ ಕುರಿತು ಚರ್ಚೆಗಳು ಆಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಅಂಜನಾದ್ರಿ ಬಗ್ಗೆ ಸರ್ಕಾರದಿಂದ ಅಧಿಕೃತ ಹೇಳಿಕೆ:

‘ಅಂಜನಾದ್ರಿ ಪರ್ವತದ ಬಗ್ಗೆ ಅನೇಕ ಐತಿಹಾಸಿಕ ಉಲ್ಲೇಖಗಳಿವೆ. ರಾಮಾಯಣದಲ್ಲಿ ಕಿಷ್ಕಿಂದೆಯ ಉಲ್ಲೇಖವಿದೆ. ಅಂಜನಾದ್ರಿ ಆಂಜನೇಯ ಹುಟ್ಟಿರುವ ಸ್ಥಳ. ನಿತ್ಯ ಅನೇಕ ಭಕ್ತಾದಿಗಳು ಹೋಗಿ ದರ್ಶನ ಪಡೆಯುತ್ತಾರೆ. ತಿರುಪತಿಯಲ್ಲಿ ಆಂಜನೇಯ ಹುಟ್ಟಿದ್ದು, ಅದನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಟಿಟಿಡಿ ಹೇಳುತ್ತಿರುವುದು ಸರಿಯಲ್ಲ. ಇಷ್ಟರಲ್ಲೇ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಪಂಡಿತರು, ಇತಿಹಾಸಕಾರರ ಸಭೆ ಕರೆದು, ಚರ್ಚಿಸಿದ ನಂತರ ರಾಜ್ಯ ಸರ್ಕಾರದಿಂದ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಲಾಗುವುದು’ ಎಂದು ಪ್ರಶ್ನೆಗೆ ಉತ್ತರಿಸಿದರು.

‘ಅಂಜನಾದ್ರಿಯಲ್ಲಿ ಆಂಜನೇಯ ಹುಟ್ಟಿಲ್ಲ ಎಂದು ಆಂಧ್ರ ಸರ್ಕಾರ ಆಧಾರರಹಿತ ಹೇಳಿಕೆ ನೀಡುತ್ತಿದೆ. ಯಾರಿಂದಲೂ ಇತಿಹಾಸ ತಿರುಚಲು ಸಾಧ್ಯವಿಲ್ಲ. ರಾಮಾಯಣದಲ್ಲಿ ಬರುವ ಅನೇಕ ಸ್ಥಳಗಳು ನಮ್ಮೆದುರು ಜೀವಂತ ಸಾಕ್ಷಿಯಾಗಿ ಇವೆ. ಈ ವಿಷಯವನ್ನು ದೊಡ್ಡ ವಿವಾದ ಮಾಡುವುದು ಬೇಡ’ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT