ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಭವಿಷ್ಯದ ಸಿ.ಎಂ. ಎಂದು ಹೇಳಿದರೆ ತಪ್ಪೇನಿದೆ? ಪರಮೇಶ್ವರ್‌

Last Updated 5 ಜನವರಿ 2023, 11:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಭವಿಷ್ಯದ ಸಿ.ಎಂ. ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ?’

ಹೀಗೆಂದು ಪ್ರಶ್ನಿಸಿದ್ದು ಮಾಜಿ ಉಪಮುಖ್ಯಮಂತ್ರಿಯೂ ಆದ ಕಾಂಗ್ರೆಸ್‌ ಮುಖಂಡ ಡಾ. ಜಿ. ಪರಮೇಶ್ವರ್‌ ಅವರು. ಚಿತ್ರದುರ್ಗದಲ್ಲಿ ಜನವರಿ 8ರಂದು ನಡೆಯಲಿರುವ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಜಾತಿ/ಪಂಗಡಗಳ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರು. ಕೆಲ ಶಾಸಕರು ಅವರು ಭವಿಷ್ಯದ ಸಿ.ಎಂ. ಎಂದು ಹೇಳಿದರೆ ತಪ್ಪೇನಿದೆ? ಅದು ಅವರವರ ಅಪೇಕ್ಷೆ. ಕೆಲವರು ಸಿದ್ದರಾಮಯ್ಯ, ಕೆಲವರು ಡಿ.ಕೆ. ಶಿವಕುಮಾರ, ಮತ್ತೆ ಕೆಲವರಿಗೆ ಬೇರೆಯವರು ಸಿ.ಎಂ. ಆಗಬೇಕೆಂಬುದು ಆಸೆ ಇರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಸಿ.ಎಂ. ಆಯ್ಕೆಗೆ ಒಂದು ಪದ್ಧತಿ ಇದೆ. ಅದರಂತೆಯೇ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.

ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಸಿ.ಎಂ. ಆಗಬೇಕೆಂಬ ವಿಷಯದಲ್ಲಿ ಯಾರೂ ಮೌನವಾಗಿಲ್ಲ. ಸಂದರ್ಭ ಬಂದಾಗ ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಚುನಾವಣೆ ನಂತರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದು, ಶಾಸಕರ ಅಭಿಪ್ರಾಯ ಪಡೆದು ಸಿ.ಎಂ. ಆಯ್ಕೆ ಮಾಡುತ್ತಾರೆ. ಬಿಜೆಪಿಯವರನ್ನು ಮೆಚ್ಚಿಸಲು ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಗೆಲ್ಲಿಸಿ ಎಂದು ಹೇಳಿದರೆ ತಪ್ಪೇನೂ?:

‘ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರು. ಸ್ವಾಭಾವಿಕವಾಗಿ ಒಂದು ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋದಾಗ ಕಾಂಗ್ರೆಸ್ ಗೆಲ್ಲಿಸಿ, ನಮ್ಮ ಮುಖಂಡನನ್ನು ಗೆಲ್ಲಿಸಿ ಎಂದು ಹೇಳಿದರೆ ತಪ್ಪೇನೂ? ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯ್ಕ ಅವರಿಗೆ ಮತ್ತೆ ಟಿಕೆಟ್‌ ಕೊಡುವ ಸೂಚನೆಗಳಿವೆ. ಹೀಗಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಹಾಗೇ ಹೇಳಿರಬಹುದು. ನಾನು ಕೂಡ ಒಬ್ಬ ಶಾಸಕನ ಕ್ಷೇತ್ರಕ್ಕೆ ಹೋದರೆ ಅವರನ್ನು ಗೆಲ್ಲಿಸಿ ಎಂದು ಹೇಳಿದರೆ ತಪ್ಪೇನು?’ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.

ಬರುವ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಇರುವುದರಿಂದಲೇ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಅದು ಬೇರೆ ಪಕ್ಷದಲ್ಲಿ ಇಲ್ಲ. ಅರ್ಜಿ ಹಾಕಿದವರೆಲ್ಲರೂ ಸಮರ್ಥರಿದ್ದಾರೆ. ಅನೇಕ ಮಾನದಂಡಗಳನ್ನು ಅನುಸರಿಸಿ ಅಭ್ಯರ್ಥಿಗಳ ಹೆಸರು ಆಯ್ಕೆ ಮಾಡಲಾಗುತ್ತದೆ. ಮಿಕ್ಕುಳಿದವರು ಸಹಕರಿಸುತ್ತಾರೆ ಎಂದರು.

ಶಾಸಕರಾದ ಎಲ್‌.ಬಿ.ಪಿ. ಭೀಮ ನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ, ಈ. ತುಕಾರಾಂ, ಮುಖಂಡರಾದ ಎಚ್‌.ಸಿ. ಮಹದೇವಪ್ಪ, ಶಿವರಾಜ ತಂಗಡಗಿ, ಸಿರಾಜ್‌ ಶೇಖ್‌, ಚಂದ್ರಪ್ಪ, ಗುಜ್ಜಲ್‌ ರಘು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ರಾಜಶೇಖರ್‌ ಹಿಟ್ನಾಳ್‌ ಇತರರಿದ್ದರು.

‘ನಾಯಿ ಮರಿ ವಿವಾದ ಬೆಳೆಸುವ ಅಗತ್ಯವಿಲ್ಲ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಾಯಿ ಮರಿ ತರಹ ಮಾಡುತ್ತಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಅದಕ್ಕೆ ಸಿ.ಎಂ ನಾನು ನಿಯತ್ತಿನ ನಾಯಿ ಎಂದು ಹೇಳಿದ್ದಾರೆ. ಈ ವಿವಾದ ಕುರಿತು ನೀವೇನೂ ಹೇಳುವಿರಿ?’ ಎಂದು ಪತ್ರಕರ್ತರು ಕೇಳಿದಾಗ, ಈಗಾಗಲೇ ಸಿದ್ದರಾಮಯ್ಯನವರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಯಾವ ಹಿನ್ನೆಲೆಯಲ್ಲಿ ಆ ಮಾತುಗಳನ್ನು ಹೇಳಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ. ಅದನ್ನು ಬೆಳೆಸುವ ಅಗತ್ಯವಿಲ್ಲ. ನಾನೊಂದು, ಮತ್ತೊಬ್ಬರು ಇನ್ನೊಂದು ಉತ್ತರ ಕೊಡುವುದು ಅನಗತ್ಯ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಲಂಚ ಜಾಸ್ತಿ ಆಗಿದೆ. ವಿಧಾನಸೌಧಲ್ಲಿ ಕಡತಗಳು ವಿಲೇವಾರಿ ಆಗುತ್ತಿಲ್ಲ. ಆಡಳಿತ ಕುಸಿದಿದೆ. ಇನ್ನೂ ಚುನಾವಣೆಗೆ ಎರಡು ತಿಂಗಳಿದೆ. ಈಗಲೇ ಅಧಿಕಾರಿಗಳು ಕಚೇರಿಗೆ ಬಾಗಿಲು ಹಾಕಿದರೆ ಯಾರು ಕೆಲಸ ಮಾಡಬೇಕು. ₹6500 ಕೋಟಿ ಬಿಲ್‌ ಪಿಡಬ್ಲ್ಯೂಡಿಯಲ್ಲಿ ಬಾಕಿ ಇದೆ. ಅಗತ್ಯವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದರ ಬಗ್ಗೆ ಚರ್ಚೆ ಆಗಬೇಕು. ಅದಕ್ಕಾಗಿಯೇ ಪಕ್ಷದಿಂದ ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT