ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಂಇಆರ್‌ಸಿ ಅಧ್ಯಕ್ಷ ಸ್ಥಾನ: ಶಾಲಿನಿ ರಜನೀಶ್ ತೆರವಿಗೆ ಎಸ್‌.ಆರ್‌.ಹಿರೇಮಠ ಪತ್ರ

Published 24 ಮೇ 2024, 9:07 IST
Last Updated 24 ಮೇ 2024, 9:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕರ್ನಾಟಕ ಗಣಿಗಾರಿಕೆ ಪರಿಸರ ಮರುಸ್ಥಾಪನೆ ನಿಗಮದ (ಕೆಎಂಇಆರ್‌ಸಿ) ಅಧ್ಯಕ್ಷರಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಅವರು ಸರ್ವಾಧಿಕಾರಿ ಮತ್ತು ಸ್ವೇಚ್ಛಾಚಾರದ ಆಡಳಿತ ನಡೆಸುತ್ತಿದ್ದು, ಅವರನ್ನು  ಬದಲಿಸಿ, ಬೇರೊಬ್ಬರನ್ನು ನೇಮಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್‌.ಆರ್.ಹಿರೇಮಠ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಎಂ ಮತ್ತು ಕಾನೂನು ಸಚಿವರಿಗೆ ಬರೆದ ಪತ್ರದ ಕುರಿತು ಮಾಹಿತಿ ನೀಡಿದ ಅವರು, 2023ರ ಸೆಪ್ಟೆಂಬರ್‌ನಿಂದ ಶಾಲಿನಿ ರಜನೀಶ್ ಅವರು ಕೆಎಂಇಆರ್‌ಸಿಗೆ ಅಧ್ಯಕ್ಷರಾಗಿದ್ದಾರೆ, ಅಲ್ಲಿಂದೀಚೆಗೆ ಸಂಸ್ಥೆಯ ಕಾರ್ಯಚವಟಿಕೆಗಳಲ್ಲಿ ಕಳವಳಕಾರಿ ಬೆಳವಣಿಗೆಗಳಾಗಿವೆ ಎಂದರು.

‘ಶಾಲಿನಿ ಅವರು ಅಧ್ಯಕ್ಷರಾದ ಬಳಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸಿಬ್ಬಂದಿಯ ನೈತಿಕ ಸ್ಥೈರ್ಯ ಕುಸಿದಿದೆ. ಸಂಸ್ಥೆಯ ಮಹತ್ವದ ಸಿಬ್ಬಂದಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರೆ. ಇನ್ನೊಬ್ಬರು ಸುದೀರ್ಘ ರಜೆಯಲ್ಲಿ ತೆರಳಿದ್ದಾರೆ. ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಸುಪ್ರೀಂ ಕೋರ್ಟ್‌ ನೇಮಿಸಿರುವ ಮೇಲುಸ್ತುವಾರಿ ಪ್ರಾಧಿಕಾರದ (ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ) ತೀರ್ಮಾನಗಳನ್ನು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಹೋಗಿದೆ’ ಎಂದು ಹಿರೇಮಠ ದೂರಿದರು.

‘ಕೆಎಂಇಆರ್‌ಸಿಯಲ್ಲಿ ₹25 ಸಾವಿರ ಕೋಟಿ ನಿಧಿ ಸಂಗ್ರಹವಾಗಿದೆ. ಇದು ಗಣಿಗಾರಿಕೆಯಿಂದ ನಾಶವಾಗಿರುವ ಪರಿಸರ ಪುನಶ್ಚೇತನ ಮತ್ತು ಅಲ್ಲಿನ ಜನರ ಬದುಕನ ಪುನರುಜ್ಜೀವನಕ್ಕೆ ಮಾತ್ರ ಮೀಸಲು. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ 283 ಗ್ರಾಮಗಳಿಗೆ ಮಾತ್ರ ಬಳಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಒಂದು ವೇಳೆ ಖರ್ಚು ಮಾಡಿ ಉಳಿದ ದುಡ್ಡನ್ನು ಭವಿಷ್ಯದ ಪೀಳಿಗೆಗಾಗಿ ಉಳಿಸಬೇಕಾಗುತ್ತದೆ. ಆದರೆ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಸಲುವಾಗಿ ಮೇಲುಸ್ತುವಾರಿ ಪ್ರಾಧಿಕಾರದ ಅಧಿಕಾರವನ್ನು ಮೀರಿ ನಡೆಯುವ ದುಸ್ಸಾಹಸದಂತೆ ಕಾಣಿಸುತ್ತಿದೆ. ಇದನ್ನು ಸಮಾಜ ಪರಿವರ್ತನ ಸಮುದಾಯ, ಜನಸಂಗ್ರಾಮ ಪರಿಷತ್‌, ರಾಷ್ಟ್ರೀಯ ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣಾ ಸಮಿತಿ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ಮೂಲಕ ಉಗ್ರವಾಗಿ ವಿರೋಧಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಮುಖ್ಯಮಂತ್ರಿಗಳನ್ನು ಈ ನಿಗಮದ ಅಧ್ಯಕ್ಷರನ್ನಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ಮಾಡಲು ಕಳೆದ ವರ್ಷ ಪ್ರಯತ್ನ ನಡೆದಿತ್ತು. ಆದರೆ ನಮ್ಮ ಹೋರಾಟ ಹಾಗೂ ಕೆಲವು ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಈ ಪ್ರಸ್ತಾಪವನ್ನು ಕೈಬಿಡಲಾಯಿತು. ಶಾಸಕರು ಸಹ ಈ ನಿಧಿಯನ್ನು ದುರ್ಬಳಕೆ ಮಾಡಲು ಹೊಂಚು ಹಾಕುತ್ತಿರುವುದಕ್ಕೆ ನಿದರ್ಶನಗಳು ಸಿಗತೊಡಗಿವೆ. ಇದಕ್ಕೆ ಇದುವರೆಗೆ ಯಶಸ್ಸು ಸಿಕ್ಕಿಲ್ಲ ಎಂಬ ಸಮಾಧಾನ ಇದೆ. ಆದರೆ ನಿಧಿ ದುರ್ಬಳಕೆ ಯತ್ನ ನಡೆದರೆ ಸುಪ್ರೀಂ ಕೋರ್ಟ್‌ ಸುಮ್ಮನಿರುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಹೆಚ್ಚುವರಿ ಗ್ರಾಮಗಳ ಸೇರ್ಪಡೆ: ‘ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೆಎಂಇಆರ್‌ಸಿ ವ್ಯಾಪ್ತಿಗೆ ಗಣಿಬಾಧಿತ ಪ್ರದೇಶಗಳಲ್ಲದ ಗ್ರಾಮಗಳನ್ನೂ ಸೇರಿಸುತ್ತಿರುವುದು ಗಮನಕ್ಕೆ ಬಂದಿದೆ. ಕೆಎಂಇಆರ್‌ಸಿ ಮತ್ತು ಪ್ರಧಾನ ಮಂತ್ರಿ ಜನಕಲ್ಯಾಣ ನಿಧಿಗೆ ಸಂಬಂಧಿಸಿದಂತೆಯೂ ಅಧಿಕಾರಿಗಳಲ್ಲಿ ಗೊಂದಲವಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇದು ಸರಿಯಲ್ಲ. ಈ ನಿಧಿಯನ್ನು ಬೇರೆಡೆಗೆ ವರ್ಗಾಯಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸ್ವಯಂ ಪ್ರಕರಣ ದಾಖಲಿಸಿಕೊಂಡಿದೆ’ ಎಂದು ಎಸ್.ಆರ್‌.ಹಿರೇಮಠ ಹೇಳಿದರು.

ವಿವಿಧ ಸಂಘಟನೆಗಳ ಪ್ರಮುಖರಾಧ ಶ್ರೀಶೈಲ ಆಲ್ದಳ್ಳಿ, ಟಿ.ಎಂ.ಶಿವಕುಮಾರ್, ಸಯ್ಯದ್‌ ಹೈದರ್‌ ಇದ್ದರು.

‘ರೆಡ್ಡಿ ಬಿಜೆಪಿಗೆ ಸೇರ್ಪಡೆ–ಮತ್ತೆ ಅಕ್ರಮ ಗಣಿಗಾರಿಕೆ ಭೀತಿ’

‘ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿ ಸೇರಿರುವುದರಿಂದ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಮತ್ತೊಮ್ಮೆ ಗರಿಗೆದರುವ ಅಪಾಯ ಎದುರಾಗಿದೆ. ಈ ಹಿಂದೆ ಗಣಿಧಣಿಗಳ ದರ್ಪ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನನ್ನ ಕೊನೆಯ ಉಸಿರು ಇರುವ ತನಕ ಇಂತಹ ಪ್ರಯತ್ನಗಳಿಗೆ ಅವಕಾಶ ನೀಡದಂತೆ ಹೋರಾಟ ನಡೆಸುವೆ, ನನ್ನ ನಂತರವೂ ಇಷ್ಟೇ ಸಮರ್ಥವಾಗಿ ಹೋರಾಟ ನಡೆಸಲು ತಂಡ ಸಿದ್ಧವಾಗಿದೆ’ ಎಂದು ಎಸ್.ಆರ್ ಹಿರೇಮಠ ಹೇಳಿದರು.

ಡಿಎಂಎಫ್‌ಟಿಗೆ ಸಂಬಂಧ ಕಲ್ಪಿಸಲು ಯತ್ನ

‘ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ (ಡಿಎಂಎಫ್‌ಟಿ) ಮತ್ತು ಕೆಎಂಇಆರ್‌ಸಿಗೆ ಸಂಬಂಧ ಕಲ್ಪಿಸುವ ಯತ್ನವೂ ಅಧಿಕಾರಿಗಳ ಮಟ್ಟದಲ್ಲೇ ನಡೆಯುತ್ತಿದೆ. ಕೆಎಂಇಆರ್‌ಸಿ ನಿಧಿಯನ್ನು ಗಣಿಬಾಧಿತ ನಾಲ್ಕು ಜಿಲ್ಲೆಗಳ 283 ಗ್ರಾಮಗಳ ಹೊರತಾಗಿ ಬೇರೆಡೆ ಬಳಸುವಂತೆಯೇ ಇಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಇದರ ಬಗ್ಗೆ ಜಿಲ್ಲಾಡಳಿತಗಳಿಗೆ ತಿಳಿಸುವ ಪ್ರಯತ್ನ ನಮ್ಮಿಂದ ಆಗಿದೆ’ ಎಂದು ಎಸ್.ಆರ್‌.ಹಿರೇಮಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT